ಕುಂದಾಪುರ: ಜಾತಿಗಳ ಸಾಮಾಜಿಕ, ಆರ್ಥಿಕ ಮಟ್ಟದ ಕುರಿತು ಅಧ್ಯಯನ ನಡೆಸದೇ ನಿರ್ದಿಷ್ಟ ಜಾತಿಗೆ ಮೀಸಲಾತಿ ಕೊಡುವುದು, ರದ್ದು ಮಾಡುವುದು ಅಸಮಂಜಸವಾಗುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಅಧ್ಯಯನ, ಮಾಹಿತಿ ಕ್ರೋಡೀಕರಣ ಆಗಬೇಕಿದೆ. ಆದ್ದರಿಂದ ಆಯೋಗದಿಂದ ಮಧ್ಯಾಂತರ ವರದಿ ಯನ್ನಷ್ಟೇ ಸರಕಾರಕ್ಕೆ ನೀಡ ಲಾಗಿದ್ದು ಪೂರ್ಣಪ್ರಮಾಣದ ಮೀಸಲಾತಿ ವರದಿ ನೀಡಲು ಕಾಲಾವಕಾಶದ ಅಗತ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.
ಅವರು ಮಂಗಳವಾರ ಇಲ್ಲಿ ಸುದ್ದಿ ಗಾರರ ಜತೆ ಮಾತನಾಡಿ, ಮೀಸ ಲಾತಿ ಹಿಂಪಡೆಯುವ ಕುರಿತು, ಹೊಸ ಮೀಸಲಾತಿ ಕಲ್ಪಿಸುವ ಕುರಿತು ಈ ಹಿಂದಿನ ಸರಕಾರದ ನಿರ್ಧಾರಗಳನ್ನಾಗಲೀ, ಮುಂದಿ ನವರು ಮಾಡುತ್ತೇನೆ ಎಂಬ ಕುರಿತಾ ಗಲೀ ನಾನು ಹೇಳಿಕೆಗಳನ್ನು ನೀಡುವುದಿಲ್ಲ. ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಇದೆ. ಮಧ್ಯಾಂತರ ವರದಿಯಲ್ಲಿ ಯಾವುದೇ ಶಿಫಾರಸುಗಳನ್ನು ಮಾಡಲು ಬರುವುದಿಲ್ಲ. ಮಧ್ಯಾಂತರ ವರದಿಯೇ ನೀಡುವಂತಿಲ್ಲ ಎಂಬ ಆಕ್ಷೇಪವೂ ಬಂದಿತ್ತು. ಆದರೆ ಪೂರ್ಣ ಪ್ರಮಾಣದ ವರದಿ ಕೊಡುವ ಅಧಿಕಾರ ಹೊಂದಿದ ಮೇಲೆ ಮಧ್ಯಾಂತರ ವರದಿ ಕೊಡುವ ಅಧಿಕಾರವೂ ಇರುತ್ತದೆ ಎನ್ನುವುದು ಸಾಮಾನ್ಯ ತಿಳಿವಳಿಕೆ. ಈವರೆಗೆ ಮೀಸಲಾತಿ ಪಡೆದ ವರ್ಗ, ಅವರ ಈಗಿನ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಇತ್ಯಾದಿ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವುಗಳನ್ನು ಒಟ್ಟು ಮಾಡಿ ಪ್ರತ್ಯೇಕ ಸಾಫ್ಟ್ವೇರ್ ಮೂಲಕ ಸಿದ್ಧಪಡಿಸಬೇಕಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿ ಹೊಂದಿದವರನ್ನು ಮೀಸಲಾತಿಯಿಂದ ಹೊರಗಿಡ ಬಹುದು. ಜಾತಿ ಗಣತಿ ಮಾಹಿತಿ ಪಡೆದು ಈ ವರದಿ ಸಿದ್ಧಪಡಿಸಬೇಕಿದೆ ಎಂದರು.
ಜಾತಿಗಣತಿಯೇ ಬಹಿರಂಗವಾಗದ ಕಾರಣ ಜಾತೀಯ ಮೀಸಲಾತಿ ಕುರಿತು ಪ್ರತಿಕ್ರಿಯೆ ನೀಡುವುದು ಅಪ್ರಸ್ತುತವಾಗುತ್ತದೆ. ಈವರೆಗಿನ ಯಾವುದೇ ಮೀಸಲಾತಿ ಸಂವಿಧಾನಬಾಹಿರವಾಗಿ ಇರಲಿಲ್ಲ. ಜಾತಿ ಪ್ರಮಾಣಪತ್ರದಲ್ಲಿ ಇದುವರೆಗೂ ಸ್ಥಾನ ಪಡೆಯದ ಅನೇಕ ಜಾತಿಗಳನ್ನು ಹುಡುಕಿ ಹೆಸರು ಸೇರಿಸಿ ಅವರಿಗೆ ಪ್ರಮಾಣಪತ್ರ ಹಾಗೂ ಮೀಸಲಾತಿ ಸೌಕರ್ಯ ದೊರೆಯುವಂತೆ ಮಾಡ ಲಾಗಿದೆ ಎಂದರು.
ಸರಕಾರ ಬದಲಾದೊಡನೆ ಆಯೋಗದ ಸದಸ್ಯರು, ಅಧ್ಯಕ್ಷರ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ, ಆಯೋಗದ ಅವಧಿ ಡಿಸೆಂಬರ್ ವರೆಗೆ ಇದೆ. ಮೂರು ವರ್ಷಗಳ ಅವಧಿಗೆ ನೇಮಿಸಲಾಗಿದೆ. ಸರಕಾರದ ತೀರ್ಮಾನ ಗೊತ್ತಿಲ್ಲ ಎಂದರು.