ಬೆಂಗಳೂರು: ಮಳೆಯ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಪಂಚರತ್ನ ರಥಯಾತ್ರೆ ಗುರುವಾರದಿಂದ ರಾಮನಗರ ಜಿಲ್ಲೆ ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಪುನಃ ಆರಂಭವಾಗುತ್ತಿದೆ.
ಡಿ.11ರಿಂದ ಯಾತ್ರೆ ಆರಂಭವಾಗಬೇಕಿತ್ತಾದರೂ ಮಳೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಡಿ. 15ರಂದು ಮಾಗಡಿ, 16ರಂದು ರಾಮನಗರ, 17ರಂದು ಹಾರೋಹಳ್ಳಿ, 18ರಂದು ಕನಕಪುರ, 19ರಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ.
ಮಾಗಡಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯ ಮತ್ತು ಶ್ರೀ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪಟ್ಟಣದ ಜೆಡಿಎಸ್ ಭವನದಲ್ಲಿ ಬೃಹತ್ ಸಭೆ ನಡೆಯಲಿದೆ. ಅದಾದ ಮೇಲೆ ಶ್ರೀ ಕಲ್ಯಾ ಗೇಟ್ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ನಡೆಯಲಿದೆ. ಅಂತಿಮವಾಗಿ ಮಾಗಡಿಯ ಕೋಟೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಡಿಸೆಂಬರ್ 20ರಂದು ಮಂಡ್ಯ ಜಿಲ್ಲೆಗೆ ರಥಯಾತ್ರೆ ಪ್ರವೇಶ ಮಾಡಲಿದ್ದು, 20ರಂದು ಮಳವಳ್ಳಿ, 21ಕ್ಕೆ ಮದ್ದೂರು, 22ಕ್ಕೆ ಮಂಡ್ಯ, 23ಕ್ಕೆ ಶ್ರೀರಂಗಪಟ್ಟಣ, 24ಕ್ಕೆ ಪಾಂಡವಪುರ, 25ಕ್ಕೆ ಕೆ.ಆರ್‌ಪೇಟೆ, 26ಕ್ಕೆ ನಾಗಮಂಗಲ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಎಚ್‌ಡಿಕೆ ಹುಟ್ಟುಹಬ್ಬ:
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ನಿಮಿತ್ತ ಡಿ. 16ರಂದು ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೆಗೌಡರು ಸೇರಿ ಕುಟುಂಬ ಸದಸ್ಯರು ಭಾಗಿಯಾಗಲಿದ್ದಾರೆ.