ಬೆಂಗಳೂರು: ರಾಜ್ಯದ ಉಪಚುನಾವಣಾ ಕದನ ರಂಗೇರುತ್ತಿದೆ. ಪಕ್ಷಗಳು ಚುನಾವಣೆ ಗೆಲ್ಲುವ ತಂತ್ರಗಾರಿಕೆ ಆರಂಭಿಸಿದೆ. ಈ ಮಧ್ಯೆ ರಾಜರಾಜೇಶ್ವರಿ ನಗರ ಕ್ಷೇತ್ರ ಚುನಾವಣೆಗೆ ಜೆಡಿಎಸ್ ಪಕ್ಷ ವಿ.ಕೃಷ್ಣಮೂರ್ತಿಗೆ ಟಿಕೆಟ್ ನೀಡಿದ್ದು, ಬುಧವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಈ ಬಗ್ಗೆ ತಿಳಿಸಿದ್ದು, ಆರ್.ಆರ್.ನಗರ ಉಪಚುನಾವಣೆಯಲ್ಲಿ ಕೃಷ್ಣಮೂರ್ತಿ ಜೆಡಿಎಸ್ ಟಿಕೆಟ್ ನಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅವರ ತಂದೆ ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಕೃಷ್ಣಮೂರ್ತಿ ಅವರೂ ಸ್ವಂತ ದುಡಿಮೆಯಿಂದ ಬಂದವರು ಎಂದರು.
ಆರ್.ಆರ್. ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಈಗಾಗಲೇ ಕುಸುಮಾ ಹನುಂತರಾಯಪ್ಪ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿಯಿಂದ ಮುನಿರತ್ನ ಅಥವಾ ತುಳಸಿ ಮುನಿರಾಜು ಗೌಡಗೆ ಟಿಕೆಟ್ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ:ಆರ್.ಆರ್ ನಗರ ಉಪಚುನಾವಣೆ: ಜ್ಯೋತಿಷಿ ಸಲಹೆಯಂತೆ ನಾಮಪತ್ರ ಸಲ್ಲಿಸಿದ ಕುಸುಮಾ
ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಅಂತಿಮ ದಿನವಾಗಿದೆ. ಕೈ ಅಭ್ಯರ್ಥಿ ಕುಸುಮಾ ಇಂದು ಜ್ಯೋತಿಷಿಗಳ ಸಲಹೆ ಮೇರೆಗೆ ನಾಮಪತ್ರ ಸಲ್ಲಿಸಿದ್ದು, ನಾಳೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆ ನವೆಂಬರ್ 3ರಂದು ನಡೆಯಲಿದೆ. ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.