ಯಾದಗಿರಿ: ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಗುರುತು ಇಲ್ಲದಿದ್ದರೂ ಮುಂಬರುವ ತಾಪಂ,ಜಿಪಂ ಚುನಾವಣೆಗಳಿಗೆ ಚುನಾವಣೆಗಳಿಗೆ ಭದ್ರ ಬುನಾದಿಯಾಗಿದೆ. ಜೆಡಿಎಸ್ ನಲ್ಲಿರುವ ಸಾಕಷ್ಟು ಯುವಕರು ಸೇವಾ ಮನೋಭಾವದಿಂದ ಸ್ಪರ್ಧೆಗಿಳಿಯುತ್ತಿದ್ದು, ಹಿರಿಯ ಮುಖಂಡರು ಅವಕಾಶ ನೀಡಿ ಸಹಕರಿಸಬೇಕು ಎಂದು ಯುವ ನಾಯಕ ಶರಣಗೌಡ ಕಂದಕೂರ ಹೇಳಿದರು.
ನಗರದ ಹೊರವಲಯದ ಇಂಪೀರಿಯಲ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ಜೆಡಿಎಸ್ ಗ್ರಾಪಂ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗ್ರಾಮದ ಹಲವು ಅಭಿವೃದ್ಧಿಯ ಕನಸುಕಟ್ಟಿಕೊಂಡು ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ, ಸಮಸ್ಯೆಗಳ ಪರಿಹಾರಕ್ಕೆ ಗ್ರಾಪಂನಲ್ಲಿ ನಮ್ಮ ಅಭ್ಯರ್ಥಿಗಳು ಇದ್ದರೆ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಗ್ರಾಪಂ ಆಡಳಿತದ ಸಂಪರ್ಕಕೊಂಡಿಯಾಗಿದ್ದು, ಇನ್ನು ಎರಡುವರೆ ವರ್ಷ ಶಾಸಕರ ಅವಧಿ ಯಿದೆ. ಚುನಾವಣೆ ಮುಗಿದ ತಕ್ಷಣವೇ ಹೊಸ ವರ್ಷದಲ್ಲಿ ತಾಲೂಕಿನ 34 ಗ್ರಾಪಂಗಳಿಗೆ ತಲಾ100 ಮನೆಗಳ ನಿರ್ಮಾಣದ ಯೋಜನೆ ಹಮ್ಮಿಕೊಳ್ಳುವ ಗುರಿಯಿದೆ. ಅಲ್ಲದೇ ಜಲಜೀವನ ಯೋಜನೆಯಡಿ 18 ಹಳ್ಳಿಗಳುಆಯ್ಕೆಯಾಗಿದ್ದು, ಅಂದಾಜು 17 ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗದ ಮನೆ-ಮನೆಗೆ ನೀರು ಕೊಡುವ ಯೋಜನೆ ಬರಲಿದೆ ಎಂದರು.
ಮತಕ್ಷೇತ್ರದ 33 ಗ್ರಾಪಂಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿದೆ. ಹಿಂದೆ ಯಾರು ಏನು ಮಾಡಿದ್ದಾರೆ? ಎನ್ನುವ ಬಗ್ಗೆ ನಾವು ಟೀಕೆಮಾಡುವುದು ಬೇಡ. ನಾವು ನಮ್ಮ ಕೆಲಸ ಮಾಡೋಣ ಎಂದವರು, ಪ್ರತಿಯೊಬ್ಬ ಮುಖಂಡರು ಗ್ರಾಪಂ ಮಟ್ಟದಲ್ಲಿ ಅಭ್ಯರ್ಥಿಗಳ ಪರ ಒಗ್ಗಟ್ಟಾಗಿ ಮತ ಕೇಳಬೇಕು ಎಂದರು.
ಮುಖಂಡರಾದ ಜಿ. ತಮ್ಮಣ್ಣ ಮಾತನಾಡಿದರು, ನಿತ್ಯಾನಂದ ಸ್ವಾಮಿ ಹಂದರಕಿ, ಸುಭಾಷ ಚಂದ್ರ ಕಟಕೆ, ಅಂಬ್ರೇಷ ರಾಠೊಡ, ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಸೈಯದ್ ಅಲೀ ಹುಸೇನ್ ಕಡೇಚೂರ ಮಾತನಾಡಿದರು. ಗುರುಮಠಕಲ್ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಮಾಜಿ ಅಧ್ಯಕ್ಷ ಬಾಲಪ್ಪ ನೀರೆಟಿ, ಕಿಷ್ಟಾರೆಡ್ಡಿ ಪಾಟೀಲ್, ತಾಪಂ ಅಧ್ಯಕ್ಷ ಈಶ್ವರ ನಾಯಕ, ಸಹಕಾರ ಪತ್ತಿನ ಸಹಕಾರದ ಅಧ್ಯಕ್ಷ ಸುದರ್ಶನ ಪಾಟೀಲ್ ಜೈಗ್ರಾಂ, ಭೋಜಣ್ಣ ಗೌಡ, ಪ್ರಕಾಶ ನೀರೆಟಿ, ಅಜಯರೆಡ್ಡಿ , ಅನಿಲ ಹೆಡಗಿಮುದ್ರಾ, ಅಯುಬ್ ಪುಟಪಾಕ್, ಮೈಲಾರಪ್ಪ ಜಾಗೀರದಾರ, ಶಿವಪ್ಪ ಯರಗೋಳ, ಮಾರ್ಥಂಡ ಮಾನೇಗಾರ್, ಶೇಖರಗೌಡ, ತಾಯಪ್ಪ ಬದ್ದೇಪಲ್ಲಿ, ತಾಪಂ ಸದಸ್ಯರಾದ ನರಸಪ್ಪ, ನಾಗೇಶ ಚಂಡರಕಿ, ಗಿರಿನಾಥರೆಡ್ಡಿ ಇದ್ದರು.
ಇದೇ ವೇಳೆ ಕಡೇಚೂರ ಗ್ರಾಮದ ಕಾಂಗ್ರೆಸ್ ಮುಖಂಡ ಸೈಯದ ಹಮೀದ, ಸೈಯದ ಅಲೀ ಹಸನ್ ಹಾಗೂ ಬಿಜೆಪಿಯ ಜಮಾಲ್ ಹುಸೈನ್ ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಶಾಸಕ ಸ್ಥಾನ ಮತದಾರರು ನೀಡಿದ ಭಿಕ್ಷೆ :
ಶಾಸಕ ನಾಗನಗೌಡ ಕಂದಕೂರ ಅವರು ಶಾಸಕರಾಗಿರುವುದು ಗುರುಮಠಕಲ್ ಕ್ಷೇತ್ರದ ಜನರು ನೀಡಿದ ಭಿಕ್ಷೆಯಾಗಿದೆ. ಯಾವತ್ತು ಮತದಾರರ ಸಮಸ್ಯೆಗಳಿಗೆಪ್ರಾಮಾಣಿಕವಾಗಿ ಸ್ಪಂದಿಸಿ ಪರಿಹರಿಸುವ ಕಾರ್ಯ ಮಾಡಲಾಗುತ್ತಿದ್ದು, ನಾವು ಎಂದಿಗೂ ದ್ವೇಷದ ರಾಜಕೀಯ ಮಾಡಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 3 ತಿಂಗಳಿಂದ ಅಭಿವೃದ್ಧಿಗೆ ಅನುದಾನ ಬಂದಿಲ್ಲ. ಬಿಜೆಪಿಗರು ಯಾರಾದರೂ ಕ್ಷೇತ್ರಕ್ಕೆ ಅನುದಾನ ನಿಲ್ಲಿಸಿರುವ ಬಗ್ಗೆ ಕೇಳಿದ್ದಾರಾ? ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ಕೇಳಿದರೆ ಅವರಿಗೆ ಉತ್ತರ ಕೊಡಲು ಮುಖವಿಲ್ಲ. –
ಶರಣಗೌಡ ಕಂದಕೂರ, ಯುವ ಮುಖಂಡ