Advertisement

ನಿಖಿಲಣ್ಣ ಶಾಸಕರಾಗುವುದು ಬೇಡ, ಸುಮಲತಾ ವಿರುದ್ಧ ಗೆಲ್ಲಲೇಬೇಕು

06:29 PM Oct 24, 2021 | Team Udayavani |

ಬೆಂಗಳೂರು : ಮತ್ತೆ ಮಂಡ್ಯ ಲೋಕಸಭಾ ಚುನಾವಣೆಯ ಸೋಲಿನ ಬಗ್ಗೆ ಪ್ರಸ್ತಾಪಿಸಿದ ನಿಖಿಲ್ ಕುಮಾರಸ್ವಾಮಿ ”ನಾವು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾದೆವು” ಎಂದು ಭಾನುವಾರ ಹೇಳಿದ್ದಾರೆ.

Advertisement

ದಾಸರಹಳ್ಳಿಯಲ್ಲಿ ನಿಖಿಲ್ ಸೈನ್ಯ ಸಮಿತಿ ವತಿಯಿಂದ ಆಯೋಜಿಸಲಾದ ಜಾಗ್ವಾರ್ ಚಿತ್ರದ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣವನ್ನ ಸ್ವಾರ್ಥಕ್ಕೆ ಮಾಡಬಾರದು. ಸಮಾಜದ ಒಳ್ಳೆ ಕೆಲಸಗಳನ್ನು ಮಾಡಲು ರಾಜಕಾರಣ ಬಳಸಿಕೊಳ್ಳಬೇಕು. ರಾಮನಗರದಲ್ಲಿ ನಾನು ಸ್ಪರ್ಧೆ ಮಾಡಬೇಕೆಂದು ಶರವಣ ಹೇಳಿದ್ದಾರೆ, ಆದರೆ ನಾನು ಮೊದಲು ಜನತಾದಳದ ನಿಷ್ಠಾವಂತ ಕಾರ್ಯಕರ್ತ. ನಾನು ಶಾಸಕ ಆಗಬೇಕು ಅಂದ್ರೆ ನಮ್ಮ ತಂದೆ, ತಾತನ ಹೆಸರಿನಲ್ಲಿ ಯಾವತ್ತೊ ಆಗಬಹುದಿತ್ತು ಎಂದರು.

”ಪಕ್ಷ ನಂಬಿಕೆ ಇಟ್ಟು ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದೆ. ಜನತಾದಳ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಆಸೆ. ಎರಡು ರಾಷ್ಟ್ರೀಯ ಪಕ್ಷಗಳು ಏನೇ ನಿರ್ಧಾರ ತೆಗೆದುಕೊಳ್ಳಬೇಕು ಅಂದರೂ ದೆಹಲಿಗೆ ಹೋಗಬೇಕು, ಆದರೆ ಪದ್ಮನಾಭನಗರದಲ್ಲಿ ನಮ್ಮ ತಾತ ದೊಡ್ಡ ಸಾಹೇಬರ ಮನೆ ಯಾವಾಗಲೂ ಬಡವರಿಗಾಗಿ ತೆರೆದಿರುತ್ತದೆ. ಹಾಸನದಲ್ಲಿ ರೇವಣ್ಣ ಸಾಹೇಬರು ಕೂಡಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಪ್ರಜ್ವಲ್ ಕೂಡಾ ಸಣ್ಣ ವಯಸ್ಸಿನಲ್ಲೇ ಸಂಸದರಾಗಿ ಕೆಲಸ ಮಾಡ್ತಿದಾರೆ” ಎಂದರು.

ಸೋಲಿನ ಬಗ್ಗೆ ಪ್ರಸ್ತಾಪ

ಮತ್ತೆ ಮಂಡ್ಯ ಲೋಕಸಭಾ ಚುನಾವಣೆಯ ಸೋಲಿನ ಬಗ್ಗೆ ಪ್ರಸ್ತಾಪಿಸಿದ ನಿಖಿಲ್,”ರಾಜಕೀಯ ಷಡ್ಯಂತ್ರಕ್ಕೆ ನಾವು ಬಲಿಯಾದೆವು.ಮಂಡ್ಯ ಚುನಾವಣೆಗೆ ಸ್ಪರ್ಧೆ ಮಾಡಬೇಕು ಅನ್ನುವ ಯಾವುದೇ ಯೋಚನೆ ಇರಲಿಲ್ಲ.ಇದ್ದಿದ್ದರೆ ಮೂರು ತಿಂಗಳ ಮುಂಚೆಯೇ ನಡೆದ ಉಪಚುನಾವಣೆಗೆ ಕಣಕ್ಕಿಳಿಯುತ್ತಿದ್ದೆ,ಆಗ ಯಾರೂ ನನ್ನ ಸ್ಪರ್ಧೆಯನ್ನ ವಿರೋಧಿಸುತ್ತಿರಲಿಲ್ಲಆದರೆ, 2019ರ ಎಂಪಿ ಚುನಾವಣೆಗೆ ಅನಿವಾರ್ಯವಾಗಿ ನಿಲ್ಲಬೇಕಾಯಿತು. ಜಿಲ್ಲೆಯ ಎಲ್ಲಾ ಶಾಸಕರ ಒತ್ತಾಯದ ಕಾರಣ ಸ್ಪರ್ಧಿಸಿದೆ. ಐದೂ ಮುಕ್ಕಾಲು ಲಕ್ಷ ಜನ ನನಗೆ ಮತ ಹಾಕಿದ್ದಾರೆ. ಅದು ಜೆಡಿಎಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಸೋಲು. ಪ್ರತಿಯೊಬ್ಬರು ಎಡವಿದಾಗಲೇ ಅರಿವಾಗುತ್ತದೆ. ಸೋಲೇ ಗೆಲುವಿನ ಮೆಟ್ಟಿಲು. ನಾನು ಮಣ್ಣಾಗುವವರೆಗೂ ಮಂಡ್ಯ ಜನರ ಪ್ರೀತಿ ಮರೆಯಲ್ಲ.ಕೊನೆ ಉಸಿರಿನವರೆಗೂ ಅವರ ಜೊತೆ ಇರುತ್ತೇನೆ”ಎಂದರು.

Advertisement

ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಘೋಷಣೆ ಕೂಗಿದ ಅಭಿಮಾನಿಗಳು, ನಿಖಿಲ್ ಜೊತೆ ಸೆಲ್ಫಿಗೆ ಮುಗಿಬಿದ್ದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ನಾಯಕ ಟಿ.ಎ ಶರವಣ ಮಾತನಾಡಿ, ”ಕುಮಾರಣ್ಣ ಚಿತ್ರ ವಿತರಕರಾಗಿದ್ದರು,ಆದರೆ ಎಂದೂ ನಟನೆ ಮಾಡಿರಲಿಲ್ಲ. ಚಿತ್ರರಂಗಕ್ಕೆ ನಿಖಿಲ್ ಎಂಟ್ರಿ ಬಗ್ಗೆ ಆರಂಭದಲ್ಲಿ ನನಗೇ ಕುತೂಹಲ ಇತ್ತು. ನಿಖಿಲ್ ಸಿನಿಮಾರಂಗ ಪ್ರವೇಶದ‌ ಬಗ್ಗೆ ಕುಮಾರಣ್ಣ ನನ್ನ ಬಳಿ ಚರ್ಚಿಸಿದ್ದರು. ಇವರಿಗೆ ನಟನೆ ಎಲ್ಲಿ ಬರುತ್ತೆ ಅಂದುಕೊಂಡಿದ್ದೆ, ಜಾಗ್ವಾರ್ ಚಿತ್ರ ಬಿಡುಗಡೆಯಾದ ನಂತರವೇ ನಿಖಿಲ್ ಸಾಮರ್ಥ್ಯ ಗೊತ್ತಾಯಿತು” ಎಂದರು.

”ಎರಡು ಕ್ಷೇತ್ರಗಳ ಉಪಚುನಾವಣೆಗೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಅಲ್ಲಿ ಬಿಜೆಪಿ, ಕಾಂಗ್ರೆಸ್ ವಿವಾದವನ್ನೇ ಮಾಡುತ್ತಿದ್ದಾರೆ. ಯುವರಾಜ ಅಲ್ಲಿಗೆ ಹೋಗಬೇಕಾಗಿತ್ತು,ಸಿನಿಮಾ ಕೆಲಸದ ಕಾರಣ ಹೋಗಲು ಸಾಧ್ಯವಾಗಿಲ್ಲ. ಚಿತ್ರರಂಗ, ರಾಜಕೀಯ ಕ್ಷೇತ್ರಗಳು ಎರಡು ಕಣ್ಣುಗಳು ಇದ್ದಂತೆ ಎರಡರಲ್ಲೂ ನಿಖಿಲ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿ” ಎಂದರು.

ನಿಖಿಲ್ ಅಣ್ಣಾ ಶಾಸಕರಾಗುವುದು ಬೇಡ!

ಟಿ.ಎ ಶರವಣ ಅವರು ಭಾಷಣದ ವೇಳೆ ,”ನಿಖಿಲ್ ಶಾಸಕರಾಗಬೇಕು, ನೀವೆಲ್ಲಾ ಅವರ ಜೊತೆ ನಿಲ್ಲಬೇಕು. ನಿಮ್ಮ ಆಶೀರ್ವಾದ ಅವರ ಮೇಲೆ ಇರಬೇಕು” ಎನ್ನುತ್ತಿದ್ದಂತೆ ಕಾರ್ಯಕರ್ತರೊಬ್ಬರು, ”ನಿಖಿಲ್ ಅಣ್ಣಾ ಶಾಸಕರಾಗುವುದು ಬೇಡ, ಸಂಸದರಾಗಿ ಸಂಸತ್ ಗೆ ಪ್ರವೇಶಿಸಬೇಕು. ಮಂಡ್ಯದಲ್ಲಿ ಸುಮಲತಾ ವಿರುದ್ಧ ಗೆಲ್ಲಲೇಬೇಕು” ಎಂದು ಜೋರು ಧ್ವನಿಯಲ್ಲಿ ಕೂಗಿದರು.

ಆಗ ,”ಹೌದೌದು..ನಿಖಿಲ್ ಶಾಸಕ, ಸಂಸದರಾಗುತ್ತಾರೆ ”ಎಂದು ಶರವಣ ಪ್ರತಿಕ್ರಿಯಿಸಿದರು.

ಜಾಗ್ವಾರ್ ಚಿತ್ರದ ತುಣುಕುಗಳ ಪ್ರದರ್ಶನ ಬಳಿಕ ಪ್ರವಾಹ ಸಂತ್ರಸ್ತರಿಗೆ ನೆರವು, ಕೊರೊನಾದಿಂದ ಸಂಕಷ್ಟದಲ್ಲಿದ್ದ ಜನರಿಗೆ ಕಿಟ್ ವಿತರಣೆ, ಪುತ್ರನ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಕಿರುಚಿತ್ರ ವೀಕ್ಷಿಸುತ್ತಿದ್ದಂತೆ ಭಾವುಕರಾಗಿ ನಿಖಿಲ್ ಕಣ್ಣೀರಿಟ್ಟರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೂ ಕಾರ್ಯಕರ್ತರು ಆಗಮಿಸಿದ್ದರು. ಶಾಸಕ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next