ಬೆಂಗಳೂರು: ಬಿಬಿಎಂಪಿ ಮೇಯರ್ ಆರ್.ಸಂಪತ್ ರಾಜ್ ಹಾಗೂ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಅವರ ಅಧಿಕಾರ ವಧಿ ಇನ್ನೆರಡು ತಿಂಗಳಲ್ಲಿ ಮುಗಿಯಲಿದ್ದು, ನೂತನ ಮೇಯರ್-ಉಪ ಮೇಯರ್ ಸ್ಥಾನಕ್ಕೇರಲು ಈಗಲೇ ಕಸರತ್ತು ಆರಂಭವಾಗಿದೆ.
ಮುಂದಿನ ಅವಧಿಯ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಯರಿಗೆ ಮೀಸಲಾಗಿದ್ದು, ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಪೈಪೋಟಿ ಪ್ರಾರಂಭವಾಗಿದೆ. ಕಳೆದ ಮೂರು ವರ್ಷದಿಂದ ಪಾಲಿಕೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಆಡಳಿತವಿದ್ದು, ಮೂರು ಅವಧಿಯಲ್ಲೂ ಕಾಂಗ್ರೆಸ್ ಸದಸ್ಯರೇ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ, ಈ ಬಾರಿ ಮೇಯರ್ ಪದವಿ ನಮಗೇ ನೀಡಬೇಕೆಂದು ಪಟ್ಟುಹಿಡಿಯಲು ಜೆಡಿಎಸ್ ತೀರ್ಮಾನಿಸಿದೆ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸೌಮ್ಯಾ ಶಿವಕುಮಾರ್, ಲಾವಣ್ಯಾ ಗಣೇಶ್ ರೆಡ್ಡಿ, ಗಂಗಾಂಬಿಕೆ, ಫರಿದಾ ಇಷ್ತಿಯಾಕ್, ಆಶಾ ಸುರೇಶ್ ಹಾಗೂ ಕೋಕಿಲಾ ಚಂದ್ರಶೇಖರ್, ಜೆಡಿಎಸ್‌ನಿಂದ ವೃಷಭಾವತಿನಗರ ವಾರ್ಡ್‌ನ ಹೇಮಲತಾ ಗೋಪಾಲಯ್ಯ, ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ, ಕಾವಲ್‌ಬೈರಸಂದ್ರ ವಾರ್ಡ್‌ನ ನೇತ್ರಾ ನಾರಾಯಣ್ ಆಕಾಂಕ್ಷಿಗಳಾಗಿದ್ದಾರೆ.
ಉಪ ಮೇಯರ್ ಸ್ಥಾನ ಸಹ ಸಾಮಾನ್ಯ ಪುರುಷ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಆದರೆ, ಮೇಯರ್ ಸ್ಥಾನ ಯಾವ ಪಕ್ಷಕ್ಕೆ ಎಂಬುದು ತೀರ್ಮಾನವಾದ ನಂತರ ಆ ಬಗ್ಗೆ ಸ್ಪಷ್ಟತೆ ಸಿಗಲಿದೆ. ಜೆಡಿಎಸ್‌ನಲ್ಲಿ ಇಮ್ರಾನ್ ಪಾಷಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಬಿಬಿಎಂಪಿಯಲ್ಲಿ ಮೇಯರ್ ಸ್ಥಾನ ಅಂತಿಮವಾಗಿ ಕಾಂಗ್ರೆಸ್‌ಗೆ ಸಿಗುವ ಸಾಧ್ಯತೆ ದಡ್ಡವಾಗಿದೆ. ಉಪ ಮೇಯರ್ ಸ್ಥಾನ ಜೆಡಿಎಸ್ ಗೆ ಲಭಿಸಬಹುದು ಎಂದು ಹೇಳಲಾಗಿದೆ.