Advertisement

ಲೋಕಸಭೆ ಚುನಾವಣೆಗೆ JDS ಸಜ್ಜು

10:16 PM May 28, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಯ ಆಘಾತಕಾರಿ ಸೋಲಿನ ಬೆನ್ನಲ್ಲೇ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಿಂದಲೇ ಸಜ್ಜಾಗಲು ಜೆಡಿಎಸ್‌ ಮುಂದಾಗಿದೆ.

Advertisement

ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿ ಹೊಸದಾಗಿ ಪುನರ್‌ ರಚನೆ ಮಾಡಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವುದರ ಜತೆಗೆ ಲೋಕಸಭೆ ಚುನಾವಣೆಗೂ ಸಿದ್ಧತೆ ನಡೆಸಲು ತೀರ್ಮಾನಿಸಿದೆ.

ರಾಜ್ಯದ 28 ಕ್ಷೇತ್ರಗಳಲ್ಲಿ ಹೋರಾಟದ ಬದಲು ಹನ್ನೆರಡರಿಂದ ಹದಿನಾಲ್ಕು ಕ್ಷೇತ್ರಗಳನ್ನು ಟಾರ್ಗೆಟ್‌ ಮಾಡಿಕೊಂಡು ಹೆಚ್ಚು ಶ್ರಮ ಹಾಕಿ ಸಾಮರ್ಥ್ಯ ಪ್ರದರ್ಶನ ಮಾಡಿದರೆ ಹೇಗೆ ಎಂಬ ಬಗ್ಗೆಯೂ ಪಕ್ಷದ ಆಂತರಿಕ ವಲಯದಲ್ಲಿ ಚಿಂತನೆ ನಡೆದಿದೆ.

ಈ ನಡುವೆ ಪ್ರಸಕ್ತ ಸನ್ನಿವೇಶದಲ್ಲಿ ವಿಷಯಾಧಾರಿತವಾಗಿ ಎನ್‌ಡಿಎ ಮೈತ್ರಿಕೂಟದ ಜತೆ ಸೀಟು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವುದು ಸೂಕ್ತ ಎಂದು ಪಕ್ಷದ ಬಹುತೇಕ ಶಾಸಕರು ಒಲವು ಹೊಂದಿದ್ದಾರೆ.

ಏಕಾಂಗಿಯಾಗಿ ಹೋರಾಟ ಮಾಡುವ ಬದಲು ಎನ್‌ಡಿಎ ಜತೆಗೂಡಿದರೆ ರಾಜ್ಯದಲ್ಲಿ ನಮಗೆ ಶಕ್ತಿ ಬರುತ್ತದೆ. ಜತೆಗೆ, ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷ ಬಲಪಡಿಸಲು ಅನುಕೂಲವಾಗುತ್ತದೆ ಎಂದು ಶಾಸಕರು ಒತ್ತಡ ಹೇರುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Advertisement

ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಎರಡೂ ಚುನಾವಣೆಗಳಲ್ಲಿ ಜೆಡಿಎಸ್‌ ಬೆಂಬಲಿಸಿಲ್ಲ. ಜತೆಗೆ ಈ ಚುನಾವಣೆಯಲ್ಲಿ ಜೆಡಿಎಸ್‌ನ ಭದ್ರಕೋಟೆಯ ಒಕ್ಕಲಿಗ ಸಮುದಾಯದ ಮತಗಳು ಕಾಂಗ್ರೆಸ್‌ನತ್ತ ವಾಲಿದೆ. ಹೀಗಿರುವಾಗ ಗಟ್ಟಿ ನಿರ್ಧಾರ ಕೈಗೊಂಡರೆ ಭವಿಷ್ಯದಲ್ಲಿ ಜೆಡಿಎಸ್‌ ಮತ್ತೆ ಶಕ್ತಿಯುತವಾಗಲು ಸಾಧ್ಯ. ಎನ್‌ಡಿಎ ಮೈತ್ರಿಕೂಟ ಸೇರಿದರೆ ನಾಲ್ಕರಿಂದ ಐದು ಸ್ಥಾನ ಗೆಲ್ಲುವ ಸಾಧ್ಯವಿದೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಯಾದಗಿರಿ, ಬಿಜಾಪುರ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಬಳ್ಳಾರಿ , ಶಿವಮೊಗ್ಗ, ಉತ್ತರ ಕನ್ನಡ ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೆಡಿಎಸ್‌ ಸಂಘಟನೆ ಬಲವಾಗಿದೆ. ಸ್ಪಷ್ಟ ತೀರ್ಮಾನದೊಂದಿಗೆ ಮುನ್ನಡೆದರೆ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಹೊಸ ಆಶಾಭಾವನೆ ಮೂಡಿಸಬಹುದು ಎಂದು ಇತ್ತೀಚೆಗೆ ನಡೆದ ಶಾಸಕರು ಹಾಗೂ ಮುಖಂಡರ ಸಭೆಯಲ್ಲಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಗೌಡರ ನಕಾರ: ಆದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಎನ್‌ಡಿಎ ಮೈತ್ರಿಕೂಟ ಸೇರ್ಪಡೆಗೆ ಒಪ್ಪುತ್ತಿಲ್ಲ. ದೇಶದಲ್ಲಿ ಮುಂದೆ ನಡೆಯಬಹುದಾದ ರಾಜಕೀಯ ವಿದ್ಯಮಾನ ನೋಡಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳೋಣ. ತಕ್ಷಣಕ್ಕೆ ನಾವು ಲೋಕಸಭೆ ಚುನಾವಣೆಗೆ ಸಜ್ಜಾಗೋಣ ಎಂದು ಹೇಳಿದರು ಎನ್ನಲಾಗಿದೆ.
ಜುಲೈ ಅಥವಾ ಆಗಸ್ಟ್‌ನಿಂದ ಪಕ್ಷ ಸಂಘಟನೆ ನಿಟ್ಟಿನಲ್ಲಿ ರಾಜ್ಯ ಪ್ರವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯಾದ್ಯಂತ ಬೂತ್‌ ಮಟ್ಟದಲ್ಲಿ ಪಕ್ಷದ ಸದಸ್ಯತ್ವ ನವೀಕರಣ ಹಾಗೂ ಹೊಸದಾಗಿ ಸದಸ್ಯತ್ವ ನೀಡುವ ಅಭಿಯಾನ ಹಮ್ಮಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಎಚ್‌ಡಿಕೆ ಹೇಳಿಕೆ ಕುತೂಹಲ
ನವೆಂಬರ್‌ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಸಾಧ್ಯತೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದ್ದು, ಯಾವ ರೀತಿಯ ಬೆಳವಣಿಗೆ ಆಗಬಹುದು, ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಲಾಗಿದೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಹೊಸ ಸರ್ಕಾರದ ಗ್ಯಾರಂಟಿ ಜಾರಿಗೆ ಷರತ್ತು ಇರಬಾರದು ಎಂದು ಬಿಜೆಪಿ-ಜೆಡಿಎಸ್‌ ಎರಡೂ ಪಕ್ಷಗಳು ಒಟ್ಟಿಗೆ ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿರುವುದು ಗಮನಾರ್ಹ.

ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next