Advertisement

ಜೆಡಿಎಸ್‌ ಬಣ ರಾಜಕೀಯ ಬಿಕ್ಕಟ್ಟು ಉಲ್ಬಣ; 27ಕ್ಕೆ ಭಿನ್ನಮತಿಯರ ಸಭೆ

06:26 PM Nov 25, 2022 | Team Udayavani |

ಮುಳಬಾಗಿಲು: ಪಂಚರತ್ನ ಯಾತ್ರೆಯಲ್ಲಿದ್ದ ಜನರನ್ನು ಕಂಡು ತಾವೇ ಮುಂದಿನ ಶಾಸಕ ಎಂಬ ಗುಂಗಿನಲ್ಲಿರುವ ಸಮೃದ್ಧಿ ಮಂಜುನಾಥ್‌ಗೆ ಸ್ಥಳೀಯ ಜೆಡಿಎಸ್‌ನಲ್ಲಿ ಉಂಟಾಗಿರುವ ಬಣ ರಾಜಕೀಯದ ಭಿನ್ನಮತವು ಸ್ಫೋಟಗೊಂಡು ಚಿಂತೆಗೀಡು ಮಾಡಿದೆ.

Advertisement

ತಾಲೂಕಿನ ಧೀಮಂತ ರಾಜಕಾರಣಿ ಆಲಂಗೂರು ಆರ್‌.ಶ್ರೀನಿವಾಸ್‌ ಅವರು 1994 ಮತ್ತು 2004ರಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದು ಪೌರಾಡಳಿತ, ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಜೆಡಿಎಸ್‌ ಅನ್ನು ಜನರ ಮನದಲ್ಲಿ ಪ್ರಬಲಗೊಳಿಸಿದ್ದರು. ಅಂತಹ ಉಚ್ಚ್ರಾಯ ಸ್ಥಿತಿಯ ಲ್ಲಿದ್ದ ಪಕ್ಷವು ಪ್ರಸ್ತುತ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್‌, ಸಮೃದ್ಧಿ ಮಂಜುನಾಥ್‌, ನಿಕಟ ಪೂರ್ವಾ ಧ್ಯಕ್ಷ ಆಲಂಗೂರು ಶಿವಣ್ಣ ಬಣಗಳ ನಡೆಯಿಂದ ಕಾರ್ಯಕರ್ತರ ಸ್ಥಿತಿಯಂತೂ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

2018ರ ವಿಧಾನಸಭೆ ಚುನಾವಣೆಯ ಕೆಲವೇ ತಿಂಗಳು ಮೊದಲು ವರಿಷ್ಠರು ಶ್ರೀನಿವಾಸಪುರ ತಾಲೂ ಕಿನ ಸಮೃದ್ಧಿ ಮಂಜುನಾಥ್‌ಅನ್ನು ಮುಳಬಾಗಿಲು ಜೆಡಿಎಸ್‌ ಅಭ್ಯರ್ಥಿ ಆಗಿ ಘೋಷಿಸಿದ್ದರು. ಅದರಂತೆ ಕ್ಷೇತ್ರಕ್ಕೆ ಬಂದ ಸಮೃದ್ಧಿ ಮಂಜುನಾಥ್‌, ದಿ.ಆಲಂಗೂರು ಶ್ರೀನಿವಾಸ್‌ ಹೆಸರು ಹೇಳಿಕೊಂಡು ಸ್ಥಳೀಯ ಮುಖಂಡರನ್ನು ಒಗ್ಗೂಡಿಸಿಕೊಂಡು ಚುನಾವಣೆ ಕಣಕ್ಕೆ ಇಳಿದಿದ್ದರು. ಮುಖಂಡರು, ಕಾರ್ಯಕರ್ತರ, ಮತದಾರರ ಶ್ರಮದಿಂದ 67,498 ಮತ ಗಳಿಸಿ ಸೋತಿದ್ದರು.

ಎರಡು ಬಣ ವೃದ್ಧಿ: ಆದರೆ, ಸಮೃದ್ಧಿ ಮಂಜುನಾಥ್‌ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಈ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಇಳಿದಿದ್ದರು. ಅಲ್ಲದೇ, ಜೆಡಿಎಸ್‌ ವರಿಷ್ಠರಲ್ಲಿ ತಮ್ಮ ವರ್ಚಸ್ಸು ಬಳಸಿಕೊಂಡು ಆಲಂಗೂರು ಶಿವಣ್ಣರನ್ನು ತಾಲೂಕು ಜೆಡಿಎಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಕಾಡೇನಹಳ್ಳಿ ನಾಗರಾಜ್‌ಗೆ ಪಟ್ಟ ಕಟ್ಟಿದ್ದರು. ಅಲ್ಲಿಂದಲೇ ಬೂದಿ ಮುಚ್ಚಿದ್ದ ಕೆಂಡದಂತಿದ್ದ ಭಿನ್ನಮತವು ಸ್ಫೋಟಗೊಂಡು ಎರಡು ಬಣಗಳಾಗಿ ರೂಪುಗೊಂಡಿದೆ.

ಸಮೃದ್ಧಿ ನಡೆಗೆ ಶಿವಣ್ಣ ಬಣ ಕೆಂಡ: ಕೋಚಿಮುಲ್‌ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಕಾಡೇನ ಹಳ್ಳಿ ನಾಗರಾಜ್‌ ಅವರನ್ನು ನಿರ್ದೇಶಕರಾಗಿ ಗೆಲ್ಲಿಸಿ, ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡುವುದಾಗಿ ಆಲಂಗೂರು ಶಿವಣ್ಣಗೆ ಕೊಟ್ಟಿರುವ ಭರವಸೆ ಇದು ವರೆಗೂ ಈಡೇರಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೋಲಾರ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನ ಗೆದ್ದ ಜೆಡಿಎಸ್‌ನ ಶಾಸಕ ಕೆ.ಶ್ರೀನಿ ವಾಸಗೌಡರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಶಿವಣ್ಣ ಅಸಮಾಧಾನ ಗೊಂಡಿದ್ದರು. ಅದರ ನಡುವೆಯೇ 2021ರಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕೆ.ಶ್ರೀನಿವಾಸ ಗೌಡರು ಕಾಂಗ್ರೆಸ್‌ನ ಅನಿಲ್‌ಕುಮಾರ್‌ಗೆ ಮತ ಹಾಕಿ
ದಕ್ಕೆ ಕೆ.ಶ್ರೀನಿವಾಸಗೌಡರ ವಿರುದ್ಧ ಸಮೃದ್ಧಿ ಮಂಜು ನಾಥ್‌ ವಾಗ್ಧಾಳಿ ನಡೆಸಿದ್ದರು. ಇದು ಆಲಂಗೂರು ಶಿವಣ್ಣ, ಇತರರನ್ನು ಕೆರಳಿಸಿತ್ತು.

Advertisement

ಆಲಂಗೂರು ಶ್ರೀನಿವಾಸ್‌ ಕಡೆಗಣನೆ: ನಗರಸಭೆಯ ವಾರ್ಡ್‌ 2ರ ಉಪಚುನಾವಣೆಯಲ್ಲಿ ಕೊತ್ತೂರು ಬಣದಿಂದ ಬಂದ ಎಂ.ಆರ್‌.ಮುರಳಿಗೆ ಮುಖಂಡರ ಮಾತನ್ನು ಲೆಕ್ಕಿಸದೇ, ಜೆಡಿಎಸ್‌ನಲ್ಲಿ ಟಿಕೆಟ್‌ ನೀಡಿ ದ್ದರು. ಅಲ್ಲದೆ, ಪಂಚರತ್ನ ಯಾತ್ರೆಯಲ್ಲಿ ಯಾವೊಬ್ಬ ನಾಯಕರೂ ಡಾ.ಬಿ.ಆರ್‌.ಅಂಬೇಡ್ಕರ್‌, ಆಲಂಗೂರು ಶ್ರೀನಿವಾಸ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ. ಕನಿಷ್ಠ ಜೆಡಿಎಸ್‌ ಕಟ್ಟಿ ಬೆಳೆಸಿದ ದಿ.ಆಲಂ ಗೂರು ಶ್ರೀನಿವಾಸ್‌ ಅವರ ಹೆಸರನ್ನು ಯಾರೊಬ್ಬರೂ ಕಾರ್ಯಕ್ರಮದಲ್ಲಿ ಜ್ಞಾಪಕ ಮಾಡಿಕೊಳ್ಳದೇ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಭಿನ್ನಮತ ಶಮನ ಮಾಡುತ್ತಿಲ್ಲ: ಆದರೆ, ಪಕ್ಷದಲ್ಲಿನ ಭಿನ್ನಮತಕ್ಕೆ ನಾಂದಿ ಹಾಡಬೇಕಾದ ಸಮೃದ್ಧಿ ಮಂಜುನಾಥ್‌, ಮುಂದಿನ ವಿಧಾನ ಸಭೆ ಚುನಾವಣೆಗೆ ತಮ್ಮ ಪಕ್ಷದಲ್ಲಿ ಕೆಲವರು ಕೈಕೊಟ್ಟರೂ ಕೆ.ಎಚ್‌.ಮುನಿಯಪ್ಪ ಸೇರಿ ಕಾಂಗ್ರೆಸ್‌, ಬಿಜೆಪಿಯಲ್ಲಿನ ಕೆಲವು ಮುಖಂಡರು ಪರೋಕ್ಷವಾಗಿ ತಮಗೆ ಸಹಕಾರ ನೀಡಲಿದ್ದಾರೆ ಎಂಬ ಭ್ರಮೆಯಲ್ಲಿ ದ್ದಾರೆ. ಆದ್ದರಿಂದ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಮೃದ್ಧಿ ಮಂಜುನಾಥ್‌ಗೆ ಬಂದ 67,498 ಮತ ಹಿಡಿದುಕೊಳ್ಳುವ ಗೋಜಿಗೆ
ಹೋಗದೇ ನಿರ್ಲಕ್ಷಿಸಿದ್ದಾರೆ. ಅದರಂತೆ ಪಕ್ಷದಲ್ಲಿನ ಮೂಲ ಜೆಡಿಎಸ್‌ ಮುಖಂಡರು, ಹಿರಿಯರನ್ನು ಮೂಲೆ ಗುಂಪು ಮಾಡಿ ಭಿನ್ನಮತ ಸಂಪೂರ್ಣ ಶಮನ ಮಾಡುವ ಗೋಜಿಗೆ ಹೋಗುತ್ತಿಲ್ಲ ಎನ್ನಲಾಗಿದೆ. ಅಲ್ಲದೇ, ಕಾಲ ಕಾಲಕ್ಕೆ ಉಂಟಾಗುತ್ತಿದ್ದ ಭಿನ್ನ ಮತವನ್ನು ಶಮನ ಮಾಡುವ ಗೋಜಿಗೆ ಹೋಗದೇ ಕಾಲ ಹಾಕಿದ್ದರಿಂದ ಭಿನ್ನಮತವು ಹೆಮ್ಮರವಾಗಿ ಬೆಳೆ ಯುವಂತಾಗಿದೆ. ಇದು ಸಮೃದ್ಧಿ ಮಂಜುನಾಥ್‌ ವಿರೋಧಿ ಬಣ ಒಗ್ಗೂಡಲು ಪ್ರೇರಣೆ ನೀಡಿದೆ.

ಅದಕ್ಕೆ, ಪೂರಕವಾಗಿ ನ.27ರಂದು ಆಲಂಗೂರು ಜೋಡಿಯಲ್ಲಿ ಭಿನ್ನಮತೀಯ ಮುಖಂಡರ ಸಭೆಯನ್ನು ಏರ್ಪಡಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ನ ಅಭ್ಯರ್ಥಿ ಎಂದು ಘೋಷಿಸಿರುವ ಸಮೃದ್ಧಿ ಮಂಜುನಾಥ್‌ ವಿರುದ್ಧ ಅವರ ಪಕ್ಷದಲ್ಲಿಯೇ ನಡೆಯುತ್ತಿರುವ ಬೆಳವಣಿಗೆ ಮುಂದಿನ ಅವರ ಗೆಲುವಿಗೆ ಅಡ್ಡಗಾಲು ಆಗುವುದೇ ಎನ್ನುವುದು ಜೆಡಿಎಸ್‌ ಕಾರ್ಯಕರ್ತರ ಅನುಮಾನವಾಗಿದೆ. ನ.27ರಂದು ನಡೆಯಲಿರುವ ಭಿನ್ನಮತೀಯರ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವು ಸಮೃದ್ಧಿ ಮಂಜುನಾಥ್‌ ಭವಿಷ್ಯವನ್ನು ನಿರ್ಧರಿಸಲಿದೆ.

●ಎಂ.ನಾಗರಾಜಯ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next