Advertisement

ಚುನಾವಣೆಗೆ ಜೆಡಿಎಸ್‌ ರಣಕಹಳೆ ; ಅಪಾರ ಜನಸ್ತೋಮ ಸಮ್ಮುಖದಲ್ಲಿ ಜನತಾ ಜಲಧಾರೆ ಸಮಾರೋಪ

02:08 AM May 14, 2022 | Team Udayavani |

ಬೆಂಗಳೂರು: ಸುಮಾರು ಒಂದು ತಿಂಗಳಿಂದ ರಾಜ್ಯಾದ್ಯಂತ ಸಂಚರಿಸಿ ರಾಜಧಾನಿ ತಲುಪಿದ ಜೆಡಿಎಸ್‌ನ ಕನಸಿನ ಕೂಸು “ಜನತಾ ಜಲಧಾರೆ ರಥಯಾತ್ರೆ’ಗೆ ನಗರದ ಹೆಬ್ಟಾಗಿಲಲ್ಲಿ ಶುಕ್ರವಾರ ಭವ್ಯ ಸ್ವಾಗತ ದೊರೆಯಿತು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಲಕ್ಷಾಂತರ ರೈತರ ಸಮ್ಮುಖದಲ್ಲಿ ಪ್ರಾದೇಶಿಕ ಪಕ್ಷವು 2023ರ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿಸಿತು.

Advertisement

ರಾಜ್ಯದ ನಾನಾ ಭಾಗಗಳಿಂದ ಬಂದು ಕಿಕ್ಕಿರಿದು ತುಂಬಿದ್ದ ಅಪಾರ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ಮಾತನಾಡಿದ ನಾಯಕರು, “ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಈ ಐತಿಹಾಸಿಕ ಕಾರ್ಯಕ್ರಮವೇ ಹೆಗ್ಗುರುತು. ಧೂಳಿನಿಂದ ಫಿನಿಕ್ಸ್‌ನಂತೆ ಮತ್ತೆ ಎದ್ದು ಬರಲಿದ್ದೇವೆ’ ಎಂದು ತಮ್ಮ ಎದುರಾಳಿ ಪಕ್ಷಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ನೆಲಮಂಗಲದ ಬಾವಿಕೆರೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, “ಜೆಡಿಎಸ್‌ ಕತೆ ಮುಗಿದೇ ಹೋಯಿತು ಎಂದು ಕೆಲವರು ಹೇಳುತ್ತಾರೆ. ಆದರೆ, ಧೂಳಿನಿಂದ ಮತ್ತೆ ಫಿನಿಕ್ಸ್‌ನಂತೆ ನಾನು ಎದ್ದು ಬರುತ್ತೇನೆ. ಇದಕ್ಕೆ ನಿಮ್ಮೆಲ್ಲರ (ಜನರ) ಆಶೀರ್ವಾದ ಬೇಕು’ ಎಂದು ಮನವಿ ಮಾಡಿದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮಾತನಾಡಿ, “ರಾಷ್ಟ್ರದಲ್ಲಿ ರೈತರಿಗೆ ಹೆಚ್ಚು ಶಕ್ತಿ ನೀಡಿದ್ದರೆ ಅದು ಜೆಡಿಎಸ್‌ ಮಾತ್ರ. ನಾನು ಪ್ರಧಾನಿಯಾಗಿದ್ದ ಹತ್ತು ತಿಂಗಳಲ್ಲಿ ಏನು ಮಾಡಿದೆ ಮತ್ತು ಅದರ ಸಾಮರ್ಥ್ಯ ಹಾಗೂ ಪರಿಣಾಮಗಳು ಏನು ಎನ್ನುವುದನ್ನು ಇತಿಹಾಸವೇ ಹೇಳುತ್ತದೆ. ಆ ಬಗ್ಗೆ ನಾನು ಮಾತನಾಡುವುದಿಲ್ಲ. ಈ ರಥಯಾತ್ರೆಯಿಂದಲೇ ನಮ್ಮ ಹೋರಾಟ ಆರಂಭವಾಗಿದೆ. ಜಲಧಾರೆಯು ಈ ಸಮಾವೇಶದ ಮೂಲಕ ಜನಧಾರೆಯಾಗಿದೆ. ಮುಂದೆ ಮನೆ-ಮನೆಗೆ ಜಲಧಾರೆ ಹರಿಯುವ ಮೂಲಕ ಜನತಾ ಪರ್ವ ಶುರುವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಬಂಡೆಪ್ಪ ಕಾಶೆಂಪುರ್‌, ಎಚ್‌.ಕೆ. ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ, ಅನಿತಾ ಕುಮಾರಸ್ವಾಮಿ, ಪ್ರಜ್ವಲ್‌ ರೇವಣ್ಣ, ನಿಖೀಲ್‌ ಕುಮಾರಸ್ವಾಮಿ, ಎಸ್‌.ಎಲ್‌. ಭೋಜೇಗೌಡ‌ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next