ಬೆಂಗಳೂರು: “ಮಲ್ಲಿಕಾರ್ಜುನ ಖರ್ಗೆ, ಯಡಿಯೂರಪ್ಪ ನನ್ನ ಬಗ್ಗೆ ಲಘುವಾಗಿ ಮಾತನಾಡಲ್ಲ, ಆದ್ರೆ ಸಿದ್ದರಾಮಯ್ಯನವರು ಮಾತಾಡ್ತಾರೆ. ಜೆ.ಎಚ್.ಪಟೇಲ್‌ರಿಂದ ಜಗದೀಶ್‌ಶೆಟ್ಟರ್‌ವರೆಗೆ ಮುಖ್ಯಮಂತ್ರಿಗಳಾದವರು ವಿಧಾನಸೌಧದಲ್ಲಿ ನನ್ನ ಭಾವಚಿತ್ರ ತೆಗೆಸಿಹಾಕಲಿಲ್ಲ, ಸಿದ್ದರಾಮಯ್ಯ ತೆಗೆಸಿದರು. ಎಷ್ಟು ದಿನ ನೋವು ಸಹಿಸಿಕೊಳ್ಳಲಿ…?
ಇದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾತುಗಳು.
ಬೆಂಗಳೂರು ಪ್ರಸ್‌ಕ್ಲಬ್ ಹಾಗೂ ವರದಿಗಾರರ ಕೂಟದಿಂದ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಸಾಮಾನ್ಯ ರೈತನ ಮಗನಾಗಿದ್ದ ಕನ್ನಡಿಗನೊಬ್ಬ ಪ್ರಧಾನಿಯಾಗಿದ್ದ ಎಂಬ ಗೌರವವೂ ಇಲ್ಲದೆ ಕಾಂಗ್ರೆಸ್‌ನವರು ಕಳೆದ ಎರಡು ತಿಂಗಳಿನಿಂದ ನನ್ನ ಬಗ್ಗೆ ಏನೇನು ಮಾತನಾಡಿದ್ದಾರೆ ಎಂಬುದರ ಮಾಹಿತಿ ಪಡೆದು ಕನ್ನಡಿಗ ಮಾಜಿ ಪ್ರಧಾನಿಗೆ ಕರ್ನಾಟಕದಲ್ಲೇ ಗೌರವ ಕೊಡುವಂತಹ ಸೌಜನ್ಯ ಕಾಂಗ್ರೆಸ್‌ಗೆ ಇಲ್ಲ ಎಂಬುದನ್ನು ಅವರು ಹೇಳಿದ್ದಾರೆ. ಜತೆಗೆ ತಾವು ಹೇಗೆ ದೇವೇಗೌಡರನ್ನು ನಡೆಸಿಕೊಂಡಿದ್ದೇನೆ ಎಂಬುದನ್ನು ಹೇಳಿದ್ದಾರೆ ಅಷ್ಟೆ. ಇದರಲ್ಲಿ ಯಾವ ಔಚಿತ್ಯ, ವಿಶೇಷತೆಗಳೂ ಇಲ್ಲ. ವಿಶ್ಲೇಷಣೆಯ ಅಗತ್ಯವೂ ಇಲ್ಲ ಎಂದರು. ಮೋದಿ ಅವರು, ಯಾವುದೇ ರಾಜ್ಯಕ್ಕೆ ಹೋಗುವುದಿದ್ದರೂ ಅದಕ್ಕೆ ಮೊದಲು ಹಿನ್ನೆಲೆ ತಿಳಿದುಕೊಳ್ಳುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದರು.
ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಅವರು ಗೆದ್ದಾಗ ರಾಜೀನಾಮೆ ಕೊಡಲೂ ಹೋಗಿದ್ದೆ. ಆದರೆ ಮೋದಿ ಅವರೇ ಕರೆದು ಚುನಾವಣೆ ಸಂದರ್ಭದಲ್ಲಿ ಆಡಿದ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮ್ಮಂಥ ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ರಾಜೀನಾಮೆ ನೀಡಬೇಡಿ ಎಂದು ಮನವಿ ಮಾಡಿದರು. ಅದರಂತೆ ಸುಮ್ಮನಾದೆ. ನಂತರ ನಾಲ್ಕೈದು ಬಾರಿ ಭೇಟಿಯಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ಹೇಳಿದ್ದೆ. ಅವರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆಯೇ ಹೊರತು ಪ್ರತಿಕ್ರಿಯಿಸುವುದಿಲ್ಲ. ಹೀಗಾಗಿ ನಾವಿಬ್ಬರೂ ಬದಲಾಗಿಲ್ಲ ಎಂದು ಹೇಳಿದರು.
ಅಲ್ಲದೆ, ಪ್ರಧಾನಿ ಮೋದಿ ಅವರು ನನ್ನನ್ನು ಹೊಗಳುವುದೂ ಬೇಡ, ತೆಗಳುವುದೂ ಬೇಡ. ಕರ್ನಾಟಕದ ಬಗ್ಗೆ ಔದಾರ್ಯ ತೋರಿ ರಾಜ್ಯದ ಸಮಸ್ಯೆಗಳ ಬಗೆಹರಿಸಲು ಕೊಡುಗೆ ನೀಡಿದರೆ ಸಾಕು ಎಂದರು.
ಸಂಸತ್‌ಹಾಲ್‌ನಲ್ಲಿ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ನಮಸ್ಕಾರ ಹೇಳಿದರೆ ಪ್ರತಿ ನಮಸ್ಕಾರ ಹೇಳುವ ಸೌಜನ್ಯವನ್ನೂ ತೋರದ ಪ್ರಧಾನಿ ಚುನಾವಣೆಗೋಸ್ಕರ ಈ ರೀತಿ ಮಾಡುವ ಗಿಮಿಕ್ ಬಹಳ ದಿನ ನಡೆಯೋದಿಲ್ಲ.
– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ