Advertisement

ಟೋಲ್‌ ವಸೂಲಿ ಮನ್ನಾ  ಹೊಣೆ ಸಿಎಂ ಹೆಗಲಿಗೆ: ಹೆಗ್ಡೆ 

10:46 PM Dec 04, 2022 | Suhan S |

ಕುಂದಾಪುರ: ಹೆಜಮಾಡಿಯಲ್ಲಿ ಸುರತ್ಕಲ್‌ನ ಟೋಲ್‌ ದರವನ್ನೂ ಸೇರಿಸಿ ವಸೂಲಿ ಮಾಡುವ ಕ್ರಮಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಟೋಲ್‌ ದರ ಮನ್ನಾ ಮಾಡುವ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

Advertisement

ರವಿವಾರ ಇಲ್ಲಿ “ಉದಯವಾಣಿ’ ಜತೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು, ಶಾಸಕರು, ಸಚಿವರು ಇದ್ದು ಉಡುಪಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಎರಡೂ ಟೋಲ್‌ ದರ ಒಟ್ಟಾಗಿ ಪಡೆಯುವ ಹೆದ್ದಾರಿ ಇಲಾಖೆಯ ನಿರ್ಧಾರವನ್ನು ವಿರೋಧಿಸಲಾಗಿದೆ. ವಿವಿಧ ಟೋಲ್‌ಗ‌ಳಿಗೆ ಹಂಚಿ ಹಾಕುವುದಕ್ಕೂ ವಿರೋಧ ಇದೆ. ರಸ್ತೆ ನಿರ್ಮಾಣ ಕುರಿತು ಒಟ್ಟು 400 ಕೋ.ರೂ. ಪಾವತಿಸಬೇಕಿದ್ದು ಈಗಾಗಲೇ 250 ಕೋ.ರೂ. ಟೋಲ್‌ ಮೂಲಕ ಸಂಗ್ರಹಿಸಿ ಪಾವತಿಸಲಾಗಿದೆ. ಇನ್ನುಳಿದ 150 ಕೋ.ರೂ.ಗಳನ್ನು ಮನ್ನಾ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ. ಆಡಳಿತ ಶಿಷ್ಟಾಚಾರದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯೇ ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯಬೇಕಾದ ಕಾರಣ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದು ಅಲ್ಲೇ ಸ್ಪಷ್ಟ ತೀರ್ಮಾನ ಆಗಲಿದೆ. ಸಾಸ್ತಾನ ಹಾಗೂ ಹೆಜಮಾಡಿ ಟೋಲ್‌ ಗೇಟ್‌ನ ಅಂತರ ನಿಗದಿಗಿಂತ ಕಡಿಮೆ ಇದೆ ಎನ್ನುವುದನ್ನೂ ಚರ್ಚೆ ವೇಳೆ ಗಮನಕ್ಕೆ ತರಲಾಗಿದೆ ಎಂದರು.

ಪಕ್ಷದ ತೀರ್ಮಾನಕ್ಕೆ ಬದ್ಧ:

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಇದೆಯೇ ಎಂದಾಗ, ಜನರಿಂದ ಒತ್ತಡ ಬರುತ್ತಿದೆ. ಈಗ ಸಾಂವಿಧಾನಿಕ ಹುದ್ದೆಯಲ್ಲಿ ಇರುವುದರಿಂದ ಯಾವುದೇ ತೀರ್ಮಾನ ಮಾಡಿಲ್ಲ. ಪಕ್ಷ ಸೂಚಿಸಿದರೆ ಈ ಹುದ್ದೆಗೆ ರಾಜೀನಾಮೆ ನೀಡಿ ಪಕ್ಷ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ. ಯಾವ ಕ್ಷೇತ್ರ ಮೊದಲಾದವುಗಳ ಕುರಿತು ಯಾವುದೇ ಚರ್ಚೆ ನಡೆದಿಲ್ಲ, ಪಕ್ಷದಲ್ಲಿ ಈ ಕುರಿತಾದ ಬೆಳವಣಿಗೆ ನನ್ನ ಗಮನಕ್ಕೆ ಬಂದಿಲ್ಲ ಎಂದರು.

ಕೆಲಸ ಮಾಡುವ ಜನಪ್ರತಿನಿಧಿ ಬೇಕು ಎಂದು ಜನ ಬಯಸುತ್ತಿದ್ದಾರೆ. ಆದ್ದರಿಂದ ಯಾವುದಾದರೂ ಕ್ಷೇತ್ರದ ಶಾಸಕರ ಕೆಲಸ ಕಡಿಮೆ ಎಂದು ಜನರಿಗೆ ಹಾಗೂ ಪಕ್ಷಕ್ಕೆ ಅನಿಸಿದರೆ ಅಲ್ಲಿ ಸ್ಪರ್ಧಿಸಲು ಸೂಚಿಸಿದರೆ ನಾನು ನಿರಾಕರಿಸುವುದಿಲ್ಲ ಎಂದರು.

Advertisement

ಆಯ್ಕೆ ಮಾಡುವಾಗಲೇ ಯೋಚಿಸುವ ಅನಿವಾರ್ಯ:

ಕಾರ್ಯಾಂಗ ಹೇಳಿದಂತೆಯೇ ಎಲ್ಲವನ್ನೂ ಕೇಳುವುದಾದರೆ ಶಾಸಕಾಂಗದ ಅಗತ್ಯವೇನು. ಜನರಿಂದ ಆಯ್ಕೆಯಾದ ಜನಪ್ರತಿನಿಧಿ ಎನ್ನುವುದರಲ್ಲಿ ಅರ್ಥವೇ ಇಲ್ಲ. ಆದ್ದರಿಂದ ಆರಿಸುವಾಗಲೂ ಯೋಗ್ಯರನ್ನು ಆಯ್ಕೆ ಮಾಡಬೇಕು. ಅನಂತರ ಚಿಂತಿಸಿ ಪ್ರಯೋಜನ ಇಲ್ಲ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next