ಶಿವಮೊಗ್ಗ: ಅಭಿವೃದ್ಧಿ ಹೆಸರಲ್ಲಿ ಆಗುತ್ತಿರುವ ಪರಿಸರ ನಾಶ ನಿಲ್ಲಬೇಕು ಎಂದು ಅಜೀಂ ಪ್ರೇಮ್‌ಜೀ ವಿವಿಯ ಹವಾಮಾನ ಬದಲಾವಣೆ ಹಾಗೂ ಸುಸ್ಥಿರತೆ ವಿಭಾಗದ ನಿರ್ದೇಶಕಿ ಡಾ| ಹರಿಣಿ ನಾಗೇಂದ್ರ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಮಾನಸ ಟ್ರಸ್ಟ್‌ನಿಂದ ಡಾ|ಅಶೋಕ್ ಪೈ ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತದ ನಗರಗಳ ಅಭಿವೃದ್ಧಿ ವಿಷಯದಲ್ಲಿ ಪರಿಸರ ವಿಜ್ಞಾನದ ಚಿಂತನೆ ಕುರಿತು ಉಪನ್ಯಾಸ ನೀಡಿದರು.
ಮನುಷ್ಯನ ದುರಾಸೆಗೆ ಕಾಡು ನಾಶವಾಗುತ್ತಿದೆ. ಜೊತೆಗೆ ಅಭಿವೃದ್ಧಿಯ ಹೆಸರಲ್ಲೂ ಕಾಡು ನಾಶವಾಗುತ್ತಿದೆ. ಇದರಿಂದ ತಾಪಮಾನ ಹೆಚ್ಚಾಗುತ್ತದೆ. ಇದನ್ನು ತಡೆಯಲು ಹೆಚ್ಚು ಮರಗಳನ್ನು ಬೆಳೆಸಬೇಕು. ಪರಿಸರಕ್ಕೂ ಭೂಮಿಗೂ ತೊಂದರೆಯಾಗದ ರೀತಿಯಲ್ಲಿ ಅಭಿವೃದ್ಧಿಗಳು ಇರಬೇಕು ಎಂದರು.
ಇಂದು ಪರಿಸರದ ಅಸಮತೋಲನ ಜಾಗತಿಕ ಸಮಸ್ಯೆಯಾಗುತ್ತಿದೆ. ಕಾಡುಗಳೆಲ್ಲ ನಾಶವಾಗುತ್ತಿರುವುದರಿಂದ ಇಡೀ ಭೂ ಮಂಡಲದ ತಾಪಮಾನವೇ ಏರಿಕೆಯಾಗುತ್ತದೆ. ಮರಗಳನ್ನು ಬೆಳೆಸುವುದರಿಂದ ವಾಯುಮಾಲಿನ್ಯ , ಭೂ ಸವಕಳಿ, ಮಣ್ಣಿನ ಆರೋಗ್ಯ ಕಾಪಾಡುವುದರ ಜತೆಗೆ ಮತ್ತು ಭೂಮಿ ಮೇಲಿನ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಿದೆ. ಕೇವಲ ಕಾಂಕ್ರಿಟ್ ರಸ್ತೆ, ಬಿಲ್ಡಿಂಡ್‌ಗಳ ನಿರ್ಮಾಣದಿಂದ ಅಭಿವೃದ್ಧಿಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದರು.
ಕೆರೆಗಳ ನಾಶ ಹಾಗೂ ನದಿಗಳು ಬತ್ತಿ ಹೋಗುತ್ತಿರುವುದರಿಂದ ಸಾಕಷ್ಟು ಜಲಚರಗಳ ಸಂತತಿ ನಾಶವಾಗುತ್ತಿದೆ. ಸಮುದ್ರವೂ ಕೂಡ ಇಂದು ಕೊಳಚೆಯಿಂದ ಮುಕ್ತವಾಗಿಲ್ಲ. ಇವುಗಳ ಬಗ್ಗೆ ಮನುಷ್ಯ ಎಚ್ಚೆತ್ತುಕೊಳ್ಳದಿದ್ದರೆ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.
ಮಾನಸ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ನಿರ್ದೇಶಕ ಡಾ|ರಾಜೇಂದ್ರ ಚೆನ್ನಿ, ಮಾನಸ ಟ್ರಸ್ಟ್‌ನ ಟ್ರಸ್ಟಿ ಡಾ| ಪ್ರೀತಿ ಶಾನ್‌ಭಾಗ್, ನಿರ್ದೇಶಕಿ ಡಾ| ರಜನಿ ಪೈ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಚಾರ್ಯೆ ಡಾ|ಸಂಧ್ಯಾ ಕಾವೇರಿ, ಡಾ| ಕೆ.ಆರ್.ಶ್ರೀಧರ್, ಎಸ್.ಪಿ. ಶೇಷಾದ್ರಿ,ಜಯಂತ್ ಕಾಯ್ಕಿಣಿ ಮತ್ತಿತರರು ಇದ್ದರು.