ಕಲಾಯಿ ಮಾಡಿಸಿದ ದೊಡ್ಡ ದೊಡ್ಡ ಹಿತ್ತಾಳೆ ಪಾತ್ರೆಗಳ ಹಿಂಡು ವ್ಯಾನಿನಿಂದ ಇಳಿಯುತ್ತಿದ್ದಂತೆ ಪುಳಿಯೋಗರೆ ಪರಿಮಳ ಬೀರುತ್ತದೆ. ಸುತ್ತಲಿದ್ದವರಿಗೆ ಇದೇ ಅಲಾರಂ. ಫಳಫಳ ಹೊಳೆಯುವ ಪಾತ್ರೆಗಳು ಹೋಟೆಲ್ ಒಳಗೆ ಕೂರುವ ಹೊತ್ತಿಗೆ ಹಸಿವು ತಾಳ ಹಾಕುತ್ತದೆ. ನೋಡ ನೋಡುತ್ತಲೇ ಜನಸಂದಣಿ. ಕ್ಷಣಾರ್ಧದಲ್ಲಿ ಎಲ್ಲವೂ ಖಾಲಿ!
ಪುಳಿಯೋಗರೆ, ಮೊಸರನ್ನ ತಿನ್ನಬೇಕು ಅಂದರೆ ನೀವು ಜಯನಗರ 7ನೇ ಬ್ಲಾಕಿನ ನ್ಯಾಷನಲ್ ಕಾಲೇಜು ರಸ್ತೆಯಲ್ಲಿರುವ ” ಅಯ್ಯಂಗಾರ್ ಇನ್ ‘ಹೋಟೆಲ್‌ಗೆ ಹೋಗಬೇಕು. ಇದೊಂಥರ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಪ್ರಸಾದದಂತೆ. ಒಂದು ಸಲ ತಿಂದರೆ ಮತ್ತೂಂದು ಸಲ ನಿಮ್ಮ ಹೊಟ್ಟೆ ಹಠ ಮಾಡದೇ ಇದ್ದರೆ ಕೇಳಿ. ದೊಡ್ಡದೊಡ್ಡ ಕಡಾಯಿಗಳಲ್ಲಿ ಬಿಸಿಬಿಸಿ ಸಾರು, ಹುಳಿ ಬಂದಾಗಲಂತೂ ಹಸಿವು
ಮಿತಿಮೀರದೇ ಇರದು. ಈ ಅಯ್ಯಂಗಾರ್ ರುಚಿಯೇ ಹೀಗೆ. ಒಂದು ಸಲ ತಿಂದರೆ ಮತ್ತೂಮ್ಮೆ ಕೇಳದೇ ಇರಲು ಬಿಡುವುದಿಲ್ಲ. ಯಾವುದಕ್ಕೂ ಸೋಡ ಹಾಕೋಲ್ಲ. ಉಪ್ಪು, ಹುಳಿ, ಖಾರ ಎಲ್ಲವೂ ಸಮಸಮ. ಯಾವುದೂ ಜಾಸ್ತಿಯೂ ಇಲ್ಲ, ಕಡಿಮೆಯೂ ಇಲ್ಲ.
ಇಲ್ಲಿ ಮರೆಯದೇ ತಿನ್ನಲೇ ಬೇಕಾದ ಇನ್ನೊಂದು ತಿಂಡಿ ಎಂದರೆ ಪೊಂಗಲ್. ಖಾರ ಮತ್ತು ಸಿಹಿ ಎರಡೂ ಸಿಗುತ್ತದೆ. ಆದರೆ ಪ್ರತಿದಿನ ಅಲ್ಲ. ಬಿಸಿಬಿಸಿಯಾದ, ಶುಂಠಿ, ಮೆಣಸಿನ ಘಮಲು ಮೂಗಿಗೆ ಅಡರುವ ಖಾರಾ ಪೊಂಗಲ್ಲಿನ ರುಚಿಯೇ ಅದ್ಬುತ. ಗಟ್ಟಿಯಲ್ಲದ, ನೀರು ನೀರಾದ ಪೊಂಗಲ್ಲಿನ ರುಚಿ ಇರುವುದು ಇದಕ್ಕೆ ಬಳಸುವ ತುಪ್ಪ, ಗೋಡಂಬಿಯಿಂದಲೇ. ತುರಿದು ಹಾಕಿದ ಕೊಬ್ಬರಿ ಆಗಾಗ ಬಾಯಿಗೆ ಸಿಗುತ್ತಿರುತ್ತದೆ. ಇವರ ಸಿಹಿಪೊಂಗಲ್ಲಿಗೂ ಕೂಡ ಕಾಡುವ ರುಚಿ ಇದೆ. ಪಚ್ಚಕರ್ಪೂರ, ಹಸುವಿನ ತುಪ್ಪದ ಘಮಲು ಇರುತ್ತದೆ. ತುರಿದ ಕೊಬ್ಬರಿ ಜೊತೆಗೆ ಆಗಾಗ ಬಾಯಿಗೆ ಸಿಗುವ ಗೋಡಂಬಿ ಸಾತ್ ರುಚಿಯನ್ನು ಮತ್ತಷ್ಟು ಹೆಚ್ಚಿಸಿದೆ. ಖಾರಾ ಪೊಂಗಲ್, ಸಿಹಿ ಪೊಂಗಲ್ ಸದಾ ನಗುನಗುತ್ತಿರುತ್ತದೆ. ಅನ್ನ ಮುದ್ದೆಯಾಗಿರುವುದಿಲ್ಲ. ಅಗುಳುಗಳು ತಟ್ಟೆ ಪೂರ್ತಿ ಓಡಾಡುವುದರಿಂದ ಭಿನ್ನವಾದ ರುಚಿ. ಇನ್ನು ತುಂಬ ಕೊಬರಿ, ಮೆಣಸು, ಎಳ್ಳು ಹಾಕಿ ಮಾಡಿರುವ ಪುಳಿಯೊಗರೆ ರುಚಿ ತಿಂದವನೇ ಬಲ್ಲ. ಮೊಸರನ್ನು ಕೂಡ ಇಲ್ಲಿ ವಿಶೇಷ.
ಪುಳಿಯೋಗರೆ ತಿಂದ ಮೇಲೆ ಚೆನ್ನಾಗಿದೆ ಹೇಗೆ ಮಾಡ್ತೀರಿ ಅಂತ ಕೇಳಿಬಿಡುವುದಕ್ಕಿಂತ ಅಲ್ಲೆ ಮಾರುವ ಗೊಜ್ಜು ಕೊಳ್ಳುವುದು ಲೇಸು. ಅಲ್ಲದೇ, ಅನ್ನ ಸಾರು, ಕೂಟು ಕೂಡ ದೇವಾಲಯದ ಪ್ರಸಾದವೇ ಸರಿ. ಅನ್ನಸಾರು ತಿನ್ನುವಾಗಿನ ಏಕತಾನತೆ ಹೊಡೆದೋಡಿಸಲು ವಡೆ, ಬೋಂಡಾ ಕೂಡ ಸಿಗುತ್ತದೆ. ಮದ್ರಾಸ್ ಸಾಂಬರ್ ಇಲ್ಲಿ ಒಂದೇ ಕಡೆ ಸಿಗೋದು. ಮಜ್ಜಿಗೆ ಹುಳಿ ರುಚಿ ತಿಂದ ಮೇಲೆ ನಾಲಿಗೆ ಮೇಲೆ ನಿಂತು ಬಿಡುವಷ್ಟು ಸ್ವಾದ.
ಇಡೀ ಹೋಟೆಲ್ ಶುದ್ಧ ಪರಿಶುದ್ದ. ಕುಡಿಯಲು ಬಿಸ್ಲೆರಿ ನೀರು. ಫಳಫಳ ಹೊಳೆಯುವ ಅಗಲವಾದ ತಟ್ಟೆಗಳನ್ನು ನೋಡುತ್ತಿದ್ದಂತೆ ಊಟ ಮಾಡುವ ಹುಮ್ಮಸ್ಸು ಯಾರಿಗೇ ತಾನೇ ಬರೋಲ್ಲ ಹೇಳಿ? ರುಚಿ ಎಲ್ಲಿಂದ, ಹೇಗೆ ಅಂತ ಹೋಟೆಲ್ ಮಾಲೀಕ್ ಅರ್ಜುನ್-ಚೇತನ್‌ರ ಕೇಳಿದರೆ ಅವ್ರು ಬೊಟ್ಟು ಮಾಡೋದು ಅವರ ಅಜ್ಜಿ ಕಡೆ. “ನಮ್ಮಜ್ಜಿ ಹೀಗೆ ರುಚಿರುಚಿಯಾಗಿ ಅಡುಗೆ ಮಾಡ್ತಾ ಇದ್ದರು. ಹೇಗೆ ಮಾಡೋದು ಅಂದರೆ ಕಣ್ಣಅಂದಾಜಿನ ಹೀಗೆ, ಹೀಗೆ ಹಾಕಬೇಕು ಅಂದರು. ಅದನ್ನು ತೂಕ ಹಾಕಿ, ಇಷ್ಟು ಜನಕ್ಕೆ ಇಷ್ಟು ಅನ್ನೋ ಲೆಕ್ಕ ಮಾಡಿಕೊಂಡೆವು. ಅಜ್ಜಿಯ ರುಚಿ ನಾವೇ ತಿಂದರೆ ಹೇಗೆ? ಅದಕ್ಕೆ ಎಲ್ಲರಿಗೂ ಬಡಿಸಬೇಕು, ಅದು ಶುದ್ಧವಾಗಿರಬೇಕು ಅಂತಲೇ ಹೀಗೆ ಮಾಡಿದ್ದು’.
ಅಯ್ಯಂಗಾರ್ ಇನ್ ಹೋಟೆಲ್ ಎರಡು ಬ್ರಾಂಚು ಇದೆ. ಒಂದು ಜಯನಗರ ಇನ್ನೊಂದು ಪೀಣ್ಯದಲ್ಲಿ. ಎರಡೂ ಕಡೆಗೆ ಬೇಕಾದ ತಿಂಡಿಗಳ ಸಿದ್ಧವಾಗುವುದು ದೇವಯ್ಯ
ಪಾರ್ಕಿನ ಮನೆಯಲ್ಲಿ. ಅಲ್ಲಿ ಸೆಂಟ್ರಲೈಸ್ಡ್ ಕಿಚನ್ ಇದೆ. ಇದಕ್ಕಾಗಿ 10-15 ಜನ ಕೆಲಸ ಮಾಡುತ್ತಾರೆ. “ಅಡುಗೆ ಮನೆ ಒಂದೇ ಕಡೆ ಇದ್ದರೆ ತಿಂಡಿಗಳ ಗುಣಮಟ್ಟ, ರುಚಿ ಎರಡೂ ಹೆಚ್ಚಾ ಕಡಿಮೆ ಆಗದಂತೆ ನಿರ್ವಹಣೆ ಮಾಡಬಹುದು’ ಅಂತಾರೆ.
ರುಚಿ ಚೆನ್ನಾಗಿದೆ ಅಂತ ಜೇಬಿಗೆ ಕನ್ನ ಹಾಕುವ ಬೆಲೆ ಏನೂ ಇಟ್ಟಿಲ್ಲ. ಪ್ಲೇಟಿಗೆ 50 ರೂ. ಡಬಲ್ ಮಿಕ್ಸ್ ತಗೊಂಡರೆ ಎರಡು ರೀತಿ ತಿಂಡಿ, ಥ್ರಿಬಲ್ ಮಿಕ್ಸ್ ಅಂದರೆ ಮೂರು ರೀತಿಯ ತಿಂಡಿ ಒಂದೇ ತಟ್ಟೆಯಲ್ಲಿ ಸಿಗುತ್ತದೆ. “ಎಷ್ಟೋ ಜನಕ್ಕೆ ಎರಡು, ಮೂರು ತಿಂಡಿ ತಿನ್ನಬೇಕು ಅಂತ ಆಸೆಯಾಗುತ್ತದೆ. ಒಂದು ಪುಳಿಯೋಗರೆ ತಗೊಂಡ್ರೆ ಜಾಸ್ತಿ ಆಗುತ್ತದೆ. ಅವರಿಗೆ ನೆರವಾಗಲಿ ಅಂತ ಈ ರೀತಿ ಮಾಡಿದ್ದೀವಿ’ ಅಂತಾರೆ ಹೋಟೆಲ್ ನಿರ್ವಹಣೆ ಮಾಡುವ
ಮಧು.
ಅಂದಹಾಗೇ ಇಲ್ಲಿ ಊಟ-ತಿಂಡಿ ಸಿಗುವ ಸಮಯ- ಮಧ್ಯಾಹ್ನ 12ರಿಂದ 3 ಮಾತ್ರ.
ಭಾನುವಾರ ರಜೆ.
ಸಂಪರ್ಕ-9886481618, 9986033963
ಕಟ್ಟೆ ಗುರುರಾಜ್