ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಬಂಡಾಯದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.
ಕ್ಷೇತ್ರದ ಎಲ್ಲ ಕಡೆಯೂ ಬಂಡಾಯ ಅಭ್ಯರ್ಥಿ ಎಂದೇ ಪ್ರಚಾರ ಆರಂಭಿಸಿದ್ದಾರೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿ ಯಾಗಿದ್ದ ತಗ್ಗಹಳ್ಳಿ ವೆಂಕಟೇಶ್ ವರಿಷ್ಠರ ಮೇಲೆ ಟಿಕೆಟ್ ನೀಡುವಂತೆ ಒತ್ತಾಯಿಸಿ ದ್ದರು. ಆದರೆ, ವರಿಷ್ಠರು ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಟಿಕೆಟ್ ಘೋಷಣೆ ಮಾಡಿದರು. ಇದರಿಂದ ಬೇಸತ್ತ ತಗ್ಗಹಳ್ಳಿ ವೆಂಕಟೇಶ್ ಸ್ವಪಕ್ಷದ ವಿರುದ್ಧವೇ ಬಂಡಾಯ ಸಾರಿದ್ದಾರೆ.
ಬಂಡಾಯ ಸ್ಪರ್ಧೆ ಖಚಿತ: ಕೊತ್ತತ್ತಿ ಒಂದು ಮತ್ತು ಎರಡನೇ ವೃತ್ತದಲ್ಲಿ ಪ್ರಬಲ ಮುಖಂಡನಾಗಿ ಗುರುತಿಸಿಕೊಂಡಿರುವ ವೆಂಕಟೇಶ್, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧಿಸುವುದು ಖಚಿತ. ಕೊನೆವರೆಗೂ ವರಿಷ್ಠರ ನಿರ್ಧಾರ ಬದಲಾವಣೆಗಾಗಿ ಕಾಯುತ್ತೇನೆ. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಪ್ರಚಾರ ನಡೆಸುತ್ತಿದ್ದಾರೆ.
ಶಕ್ತಿ ಪ್ರದರ್ಶನಕ್ಕೆ ಸಜ್ಜು: ಶ್ರೀರಂಗಪಟ್ಟಣ ಕ್ಷೇತ್ರ ಸುತ್ತುತ್ತಿರುವ ವೆಂಕಟೇಶ್, ಜೆಡಿಎಸ್ ಪಕ್ಷಕ್ಕೆ ಬಂಡಾ ಯದ ಬಿಸಿ ಮುಟ್ಟಿಸುವ ಹಿನ್ನೆಲೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಫೆ.12ರಂದು ಮಂಡ್ಯ ತಾಲೂಕಿನ ಸಂತೆಕಸಲಗೆರೆ ಗ್ರಾಮದ ಭೂಮಿ ಸಿದ್ದೇಶ್ವರಸ್ವಾಮಿ ಆವರಣದಲ್ಲಿ ಬೃಹತ್ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ. ಸಭೆ ಮೂಲಕ ತಮ್ಮ ಶಕ್ತಿ ಪ್ರದರ್ಶನ ತೋರಿಸಲು ಮುಂದಾಗಿದ್ದಾರೆ.
Related Articles
10 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ: ಕ್ಷೇತ್ರಾದ್ಯಂತ ಸಭೆಗೆ ಸುಮಾರು 10 ಸಾವಿರ ಮಂದಿ ಭಾಗಿಯಾಗುವ ಸಾಧ್ಯತೆ ಇದೆ. ಎಲ್ಲ ಖರ್ಚು- ವೆಚ್ಚಗಳನ್ನು ಕಾರ್ಯಕರ್ತರು, ಮುಖಂಡರು ವಹಿಸಿಕೊಂಡಿದ್ದಾರೆ. ಯಾವುದೇ ನಿರೀಕ್ಷೆ ಇಲ್ಲದೆ, ಸ್ವಯಂ ಪ್ರೇರಿತರಾಗಿ ಸಭೆಗೆ ಭಾಗವಹಿಸುವಂತೆ ಕರೆ ನೀಡುತ್ತಿದ್ದಾರೆ. ಈಗಾಗಲೇ ಆರತಿ ಉಕ್ಕಡದ ದೇವಸ್ಥಾನದಲ್ಲಿ ಇತ್ತೀಚೆಗೆ ಕಾರ್ಯಕರ್ತರೇ ಸಭೆ ನಡೆಸಿ ವೆಂಕಟೇಶ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಅದೇ ಮಾದರಿಯಲ್ಲಿ ಕಾರ್ಯಕರ್ತರು, ಬೆಂಬಲಿಗರು, ಮುಖಂಡರ ಸಹಕಾರ ಕೋರಲಿದ್ದಾರೆ.
ಬಂಡಾಯದಿಂದ ಜೆಡಿಎಸ್‌ಗೆ ಹಿನ್ನೆಡೆ : ತಗ್ಗಹಳ್ಳಿ ವೆಂಕಟೇಶ್ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದರಿಂದ ಜೆಡಿಎಸ್‌ಗೆ ಸಾಕಷ್ಟು ಹಿನ್ನೆಡೆಯಾಗುವ ಸಾಧ್ಯತೆ ಇದೆ. ಇದು ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ಪರ್ಧೆ ಮೇಲೆ ಪರಿಣಾಮ ಬೀರಲಿದೆ. ಜೆಡಿಎಸ್ ಮತಗಳು ಛಿದ್ರವಾಗುವ ಸಾಧ್ಯತೆ ಇದೆ. ಬಂಡಾಯ ದಿಂದ ಮತಗಳು ಹಂಚಿಕೆಯಾಗಿ ಅಭ್ಯರ್ಥಿಗಳು ಸೋತಿರುವುದು ಇತಿಹಾಸದ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ಶ್ರೀರಂಗಪಟ್ಟಣ ಕ್ಷೇತ್ರದ ಅರೆಕೆರೆ ಹೋಬಳಿ ಬಿಟ್ಟರೆ ಹೆಚ್ಚು ಮತಗಳಿರುವ ಹೋಬಳಿ ಕೊತ್ತತ್ತಿ ಒಂದು ಮತ್ತು ಎರಡನೇ ವೃತ್ತ. ಇಲ್ಲಿ ಅತಿ ಹೆಚ್ಚು ಜೆಡಿಎಸ್ ಮತಗಳಿವೆ.
ಬಂಡಾಯದಿಂದ ಮತಗಳು ಛಿದ್ರ : ಕಳೆದ 15 ವರ್ಷಗಳಿಂದ ಸತತವಾಗಿ ಜೆಡಿಎಸ್ ಶ್ರೀರಂಗಪಟ್ಟಣದಲ್ಲಿ ಗೆಲುವು ಸಾಧಿಸುತ್ತಾ ಬಂದಿದೆ. ಈಗ ಬಂಡಾಯದಿಂದ ಮತಗಳು ಛಿದ್ರಗೊಂಡರೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಯೇ ಹೆಚ್ಚಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಬಿಜೆಪಿಯಿಂದ ಇಂಡುವಾಳು ಎಸ್.ಸಚ್ಚಿದಾನಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ. ತಗ್ಗಹಳ್ಳಿ ವೆಂಕಟೇಶ್ ಜೆಡಿಎಸ್ ಮತಗಳನ್ನು ಪಡೆದುಕೊಂಡರೆ, ಇಂಡುವಾಳು ಸಚ್ಚಿದಾನಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದರಿಂದ ಕೈ ಮತಗಳ ಕಸಿಯುವ ಪ್ರಯತ್ನದಲಿದ್ದಾರೆ. ಇದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಗೆಲುವು ನಿರ್ಧರಿಸಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ.
ಈಗಾಗಲೇ ಬಿಜೆಪಿ, ಕಾಂಗ್ರೆಸ್, ರೈತಸಂಘ ಹಾಗೂ ಎಎಪಿ ಪಕ್ಷಗಳಿಂದಲೂ ಆಹ್ವಾನ ನೀಡಿದ್ದಾರೆ. ಆದರೆ, ನಾನು ಯಾವ ಪಕ್ಷವನ್ನೂ ಸೇರಲ್ಲ. ಕೊನೆವರೆಗೂ ವರಿಷ್ಠರ ನಿರ್ಧಾರದ ಮೇಲೆ ಕಾಯುತ್ತೇನೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. – ತಗ್ಗಹಳ್ಳಿ ವೆಂಕಟೇಶ್, ಜೆಡಿಎಸ್ ಮುಖಂಡ
– ಎಚ್.ಶಿವರಾಜು