Advertisement

ಜಯಾ ಕೊಡನಾಡ್‌ ಎಸ್ಟೇಟ್‌ ಕೊಲೆ ಪ್ರಕರಣಕ್ಕೆ ವಿಚಿತ್ರ ಟ್ವಿಸ್ಟ್‌

03:45 AM Apr 30, 2017 | Team Udayavani |

ನವದೆಹಲಿ: ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ, ಕೆಲವೇ ಗಂಟೆಗಳ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳು ಪ್ರಮುಖ ಪ್ರಕರಣವೊಂದರ ಜತೆ ತಳಕು ಹಾಕಿಕೊಂಡಿದ್ದು, ಸಿನಿಮೀಯ ರೀತಿಯಲ್ಲಿ ನಡೆಯುತ್ತಿರುವ ಘಟನೆಗಳು, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಕೊಡನಾಡ್‌ ಎಸ್ಟೇಟ್‌ನಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣಕ್ಕೆ ಹೊಸ ತಿರುವು ನೀಡಿವೆ.

Advertisement

ದೃಶ್ಯ 1: ಶುಕ್ರವಾರ ರಾತ್ರಿ 8.45ರ ಸಮಯ. ತಮಿಳುನಾಡಿನ ಸೇಲಂ-ಉಲುಂದೂರ್‌ಪೇಟ್‌ ರಾಷ್ಟ್ರೀಯ ಹೆದ್ದಾರಿ. ಬೈಕ್‌ ಸವಾರನೊಬ್ಬ ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ತಿರುವು ಪಡೆಯುತ್ತಿರುತ್ತಾನೆ. ಅದೇ ವೇಳೆಗೆ ಬೆಂಗಳೂರಿನಿಂದ ಪೆರಂಬಲೂರು ಕಡೆ ವೇಗವಾಗಿ ಹೊರಟಿದ್ದ ಕಾರು, ಬೈಕ್‌ಗೆ ಡಿಕ್ಕಿ ಹೊಡೆಯುತ್ತದೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದುದು ಕನಕರಾಜು(36) ಎಂಬ ವ್ಯಕ್ತಿ. ಆತ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಡುತ್ತಾನೆ!

ದೃಶ್ಯ 2: ಬುಧವಾರ ನಸುಕಿನ 5.30ರ ಸಮಯ. ಕೇರಳದ ಪಾಲಕ್ಕಾಡ್‌-ತ್ರಿಶೂರ್‌ ರಾಷ್ಟ್ರೀಯ ಹೆದ್ದಾರಿಯ ಕನ್ನಾಡಿ ಜಂಕ್ಷನ್‌ನಲ್ಲಿ ಕಾರು ಮತ್ತು ಲಾರಿ ಮುಖಾಮುಖೀ. ಒಳಗಿರುವವರಾರೂ ಬದುಕಿರಲು ಸಾಧ್ಯವೇ ಇಲ್ಲ ಎನ್ನುವಂತಿದೆ ಕಾರಿನ ಸ್ಥಿತಿ. ಕಾರಿನಲ್ಲಿದ್ದ ಮಹಿಳೆ ಮತ್ತು ಮಗು ಮೃತಪಟ್ಟು, ಕಾರು ಚಾಲನೆ ಮಾಡುತ್ತಿದ್ದ ಕೆ.ವಿ.ಸಯಾನ್‌ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಳ್ಳುತ್ತಾನೆ. ಚಿಂತಾಜನಕ ಸ್ಥಿತಿಯಲ್ಲಿರುವ ಆತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಎರಡೂ ಘಟನೆಗಳು ನಿತ್ಯ ನಡೆಯುವ ಅನಿರೀಕ್ಷಿತ ಮತ್ತು ಸಹಜ ಅಪಘಾತಗಳಂತೆಯೇ ಕಾಣುತ್ತವೆ. ಆದರೆ ತಮಿಳುನಾಡು ಪೊಲೀಸರಿಗೆ ಈ ಘಟನೆಗಳಲ್ಲಿ ಪ್ರಮುಖ ಪ್ರಕರಣ ಒಂದರ ಒಳಸುಳಿ ದೊರೆತಿದೆ. ಪೊಲೀಸ್‌ ಕಣ್ಣುಗಳಿಂದ ನೋಡಿದಾಗ, ಅವರ ದೃಷ್ಟಿಯಲ್ಲೇ ಯೋಚಿಸಿದಾಗ ಈ ಅಪಘಾತಗಳಿಗೂ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಕೊಡನಾಡ್‌ ಎಸ್ಟೇಟ್‌ ಮರ್ಡರ್‌ ಮಿಸ್ಟರಿಗೂ ಏನೋ ಸಂಬಂಧವಿದೆ ಎಂಬ ಅನುಮಾನ ಬಾರದೆ ಇರಲು ಸಾಧ್ಯವೇ ಇಲ್ಲ!

ಏ.23ರ ದರೋಡೆ:
ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರಿಗೆ ಸೇರಿರುವ, ಊಟಿಯಲ್ಲಿನ ಕೊಡನಾಡ್‌ಎಸ್ಟೇಟ್‌ ಮೇಲೆ ಏ.23ರಂದು ಡಕಾಯಿತರು ದಾಳಿ ನಡೆಸಿ, ಸೆಕ್ಯುರಿಟಿ ಗಾರ್ಡ್‌ ಒಬ್ಬನನ್ನು ಕೊಂದಿದ್ದರು. ಮತ್ತೂಬ್ಬ ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದ. ನಂತರ ಎಸ್ಟೇಟ್‌ ಬಂಗಲೆ ಒಳಹೊಕ್ಕ ದುಷ್ಕರ್ಮಿಗಳು, ನೂರಾರು ಕೋಟಿ ಮೌಲ್ಯದ ಆಸ್ತಿ ದಾಖಲೆಗಳನ್ನು ಹೊತ್ತೂಯ್ದಿದ್ದರು.

Advertisement

ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು, ಈ ಸಂಬಂಧ ಕೊಡನಾಡ್‌ ಎಸ್ಟೇಟ್‌ನಲ್ಲಿ ಜಯಾ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮತ್ತು 2013ರಲ್ಲಿ ಆ ಕೆಲಸ ಬಿಟ್ಟಿದ್ದ ಕನಕರಾಜು ಮತ್ತು ಆತನ ಆಪ್ತ, ಕೊಯಮತ್ತೂರ್‌ನ ಬೇಕರಿಯೊಂದರಲ್ಲಿ ಸಹಾಯಕನಾಗಿದ್ದ ಕೆ.ವಿ.ಸಯಾನ್‌ ಎಂಬುವವರನ್ನು ಪ್ರಮುಖ ಆರೋಪಿಗಳೆಂದು ಗುರುತಿಸಿದ್ದರು. ಈಗ ಅಪಘಾತದಲ್ಲಿ ಮೃತಪಟ್ಟಿರುವುದು ಮತ್ತು ಗಂಭೀರವಾಗಿ ಗಾಯಗೊಂಡಿರುವುದು ಇದೇ ಎರಡು ಪ್ರಮುಖ ಆರೋಪಿಗಳು!

ಇದೆಲ್ಲ ಕಾಕತಾಳೀಯವೇ?
ಮೊದಲು ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಕನಕರಾಜು ಮೃತಪಡುತ್ತಾನೆ. ಈ ಘಟನೆ ಸಂಭವಿಸಿದ 10 ಗಂಟೆಗಳ ಅಂತರದಲ್ಲಿ ಕೇರಳದಲ್ಲಿ ಮತ್ತೂಂದು ಅಪಘಾತದಲ್ಲಿ ಸಯಾನ್‌ ಗಂಭೀರವಾಗಿ ಗಾಯಗೊಳ್ಳುತ್ತಾನೆ. ಇದಾಗಿ ಕೆಲವೇ ಗಂಟೆಗಳಲ್ಲಿ, ಏ.23ರಂದು ಕೊಡನಾಡ್‌ ಎಸ್ಟೇಟ್‌ನಿಂದ ಕಳುವಾಗಿದ್ದ, ಜಯಲಲಿತಾ ಅವರಿಗೆ ಸೇರಿದ ನೂರಾರು ಕೋಟಿ ಮೌಲ್ಯದ ಆಸ್ತಿ ದಾಖಲೆಗಳಿದ್ದ ಮೂರು ಸೂಟ್‌ಕೇಸ್‌ಗಳು ತಮಿಳುನಾಡು ಪೊಲೀಸರಿಗೆ ದೊರೆಯುತ್ತವೆ. ಈ ಎಲ್ಲ ಘಟನೆಗಳು ಕಾಕತಾಳೀಯವೇ?

ಘಟನೆಗಳ ಕುರಿತು ತಮಿಳುನಾಡು ಪೊಲೀಸರು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲವಾದರೂ, ಪ್ರಕರಣದ ಪ್ರಮುಖ ಆರೋಪಿಗಳಿಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ನಡೆದ ಅಪಘಾತಗಳಲ್ಲಿ ಮೃತಪಟ್ಟಿರುವುದರಿಂದ ಮರ್ಡರ್‌ ಮಿಸ್ಟರಿ ಪ್ರಕರಣ ಕುತೂಹಲಕಾರಿ ಘಟ್ಟ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next