ಮಹಾರಾಷ್ಟ್ರ: ಕಳೆದ ತಿಂಗಳು ರಾಜ್‌ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಶಿಲ್ಪಿ – ಗುತ್ತಿಗೆದಾರ ಜಯದೀಪ್ ಆಪ್ಟೆಯನ್ನು ಥಾಣೆಯಲ್ಲಿ ಬಂಧಿಸಿರುವುದಾಗಿ ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಯನ್ನು ಪ್ರಸ್ತುತ ಉಪ ಪೊಲೀಸ್ ಆಯುಕ್ತರ (ಡಿಸಿಪಿ) ಕಚೇರಿಯಲ್ಲಿ ಇರಿಸಲಾಗಿದ್ದು ಇದರೊಂದಿಗೆ ಶಿವಾಜಿ ಪ್ರತಿಮೆ ಕುಸಿತ ಪ್ರಕರಣದಲ್ಲಿ ಇದುವರೆಗೆ ಇಬ್ಬರ ಬಂಧನವಾದಂತಾಗಿದೆ.
ಒಂಬತ್ತು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಆಗಸ್ಟ್ 26 ರಂದು ಕುಸಿದು ಬಿದ್ದಿದೆ ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಓರ್ವನನ್ನು ಬಂಧಿಸಲಾಗಿದ್ದು ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು ಆರೋಪಿಯನ್ನು ಥಾಣೆಯ ಕಲ್ಯಾಣ್ ನಿಂದ ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶೇಷವೇನೆಂದರೆ, ದೊಡ್ಡ ಪ್ರತಿಮೆಗಳನ್ನು ನಿರ್ಮಿಸಿದ ಯಾವುದೇ ಪೂರ್ವ ಅನುಭವವಿಲ್ಲದ ಜಯದೀಪ್ ಆಪ್ಟೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಸಿಂಧುದುರ್ಗದ ಮಾಲ್ವಾನ್‌ನಲ್ಲಿರುವ ರಾಜ್‌ಕೋಟ್ ಕೋಟೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ರಚಿಸುವ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದ.
ಈ ಪ್ರತಿಮೆ ಕುಸಿತ ಮಹಾರಾಷ್ಟ್ರದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿತು, ಅಲ್ಲದೆ ಪ್ರತಿಪಕ್ಷಗಳು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಟೀಕಿಸಿದವು.
ಇದನ್ನೂ ಓದಿ: Signal Jump: ಚಾಲನೆ ವೇಳೆ ಮೊಬೈಲ್ ಬಳಕೆ… ಸಿಗ್ನಲ್ ಜಂಪ್‌ಗಿಂತ 4 ಪಟ್ಟು ಹೆಚ್ಚಳ: IIT