ಕೆ.ಆರ್.ನಗರ: ರಾಜ್ಯದಲ್ಲಿ 3 ಸಾವಿರ ರೈತರ ಆತ್ಮಹತ್ಯೆಗೆ ಕಾರಣವಾದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ರೈತ ಬಾಂಧವರೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಿತ್ತೂಗೆಯುತ್ತಾರೆ. ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಎಚ್‌ಡಿಕೆ ಅವರನ್ನು ಮುಖ್ಯಮಂತ್ರಿ ಮಾಡಲಿದ್ದಾರೆ ಎಂದು ಶಾಸಕ ಮತ್ತು ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಹೇಳಿದರು.
ತಾಲೂಕಿನ ಹೆಬ್ಟಾಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಬಿರುಸಿನ ಮತಯಾಚನೆ ಮಾಡಿ ನಂತರ ಮಾತನಾಡಿದ ಅವರು, ಈ ಸರ್ಕಾರ ನುಡಿದಂತೆ ನಡೆಯದೆ ಪ್ರತಿಯೊಬ್ಬನ ತಲೆಯ ಮೇಲೂ 50 ಸಾವಿರ ರೂ.ಗಳ ಸಾಲವನ್ನು ಹೊರಿಸಿದ್ದೇ ದೊಡ್ಡ ಸಾಧನೆ ಎಂದು ಟೀಕಿಸಿದರು.
ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಮುಂದೆ ಎಚ್.ಡಿ.ಕುಮಾರಸ್ವಾಮಿ ಮೇ 18 ರಂದು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸುವುದು ನಿಶ್ಚಿತವಾಗಿದೆ. ಆ ದಿನವೇ ರೈತರ ಎಲ್ಲಾ ಸಾಲವನ್ನು ಸಂಪೂರ್ಣವಾಗಿ ಮನ್ನಾಮಾಡಿ ರೈತರ ಹಿತವನ್ನು ಕಾಯಲಿದ್ದಾರೆ ಎಂದರು.
ಕಳೆದ ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ ಕೈ ಪಕ್ಷದ ಅಭ್ಯರ್ಥಿ ಇದೀಗ ತಾಲೂಕಿನ ಅಭಿವೃದ್ಧಿ ನನ್ನಿಂದಲೇ ಆಯಿತು ಎಂದು ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಚುನಾವಣೆ ಗಿಮಿಕ್‌ಗಾಗಿ ಇದೀಗ ಜನರ ನೋವಿಗೆ ಸ್ಪಂದಿಸುವ ನಾಟಕವಾಡುತ್ತಿದ್ದು ಇಂತಹವರಿಗೆ ಜನತೆಯೇ ತಕ್ಕ ಉತ್ತರವನ್ನು ಈ ಚುನಾವಣೆಯಲ್ಲಿ ನೀಡಲಿದ್ದಾರೆ ಎಂದು ತಿಳಿಸಿದರು.
ನಮ್ಮ ಪಕ್ಷದ ಸರ್ಕಾರ ಇಲ್ಲದಿದ್ದರೂ ಸಹ ತಾಲೂಕಿನ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನವನ್ನು ತಂದು ಕೆಲಸ ನಿರ್ವಹಿಸಿದ್ದೇನೆ. ಇದನ್ನು ಸಹಿಸದೆ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಮೂರ್‍ನಾಲ್ಕು ಮಂದಿ ಮುಖಂಡರಿಗೆ ಹಣ ನೀಡಿ ನಮ್ಮನ್ನು ತೇಜೋವಧೆ ಮಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ತಾಲೂಕಿನ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಾಲೂಕಿನ ಅಭಿವೃದ್ಧಿ ಯಾರು ಮಾಡಿಸಿದ್ದಾರೆ ಎಂಬುವುದು ಇಡೀ ತಾಲೂಕಿನ ಜನತೆಗೆ ತಿಳಿದಿದೆ ಎಂದರು.
ಇದೇ ಸಂದರ್ಭದಲ್ಲಿ ಹಲವಾರು ಮಂದಿ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಹಲವಾರು ಮಹಿಳೆಯರು ಆರತಿ ಎತ್ತಿ ದೇಣಿಗೆ ನೀಡಿ ಶಾಸಕರಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಮೈಸೂರು ಮಾಜಿ ಮೇಯರ್‌ಗಳಾದ ಲಿಂಗಪ್ಪ, ಬೈರಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಮಾಜಿ ಯುವ ಜೆಡಿಎಸ್ ಅಧ್ಯಕ್ಷ ಎಚ್.ಕೆ.ಸುಜಯ್, ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಪಿ.ಶಿವಣ್ಣ, ಮಾಜಿ ಗ್ರಾಪಂ ಅಧ್ಯಕ್ಷರಾದ ಸಂತೋಷ್, ಮಾಲೇಗೌಡ, ಮುಖಂಡರಾದ ಮನುಗೌಡ, ದೀಪಕ್, ವಡ್ಡರವಿ, ಹರೀಶ್, ಎಚ್.ಪಿ.ಶಿವಪ್ಪ, ಕೋಳಿರಾಜು, ದಿನೇಶ್, ಅಶೋಕ, ರಂಜು, ಶೃಂಗಾರ್ ಸೇರಿದಂತೆ ಹಲವರು ಹಾಜರಿದ್ದರು.