ಹಾಸನ: ಜೆಡಿಎಸ್‌ನ ಭದ್ರಕೋಟೆ. ಈ ಕ್ಷೇತ್ರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 1991ರಿಂದ 2014ರ ವರೆಗೆ 5 ಸಲ ಪ್ರತಿನಿಧಿಸಿದ್ದರು. 2019ರ ಚುನಾವಣೆಯಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದಿದ್ದರು. ಇದಕ್ಕೂ ಮುನ್ನ ಈ ಕ್ಷೇತ್ರವನ್ನು ಕಾಂಗ್ರೆಸ್ ಹಾಗೂ ಜನತಾಪಕ್ಷದ ಸದಸ್ಯರು ಪ್ರತಿನಿಧಿಸಿದ್ದರು. ಆದರೆ ದೇವೇಗೌಡರ ಸ್ಪರ್ಧೆ ಬಳಿಕ ಜೆಡಿಎಸ್‌ನ ಭದ್ರಕೋಟೆಯಾಗಿದೆ.
ಮಂಡ್ಯ: ಜೆಡಿಎಸ್ ಹಾಗೂ ಕಾಂಗ್ರೆಸ್ ಈ ಎರಡೂ ಪಕ್ಷಗಳಿಗೂ ಭದ್ರನೆಲೆ. ಬಿಜೆಪಿ ಇಲ್ಲಿ ಖಾತೆಯನ್ನೇ ತೆರೆಯದಿದ್ದರೂ ಕಳೆದ ಲೋಕಸಭಾ ಚುನಾವಣೆ
ಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಜಯ ಗಳಿಸಿದ್ದರು. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳಿಗೂ ಬಹುತೇಕ ಸಮಪಾಲು ಫಲಿತಾಂಶ ನೀಡಿದ ಕ್ಷೇತ್ರವಿದು. 1996, 1998, 2009, 2014 ಹಾಗೂ 2018ರ ಚುನಾವಣೆಯಲ್ಲಿ ಜೆಡಿಎಸ್ ಕೈಹಿಡಿದಿದೆ. ಅದಕ್ಕೂ ಮುನ್ನ ಪಿಎಸ್‌ಪಿ, ಜನತಾ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಬೆಂಗಳೂರು ಗ್ರಾಮಾಂತರ: ಇದು ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರ. ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಕನಕಪುರ ಲೋಕಸಭಾ ಕ್ಷೇತ್ರವಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 2002ರಲ್ಲಿ ಇಲ್ಲಿಂದ ಒಮ್ಮೆ ಆಯ್ಕೆಯಾಗಿದ್ದರು. ಜತೆಗೆ ಎಚ್.ಡಿ.ಕುಮಾರಸ್ವಾಮಿ ಅವರು 1996 ಹಾಗೂ 2009ರಲ್ಲಿ ಆಯ್ಕೆಯಾಗಿದ್ದರು. ಆದರೆ 2013ರಿಂದ ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ತುಮಕೂರು: ಪಿಎಸ್‌ಪಿ ಹಾಗೂ ಜನತಾದಳದ ಅಭ್ಯರ್ಥಿಗಳು ಒಮ್ಮೆ ಆಯ್ಕೆಯಾಗಿದ್ದನ್ನು ಹೊರತುಪಡಿಸಿದರೆ ಇಲ್ಲಿಂದ 5 ಸಲ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದ ಚುನಾವಣೆಗಳಲ್ಲಿ ಕಾಂಗ್ರೆಸ್‌ನದ್ದೇ ಪಾರುಪತ್ಯ. ಲಿಂಗಾಯತರು- ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರವಾಗಿದ್ದರೂ ಕಳೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಲ್ಲಿಂದ ಸ್ಪರ್ಧಿಸಿ ಸೋತಿದ್ದರು.