ಬನ್ನೂರು: ದೇಶದಾದ್ಯಂತ ನರೇಂದ್ರ ಮೋದಿ ಅಲೆ ಹೆಚ್ಚಿದ್ದು, ಅದರಲ್ಲೂ ನರಸೀಪುರ ಕ್ಷೇತ್ರದಲ್ಲಿ ಇಂದು ಬಿಜೆಪಿ ಪ್ರಬಲವಾಗಿ ಬೆಳವಣಿಗೆಯಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆಯೇ ಹೋರಾಟ ಇದ್ದು, ಇಲ್ಲಿ ಜೆಡಿಎಸ್ ಕೇವಲ ನೆಪಮಾತ್ರ ಎಂದು ನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಶಂಕರ್ ತಿಳಿಸಿದರು.
ಅವರು ಪಟ್ಟಣದ ಸಮೀಪದ ಚಾಮನಹಳ್ಳಿಯಲ್ಲಿರುವ ಮಾಜಿ ಶಾಸಕಿ ಜೆ.ಸುನೀತಾವೀರಪ್ಪ ಗೌಡರ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಯುವ ಮುಖಂಡರ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿಯೇ ಟಿ. ನರಸೀಪುರ ವಿಧಾನಸಭಾ ಕ್ಷೇತ್ರ ಹೆಚ್ಚಿನ ಗಮನ ಸೆಳೆದಿದ್ದು,
ಇದೀಗ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಂತೆ ಆಗಿದೆ. ಇಲ್ಲಿನ ಮತದಾರರು ಯಾವುದೇ ಕಾರಣಕ್ಕೂ ತ್ರಿಕೋನ ಸ್ಪರ್ಧೆಗೆ ಅವಕಾಶ ಮಾಡದೇ ಕಾಂಗ್ರೆಸ್ ಹಾಗೂ ಬಿಜೆಪಿಯ ಹಣಾಹಣಿಗೆ ಮಾತ್ರ ಅವಕಾಶ ನೀಡಿ ಬಿಜೆಪಿಯನ್ನು ಬಹು ಮತಗಳಿಂದ ಗೆಲ್ಲಲು ಸಹಕರಿಸಿಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕಿಯಿಂದ ಬಿಜೆಪಿಗೆ ಬಲ: ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದು ಝಾನ್ಸಿರಾಣಿಯ ಬಲ ಬಂದಂತೆ ಆಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ಬಿಜೆಪಿಯನ್ನು ಸೇರ್ಪಡೆಯಾಗುತ್ತಿರುವ ಸುಳಿವನ್ನು ನೀಡಿದರು.
ಮೋದಿ ಕಾರ್ಯ ಮೆಚ್ಚಿ ಬಿಜೆಪಿಗೆ: ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಮಾತನಾಡಿ, ನರಸೀಪುರ ಹಾಗೂ ಚಾಮರಾಜನಗರ ಮೀಸಲು ಆದ ನಂತರ ಮೇಲ್ಪಂಕ್ತಿಯ ಜನರಿಗೆ ಅಧಿಕಾರವೇ ಇಲ್ಲ ಎನ್ನುವಂತಾಗಿತ್ತು. ಮೇಲ್ಪಂಕ್ತಿಯ ಜನರಿಗೆ ಅಧಿಕಾರವನ್ನು ತಾಲ್ಲೂಕು ಮಟ್ಟದಲ್ಲಿ ನೀಡಬೇಕೆನ್ನುವ ಉದ್ದೇಶದಿಂದಲೇ ತಾವು ಅನ್ಯಪಕ್ಷಕ್ಕೆ ಸೇರ್ಪಡೆಯಾಗಿದ್ದು, ಇಂದು ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಕಂಡು ಬಿಜೆಪಿ ಸೇರಿರುವುದಾಗಿ ತಿಳಿಸಿದರು.
ಕಾರ್ಯಕ್ರವåದಲ್ಲಿ ಪರಶಿವಮೂರ್ತಿ, ಶಿವರಾಂ, ಕಾರ್ತೀಕ್, ಕಾಳೇಗೌಡ, ಅಶೋಕ್, ಮಲಿಯೂರು ಶಿವಕುಮಾರ್, ಶಿವನಂಜು, ವೆಂಕಟೇಶ್, ರಾಮಲಿಂಗು, ತಾತಪ್ಪನಾಗರಾಜು, ಹೊಂಬಾಳಯ್ಯನವರು, ಸಿದ್ದೇಗೌಡ, ರವಿ, ಅತ್ತಹಳ್ಳಿ ಕೃಷ್ಣ, ಶಿವು, ಸುಭಾಷ್ ನಗರದ ಶಿವಣ್ಣ, ಗಿರೀಶ್ ಸೇರಿದಂತೆ ಬಿಜೆಪಿಯ ಮುಖಂಡರು, ನರೇಂದ್ರಮೋದಿ ಯುವಕ ಸಂಘದ ಪದಾಧಿಕಾರಿಗಳು ಇದ್ದರು.