ಹಾಸನ: “ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೇ ಮತ ಹಾಕಿದಂತೆ. ಅದು ಬಿಜೆಪಿಯ ಬಿ ಟೀಂ, ಅದಕ್ಕೆ ಮತ ಹಾಕಬೇಡಿ’ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುಜೇìವಾಲ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ನ ಭದ್ರಕೋಟೆ ಎಂದೇ ಖ್ಯಾತವಾಗಿರುವ ಹಾಸನದಲ್ಲಿ ನಿಂತು ಜೆಡಿಎಸ್ ವಿರುದ್ಧ ಗುಡುಗಿದ ಕಾಂಗ್ರೆಸ್ ನಾಯಕರು 2018ರ ಚುನಾವಣ ಪ್ರಚಾರದಂತೆಯೇ ಈ ಬಾರಿಯೂ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಕರೆದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿಯಾಗಿ ನಡೆಸುತ್ತಿರುವ ಬಸ್ ಯಾತ್ರೆ ಶನಿವಾರ ಹಾಸನ ಜಿಲ್ಲೆ ಪ್ರವೇಶಿಸಿತು.
ಸಮಾವೇಶದಲ್ಲಿ ಮಾತನಾಡಿದ ರಣದೀಪ್ ಸುಜೇìವಾಲ, ಜೆಡಿಎಸ್ ಬಿಜೆಪಿ ಬಿ ಟೀಂ ಎಂಬುದರಲ್ಲಿ ಅನುಮಾನವೇ ಇಲ್ಲ.ಈಗಲೂ ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಜೆಡಿಎಸ್‌ನ ಪರೋಕ್ಷ ಬೆಂಬಲ ಇದೆ ಎಂದು ನೇರವಾಗಿ ಆರೋಪಿಸಿದರು. ರೈತರಿಗೆ ಮಾರಕವಾದ ಭೂ ಸುಧಾರಣ ಕಾಯ್ದೆಯನ್ನು ರಾಜ್ಯ ಬಿಜೆಪಿ ಸರಕಾರ ತಿದ್ದುಪಡಿ ಮಾಡಿದಾಗ ಜೆಡಿಎಸ್ ವಿರೋಧಿಸಲಿಲ್ಲ. ಮೈಸೂರು ಮೇಯರ್ ಚುನಾವಣೆಯಲ್ಲಿ ಬಿಜೆಪಿಯವರು ಮೇಯರ್ ಆಗಲು ಬೆಂಬಲ ಕೊಟ್ಟರು. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಚುನಾವಣೆ ಯಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಜೆಡಿಎಸ್‌ನವರು ಬೆಂಬಲಿಸಿ ಮತ ನೀಡಿದರು. ಇದಕ್ಕಿಂತ ಇನ್ನೇನು ನಿದರ್ಶನ ಬೇಕು ಎಂದು ಹರಿಹಾಯ್ದರು.
ಈಗಲೇ ಜೆಡಿಎಸ್ ವಿಸರ್ಜಿಸಲಿ
ಜೆಡಿಎಸ್ ವಿರುದ್ಧ ಹರಿಹಾಯ್ದ ಸಿದ್ಧರಾಮಯ್ಯ, ಅದು ರಾಜ್ಯದಲ್ಲಿ ಎಂದೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ. ಗೆದ್ದ ಎತ್ತಿನ ಬಾಲ ಹಿಡಿದು ಹೋಗುವ ಜೆಡಿಎಸ್‌ನವರಿಗೆ ಯಾವುದೇ ಸಿದ್ಧಾಂತ, ಕಾರ್ಯಕ್ರಮ ಇಲ್ಲ. ಜೆಡಿಎಸ್ ಸೋಲಿಸಿ. ಜೆಡಿಎಸ್‌ಗೆ ಮತ ಕೊಟ್ಟರೆ, ಬಿಜೆಪಿಗೆ ಮತ ಕೊಟ್ಟಂತಾಗುತ್ತದೆ ಎಂದು ವ್ಯಂಗ್ಯವಾಡಿದರು. ಅಧಿಕಾರಕ್ಕೆ ಬಂದು ಪಂಚರತ್ನ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸದಿದ್ದರೆ ಜೆಡಿಎಸ್ ವಿಸರ್ಜಿಸುವುದಾಗಿ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅಲ್ಲಿಯ ವರೆಗೆ ಯಾಕೆ ಕಾಯಬೇಕು? ಈಗಲೇ ಜೆಡಿಎಸ್ ಅನ್ನು ವಿಸರ್ಜಿಸಲಿ. ಜೆಡಿಎಸ್ ಬೇಕು ಎಂದು ಜನರು ಹೇಳುತ್ತಿದ್ದಾರೆಯೇ ಎಂದು ಕುಟುಕಿದರು.