ಕೋಲಾರ: ಸ್ಥಳೀಯ ಮೀಸಲು ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿಯಾಗಿ ಜಯಪ್ರಸಾದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಬಿಎಸ್‌ಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಪಿ.ವಿ.ನಾಗಪ್ಪ ಘೋಷಣೆ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಂ ಅವರ 85ನೇ ವರ್ಷದ ಹುಟ್ಟುಹಬ್ಬ ಮತ್ತು ಲೋಕಸಭಾ ಅಭ್ಯರ್ಥಿ ಘೋಷಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಬಿಎಸ್‌ಪಿ ಅಭ್ಯರ್ಥಿಯಾಗಿ ಜಯಪ್ರಸಾದ್‌ರ ಹೆಸರು ಘೋಷಿಸುತ್ತಿದ್ದಂತೆ ಜಿಲ್ಲಾ ಮಟ್ಟದಿಂದ ಆಗಮಿಸಿದ್ದ ನೂರಾರು ಸದಸ್ಯರು-ಕಾರ್ಯಕರ್ತರು ಚಪ್ಪಾಳೆಗಳ ಮೂಲಕ ಅನುಮೋದನೆ ನೀಡಿದರು.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಮ್ಮರೆಡ್ಡಿಪುರ ಗ್ರಾಮದ ಜಯಪ್ರಸಾದ್, ಬ್ಯಾಂಕ್ ಮ್ಯಾನೇಜರ್ ಆಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕ್ಷೇತ್ರದಲ್ಲಿ ಬಡವ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಉತ್ತಮ ಸಂಪರ್ಕ ಹೊಂದಿದ್ದಾರೆಂದರು. ಬಿಎಸ್‌ಪಿ ಜಿಲ್ಲಾಧ್ಯಕ್ಷರು ಆಗಿರುವ ಜಯಪ್ರಸಾದ್, ಎಲ್ಲಾ 8 ತಾಲೂಕುಗಳಲ್ಲಿ ಮತ್ತು ಬೂತ್ ಮಟ್ಟದಲ್ಲಿ ಪಕ್ಷದ ಸಮಿತಿಗಳನ್ನು ರಚಿಸಿ ಉತ್ತಮ ಸಂಘಟನೆ ಮಾಡಿದ್ದಾರೆಂದರು.
ಬಿಜೆಪಿ – ಕಾಂಗ್ರೆಸ್ ಜನಸಾಮಾನ್ಯರ, ರೈತ, ಕಾರ್ಮಿಕರ ಅಭಿವೃದ್ಧಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಪಕ್ಷದ ಮುಖ್ಯಸ್ಥೆ ಮಾಯಾವತಿ ನೇತೃತ್ವದಲ್ಲಿ ಬಹುಜನರ ಮಧ್ಯೆ ತೆಗೆದುಕೊಂಡು ಹೋಗಲಾಗುತ್ತಿದೆ. ಪ್ರತಿ ಕಾರ್ಯಕರ್ತನೂ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಅಭ್ಯರ್ಥಿ ಜಯಪ್ರಸಾದ್ ಮಾತನಾಡಿ, ಪಕ್ಷದ ಹಿರಿಯ ಮುಖಂಡರು ಮತ್ತು ಜಿಲ್ಲೆಯ ಕಾರ್ಯಕರ್ತರು ತನ್ನ ಮೇಲೆ ವಿಶ್ವಾಸವಿಟ್ಟು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಇದರಿಂದಾಗಿ ತಮಗೆ ಜವಾಬ್ದಾರಿ ಹೆಚ್ಚಾಗಿದ್ದು ಅವರಿಗೆ ತಾನೂ ಸೇವಕನಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಈ ವೇಳೆ ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ಚಿಂತಾಮಣಿ ತಾಲೂಕು ಅಧ್ಯಕ್ಷ ನಾಗೇಶ್, ಶ್ರೀನಿವಾಸಪುರ-ರಾಜು, ಮುಳಬಾಗಲು-ವಿಜಯಕುಮಾರ್, ಕೋಲಾರ-ರಘುನಾಥ್, ಬಂಗಾರಪೇಟೆ-ಮೋಹನ್, ಮಾಲೂರು ಸುರೇಶ್, ಶಿಡ್ಲಘಟ್ಟ-ರಾಮು ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಮುಖಂಡರು ಕಾರ್ಯಕರ್ತರು ಇದ್ದರು.