ಹುಬ್ಬಳ್ಳಿ: ಬಿಜೆಪಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಾ.ರಾ. ಮಹೇಶ ಅವರಿಗೆ ಹೊಟ್ಟೆಕಿಚ್ಚಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿಯವರ ಕುಟುಂಬ ಸರ್ಕಾರದ ಹಲವು ಉನ್ನತ ಹುದ್ದೆಯಲ್ಲಿದ್ದರೂ ಸಹ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿರಲಿಲ್ಲ. ಯಾವುದೇ ರೀತಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಬಿಜೆಪಿ ಅವರ ಅಭಿವೃದ್ಧಿ ಕಾರ್ಯ ಮಾಡುತ್ತಿರುವುದು ಅವರಿಗೆ ಸಹಿಸಲಾಗುತ್ತಿಲ್ಲ ಎಂದರು.
ಕೆಂಪೆಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರನ್ನು ಆಮಂತ್ರಿಸಿಲ್ಲ ಎಂಬುದು ಸುಳ್ಳು. ಸ್ವತಃ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ಮಾಡಿದ್ದಾರೆ. ಆದರೂ ಅವರು ಬಂದಿಲ್ಲ. ಯಾಕೆ ಬಂದಿಲ್ಲ ಎಂದು ಗೊತ್ತಿಲ್ಲ ಎಂದರು.
ಇನ್ನೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿಯವರ ನೆರಳು ತಾಕಿದೆ. ಪಾದಯಾತ್ರೆಯಲ್ಲಿ ಅವರೊಂದಿಗೆ ಭಾಗವಹಿಸಿದಾಗಿನಿಂದ ಅವರು ರಾಹುಲ್ ಗಾಂಧಿಯವರ ಹಾಗೇ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಕೇಳುತ್ತಿದ್ದು, ಕಳೆದ 50 ವರ್ಷದಲ್ಲಿ ಮಾಡದ ಅಭಿವೃದ್ಧಿ ಕಾರ್ಯ ಕೇವಲ 7 ವರ್ಷದಲ್ಲಿ ಬಿಜೆಪಿ ಮಾಡಿದೆ ಎಂದು ತಿಳಿಸಿದರು.
Related Articles
ಕಾಂಗ್ರೆಸ್ ದೇಶದಲ್ಲಿ ಏನು ಮಾಡಿಲ್ಲ ಎಂಬ ಕಾರಣಕ್ಕೆ ಜನರು ಅವರನ್ನು ಕಡೆಗಣಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದೆ ಎಂದರು.
ಮೈಸೂರಿನಲ್ಲಿ ಶಾಸಕ ತನ್ವೀರ ಸೇಟ್ ಟಿಪ್ಪು ಪ್ರತಿಮೆ ಸ್ಥಾಪಿಸಿದರೆ ಅದಕ್ಕೆ ಬೆಂಬಲ ನೀಡಿದವರಿಗೂ ಜನರ ತಕ್ಕ ಉತ್ತರ ನೀಡುತ್ತಾರೆ. ಪ್ರತಿಮೆ ಸ್ಥಾಪನೆಗೆ ಸರ್ಕಾರದ ಅನುಮತಿ ಬೇಕಾಗುತ್ತದೆ. ಅದಕ್ಕೆ ನಮ್ಮ ವಿರೋಧವಿದೆ. ಟಿಪ್ಪು ಒಬ್ಬ ಮತಾಂಧ, ಹಿಂದೂ ವಿರೋಧಿ, ದೇಶ ದ್ರೋಹಿ ಹಾಗೂ ಕನ್ನಡ ವಿರೋಧಿ ಎಂಬುವುದು ಪಕ್ಷದ ಸ್ಪಷ್ಟ ನಿಲುವಾಗಿದೆ. ರಾಜಕೀಯ ತೃಷ್ಟೀಕರಣಕ್ಕಾಗಿ ಕಾಂಗ್ರೆಸ್ ನವರು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೆಂಪೆಗೌಡ ಮೂರ್ತಿ ಅನಾವರಣ ಕಾರ್ಯ ಕ್ರಮಕ್ಕೆ ಎಚ್.ವಿಶ್ವನಾಥ ಬಾರದಿರುವ ಕಾರಣಕ್ಕೆ ಅವರು ಹಾಗೇ ಮಾತನಾಡಿದ್ದಾರೆ. ಅವರಿಗೆ ಆಮಂತ್ರಣ ನೀಡಿದರು ಸಹ ಬಂದಿಲ್ಲ. ಯಾಕೆ ಬಂದಿಲ್ಲ ಎಂದು ಪಕ್ಷ ಪರಿಶೀಲಿಸುತ್ತದೆ ಬಳಿಕ ಅವರು ಸರಿಪಡಿಸಿಕೊಳ್ಳುತ್ತಾರೆ ಎಂದು ಎಚ್ ವಿಶ್ವನಾಥ ಅವರು ಕೆಂಪೆಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಬಿಜೆಪಿದಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.