ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ನೀಡಿರುವ ರಾಜೀನಾಮೆ ಕೊನೆಗೂ ಅಂಗೀಕರಿಸಲು ಮುಂದಾಗಿರುವ ಎಚ್.ಡಿ.ದೇವೇಗೌಡರು ಹೊಸ ಅಧ್ಯಕ್ಷರ ತಲಾಷೆಯಲ್ಲಿ ತೊಡಗಿದ್ದಾರೆ.
ರಾಜ್ಯಾಧ್ಯಕ್ಷ ಜವಾಬ್ದಾರಿ ಯಾರಿಗೆ ಕೊಡಬೇಕು ಎಂಬುದರ ಬಗ್ಗೆ ಪಕ್ಷದ ಹಿಂದುಳಿದ ವರ್ಗಗಳ ಮುಖಂಡರಾದ ಮಧು ಬಂಗಾರಪ್ಪ, ರಮೇಶ್‌ಬಾಬು, ಅಮರ್‌ನಾಥ್, ವಿಧಾನಪರಿಷತ್ ಸದಸ್ಯ ವಿ.ಮನೋಹರ್ ಅವರೊಂದಿಗೆ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಸಮಾಲೋಚನೆ ನಡೆಸಿದರು.
ಶುಕ್ರವಾರದ ಸಮಾವೇಶದ ನಂತರ ಎಚ್.ವಿಶ್ವನಾಥ್ ಅವರೊಂದಿಗೂ ಚರ್ಚಿಸಿ ಹೊಸ ಅಧ್ಯಕ್ಷರ ನೇಮಕ ಮಾಡಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸಮಾವೇಶ: ಈ ಮಧ್ಯೆ, ಪಕ್ಷ ಸಂಘಟನೆ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ದಿನಾಂಕ ಹಾಗೂ ಸ್ಥಳ ನಿಗದಿಪಡಿಸಲು ಮುಖಂಡರಿಗೆ ದೇವೇಗೌಡರು ಸೂಚನೆ ನೀಡಿದ್ದಾರೆ.
ಎಚ್‌ಡಿಡಿ ಜತೆ ಸಿಎಂ ಚರ್ಚೆ: ಗ್ರಾಮ ವಾಸ್ತವ್ಯಕ್ಕೆ ರೈಲು ಮೂಲಕ ಪ್ರಯಾಣ ಮಾಡುವ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಕಚೇರಿಗೆ ಭೇಟಿ ನೀಡಿ ದೇವೇಗೌಡರ ಜತೆ ಚರ್ಚಿಸಿದರು. ಗ್ರಾಮ ವಾಸ್ತವ್ಯ ಸಂಬಂಧ ಸಲಹೆ ಪಡೆಯುವ ಜತೆಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಶುಕ್ರವಾರದ ಸಮಾವೇಶಕ್ಕೆ ಬರಲು ಸಾಧ್ಯವಾಗದ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.