ಪಾವಗಡ: ಜನತಾ ಜಲಧಾರೆ ಕಾರ್ಯಕ್ರಮ ಜೆಡಿಎಸ್ ರಾಷ್ಟೀಯ ಅಧ್ಯಕ್ಷ ಎಚ್.ಡಿ.ದೇವೇ ಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಕನಸಿನ ಯೋಜನೆಯಾಗಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.
ತಾಲೂಕಿನ ರಾಜವಂತಿ ಗ್ರಾಮದಲ್ಲಿ ಜನತಾ ಜಲಧಾರೆ ರಥೋತ್ಸವಕ್ಕೆ ಅದ್ದೂರಿ ಸ್ವಾಗತ ನೀಡಿದ ಬಳಿಕ ಮಾತನಾಡಿದ ಅವರು, ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಜನತಾ ಜಲಧಾರೆ ರಥ ಸಂಚಾರ ಮಾಡಲಿದ್ದು, ರಾಜವಂತಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ, ಪಟ್ಟಣದಲ್ಲಿ ಶನಿಮಹಾತ್ಮ ದೇವ ಸ್ಥಾನ, ಶಿರಾ ರಸ್ತೆಯಲ್ಲಿ ಮಸೀದಿ ಹಾಗೂ ಚರ್ಚಿ ನಲ್ಲೂ ಕೂಡ ಜನತಾ ಜಲಧಾರೆ ಯಶಸ್ವಿಯಾಗುವ ನಿಟ್ಟಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು. ಒಟ್ಟಾಗಿ ಹೆಜ್ಜೆ ಹಾಕಬೇಕಿದೆ: ನಾಗಲಮಡಿಕೆಯ ಅಂತ್ಯಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಉತ್ತರ ಪಿನಾಕಿನ ನದಿಗೆ ವಿಶೇಷ ಪೂಜೆ ಸಲ್ಲಿಸಿ ಕಳಶಕ್ಕೆ ನದಿಯ ನೀರನ್ನ ತುಂಬಿ, ನಂತರ ಹೊಸಕೋಟೆಯಲ್ಲಿ ಜಲಧಾರೆ ರಥ ಸಂಚರಿಸಲಿದೆ ಎಂದರು.
ತಾಲೂಕಿಗೆ ಭದ್ರ ಮೇಲ್ದಂಡೆ, ಎತ್ತಿನಹೊಳೆ ಯೋಜನೆಯಡಿ ನೀರು ಹಂಚಿಕೆಯಾಗಿದೆ. ಆದರೆ ಹಂಚಿಕೆ ಮಾಡಿರುವ ನೀರು ಸಾಕಾಗುವುದಿಲ್ಲ. ಸದಾ ಬರಗಾಲದಿಂದ ಕೂಡಿರುವ ತಾಲೂಕಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸುವುದು ಪಕ್ಷದ ಗುರಿಯಾಗಿದೆ ಎಂದು ಹೇಳಿದರು.
15 ದಿನ ರಥೋತ್ಸವ ಸಾಗಲಿದೆ: ಜೆಡಿಎಸ್ ಜಿಲ್ಲಾ ಅಧ್ಯಕ್ಷ ಆರ್.ಸಿ.ಅಂಜಿನಪ್ಪ ಮಾತನಾಡಿ, ಜಿಲ್ಲೆಯಲ್ಲಿ 15 ದಿನ ರಥೋತ್ಸವ ಸಾಗಲಿದೆ. ನೇತ್ರಾವತಿ, ಎತ್ತಿನಹೊಳೆಯಿಂದ ಆಗಮಿಸಿದ ರಥೋತ್ಸವ ತಾಲೂಕಿನಲ್ಲಿ ಸಾಗುತ್ತಿದ್ದು, ಎತ್ತಿನಹೊಳೆ ರಥೋತ್ಸವ ಚಿಕ್ಕನಾಯನ ಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ, ಪಾವಗಡ ಮೂಲಕ ಬೆಂಗಳೂರು ತಲುಪಲಿದೆ. ಹೇಮಾವತಿಯ ರಥೋತ್ಸವ ತುರುವೇಕೆರೆ, ಗುಬ್ಬಿ, ತುಮಕೂರು ಗ್ರಾಮಾಂತರ, ತುಮಕೂರು ನಗರ, ಕುಣಿಗಲ್ ಮೂಲಕ ಸಾಗಲಿದೆ ಎಂದರು.
Related Articles
ತಾಲೂಕು ಜೆಡಿಎಸ್ ಮಹಿಳಾ ಮುಖಂಡರಾದ ಸಾಯಿಸುಮನ ಹನುಮಂತರಾಯಪ್ಪ ಮಾತನಾಡಿ, 2023 ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಪೂರ್ಣ ಬಹುಮತ ಬಂದರೆ ಪಂಚರತ್ನ ಯೋಜನೆ, 5 ಲಕ್ಷ ಕೋಟಿ ವೆಚ್ಚದ ಜನತಾ ಜಲಧಾರೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ರಾಜ್ಯಕ್ಕೆ ಕುಮಾರಸ್ವಾಮಿ, ಪಾವಗಡಕ್ಕೆ ತಿಮ್ಮರಾಯಪ್ಪ ನಮ್ಮೆಲ್ಲರ ಆಯ್ಕೆ ಆಗಬೇಕೆಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ, ತಾ. ಅಧ್ಯಕ್ಷ ಬಲರಾಮರೆಡ್ಡಿ, ಪ್ರ.ಕಾರ್ಯದರ್ಶಿ ಗೋವಿಂದ್ ಬಾಬು, ತಾಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಮಾಜಿ ಪುರಸಭಾ ಸದಸ್ಯರಾದ ಮನು ಮಹೇಶ್, ತಾ. ರೈತ ಘಟಕದ ಅಧ್ಯಕ್ಷ ಗಂಗಾಧರ ನಾಯ್ಡು, ಯುವ ಘಟಕದ ಅಧ್ಯಕ್ಷ ಮಂಜುನಾಥ್ ಚೌಧರಿ ಮಾತನಾಡಿದರು. ಮಾಜಿ ಪುರಸಭೆ ಸದಸ್ಯರಾದ ಜಿ.ಎ.ವೆಂಕಟೇಶ್, ನಾಗೇಂದ್ರ, ಮುಖಂಡ ರಾದ ಗೋವಿಂದಪ್ಪ, ಲೋಕೇಶ್ ಪಾಳೇಗಾರ, ರಾಮಕೃಷ್ಣ ರೆಡ್ಡಿ, ಅಲ್ಪಸಂಖ್ಯಾತ ಘಟಕದ ಯೂನಿಸ್, ಅಂಬಿಕಾ ರಮೇಶ್ ಇದ್ದರು.