Advertisement

ಒಗ್ಗಟ್ಟಿನ ಸಮನ್ವಯ ಸಾರಿದ BJP-JDS… ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ HDD, BSY

10:56 PM Mar 29, 2024 | Team Udayavani |

ಬೆಂಗಳೂರು: ಟ್ವೆಂಟಿ-20 ಸರಕಾರದ ಕಾಲದ ಮುನಿಸನ್ನು ಮರೆತು ಬಿಜೆಪಿ-ಜೆಡಿಎಸ್‌ ನಾಯಕರು ದಶಕಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, “ಮೋದಿ’ ಮಂತ್ರ ಪಠಿಸಿದ್ದಾರೆ. ಮೈತ್ರಿ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ರಾಜ್ಯ ಸರಕಾರದ ವಿರುದ್ಧ ಪ್ರಬಲ ಸಂದೇಶ ರವಾನೆ ಮಾಡುವುದಕ್ಕೆ ಶುಕ್ರವಾರ ನಡೆದ ಸಮನ್ವಯ ಸಮಿತಿ ಸಭೆ ವೇದಿಕೆಯಾಗಿದೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ಚುನಾವಣ ಉಸ್ತುವಾರಿ ರಾಧಾಮೋಹನ್‌ದಾಸ್‌ ಅಗರ್ವಾಲ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ತಳಹಂತದಿಂದಲೂ ಸಮನ್ವಯತೆ ಕಾಪಾಡಿಕೊಳ್ಳುವ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಎಚ್‌.ಡಿ.ದೇವೇಗೌಡ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದು, ಎರಡು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನ ನಡೆಸಿದ್ದಾರೆ. ಜತೆಗೆ 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಂತೂ ಸಿಎಂ ಸಿದ್ದರಾಮಯ್ಯ ಗರ್ವಭಂಗಕ್ಕೆ ಕರೆ ನೀಡುವ ಮೂಲಕ ರಣಕಹಳೆ ಮೊಳಗಿಸಿದ್ದಾರೆ.

ಯಾರ್ಯಾರು ಏನೆಂದರು ?

ಕುಹಕವಾಡುವವರಿಗೆ ತಕ್ಕ ಪಾಠ ಕಲಿಸಿ
2018ರಲ್ಲಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರೆ ಬಹುಶಃ ಈಗಲೂ ನಾವೇ ಅಧಿಕಾರದಲ್ಲಿರುತ್ತಿದ್ದೆವು. ಆದರೆ ವಿಧಿ ಆಟ ಬೇರೆಯದೇ ಆಗಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆಹ್ವಾನದ ಮೇಲೆಗೆ ಉಭಯ ಪಕ್ಷಗಳು ಒಂದೇ ವೇದಿಕೆಗೆ ಬಂದಿವೆ. ಇದು ಕೃತಕ ಮೈತ್ರಿಯಲ್ಲ. ನಮ್ಮ ಬಗ್ಗೆ ಕುಹಕವಾಡುವವರಿಗೆ ತಕ್ಕ ಪಾಠ ಕಲಿಸಬೇಕಿದೆ.
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

ದೇವೇಗೌಡರ ಬೆಂಬಲದಿಂದ ಆನೆಬಲ
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ವಿಜಯ ಪತಾಕೆ ಹಾರಿಸಬೇಕಿದೆ. ದೇವೇಗೌಡರ ಬೆಂಬಲದಿಂದ ನಮಗೆ ಆನೆಬಲ ಬಂದಂತಾಗಿದೆ. ದುಷ್ಟ ಕಾಂಗ್ರೆಸ್‌ ಸರಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಇವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ.
– ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಒಂದೇ ತಾಯಿಯ ಮಕ್ಕಳಂತೆ
ಬಿಜೆಪಿ-ಜೆಡಿಎಸ್‌ ಬೇರೆ ಅಲ್ಲ. ಒಂದೇ ತಾಯಿಯ ಮಕ್ಕಳಂತೆ ನಾವೆಲ್ಲರೂ ಒಂದಾಗಿ ನಿಂತು 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲೋಣ. ಲೋಕಸಭಾ ಚುನಾವಣೆ ಫ‌ಲಿತಾಂಶದ ಬಳಿಕ ಈ ಸರಕಾರ ಏನಾಗುತ್ತದೆ ಎಂದು ನಾನು ಈಗಲೇ ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ವನಾಶವಾಗುತ್ತದೆ. ವಿಳಾಸ ಇಲ್ಲದೇ ಹೋಗುತ್ತದೆ.
– ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next