Advertisement

ಜಯದೇವ ಪರಿಪೂರ್ಣ ಆಸ್ಪತ್ರೆಗೆ ಚಿಂತನೆ

03:11 PM Aug 14, 2022 | Team Udayavani |

ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿನ ಹೃದ್ರೋಗಿಗಳ ಪಾಲಿಗೆ ಭಾಗ್ಯದ ಬಾಗಿಲು ಎಂದೇ ಬಿಂಬಿತವಾಗಿರುವ ಬಹು ನಿರೀಕ್ಷಿತ ಜಯದೇವ ಹೃದ್ರೋಗ ಪರಿಪೂರ್ಣ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಹೆಚ್ಚುವರಿ ಅನುದಾನ ನೀಡಲು ಕೂಡ ಸಜ್ಜಾಗಿದೆ.

Advertisement

ಹೌದು. ಕಿತ್ತೂರು ಕರ್ನಾಟಕ ಭಾಗದ ಬಹು ನಿರೀಕ್ಷಿತ ಜಯದೇವ ಹೃದ್ರೋಗ ಚಿಕಿತ್ಸಾ ಆಸ್ಪತ್ರೆಯ ಶಾಖೆ ಸ್ಥಾಪಿಸಲು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಘೋಷಣೆಯಾದ ಕೇವಲ ಒಂದೇ ವಾರದಲ್ಲಿ ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿ ಸಮೀಪದ ರಾಯನಾಳ ಗ್ರಾಮದಲ್ಲಿ ಹೃದ್ರೋಗ ಆಸ್ಪತ್ರೆಗೆ ಸ್ಥಳವನ್ನು ನಿಗದಿಪಡಿಸಿತ್ತು.

2022-23ರ ರಾಜ್ಯ ಬಜೆಟ್‌ನಲ್ಲಿ 250 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ನೀಡಿದ ಬೆನ್ನಲ್ಲೇ ಕೆಲಸಕ್ಕೂ ವೇಗ ಸಿಕ್ಕಿದ್ದು, ಆದರೆ ಇಷ್ಟೇ ಹಣದಲ್ಲಿ ಪರಿಪೂರ್ಣ ಹೃದ್ರೋಗ ಆಸ್ಪತ್ರೆ ನಿರ್ಮಾಣ ಅಸಾಧ್ಯ ಎನ್ನುವ ಮಾಹಿತಿಯನ್ನು ಹಿರಿಯ ವೈದ್ಯರ ತಂಡ ಸರ್ಕಾರಕ್ಕೆ ತಿಳಿಸಿದೆ. ಹೀಗಾಗಿ ಜಯದೇವ ಆಸ್ಪತ್ರೆಯ ಶಾಖೆಯಾಗಿ ಸುಸಜ್ಜಿತ ಪರಿಪೂರ್ಣ ಸೌಲಭ್ಯಗಳನ್ನೊಳಗೊಂಡ ಆಸ್ಪತ್ರೆಯನ್ನೇ ನಿರ್ಮಿ ಸಲು ಸರ್ಕಾರ ಹೊಸ ಯೋಜನೆ ರೂಪಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಿನ ಕೂಸಾಗಿರುವ ಹೃದ್ರೋಗ ಸಂಸ್ಥೆಯನ್ನು ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಸಾರಿಗೆ-ಸಂಪರ್ಕ, ಸಂವಹನ ಮತ್ತು ನುರಿತ ವೈದ್ಯರ ಲಭ್ಯತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಜಯದೇವ ಹೃದ್ರೋಗ ಸಂಸ್ಥೆ ಇದ್ದರೆ ಸೂಕ್ತ ಎನ್ನುವ ಸಲಹೆಯನ್ನು ನುರಿತ ವೈದ್ಯರು ನೀಡಿದ್ದರಿಂದ ರಾಯನಾಳವನ್ನು ಅಂತಿಮಗೊಳಿಸಲಾಗಿದೆ.

ಹೈಟೆಕ್‌ ಯಂತ್ರೋಪಕರಣ ವ್ಯವಸ್ಥೆ: ಹೃದ್ರೋಗ ಆಸ್ಪತ್ರೆಗೆ ಅತ್ಯಾಧುನಿಕ ಸೌಕರ್ಯ ಒದಗಿಸಿ ಕೊಡುವ ದೃಷ್ಟಿಯಿಂದ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ವೈದ್ಯಕೀಯ ರಂಗದಲ್ಲಿ ಸಾಕಷ್ಟು ಉತ್ತಮ ಚಿಕಿತ್ಸೆಗೆ ಅನುಕೂಲವಾಗುವ ಯಂತ್ರೋಪಕರಣಗಳ ಪೂರೈಕೆ, ಅದಕ್ಕೆ ಅಗತ್ಯವಾದ ಹೆಚ್ಚುವರಿ ಹಣಕಾಸು ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂದ ಬಜೆಟ್‌ ನಲ್ಲಿ ಪ್ರಸ್ತಾಪಿಸಿದ 250 ಕೋಟಿ ರೂ. ಸಾಲದು ಎಂಬ ಹಿರಿಯ ವೈದ್ಯರ ಸಲಹೆಯನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಸ್ವೀಕರಿಸಿದ್ದು, ಇದಕ್ಕೆ ಅಗತ್ಯವಾದ ಹೆಚ್ಚುವರಿ ಹಣಕಾಸು ನೆರವು ನೀಡಲು ಶೀಘ್ರವೇ ಇದನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಅಷ್ಟೇಯಲ್ಲ ಪರಿಪೂರ್ಣ ವೈದ್ಯಕೀಯ ವ್ಯವಸ್ಥೆ ಕಾರ್ಯ ನಿರ್ವಹಿಸಲು ಬೇಕಾಗುವ ಹೆಚ್ಚುವರಿ ಅನುದಾನವನ್ನು ಕೂಡ ಶೀಘ್ರವೇ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎನ್ನುತ್ತಾರೆ ಸರ್ಕಾರದ ಹಿರಿಯ ಅಧಿಕಾರಿಗಳು.

Advertisement

ಹೆಚ್ಚುತ್ತಲೇ ಇದೆ ಹೃದ್ರೋಗಿಗಳ ಸಂಖ್ಯೆ: ಪ್ರತಿವರ್ಷ ಅಂದಾಜು 25 ಸಾವಿರಕ್ಕೂ ಅಧಿಕ ಜನ ಹೃದ್ರೋಗಿಗಳು ಚಿಕಿತ್ಸೆ ಅರಿಸಿಕೊಂಡು ಬೆಂಗಳೂರು ಜಯದೇವ ಮತ್ತು ಖಾಸಗಿ ಹೃದ್ರೋಗ ಆಸ್ಪತ್ರೆಗಳ ಕದ ತಟ್ಟುತ್ತಿದ್ದಾರೆ. ಬಡವರು-ಅನಕ್ಷರಸ್ಥರಿಗಂತೂ ಬೆಂಗಳೂರಿನ ಹೃದ್ರೋಗ ಚಿಕಿತ್ಸೆ ದೊಡ್ಡ ಹಿಂಸೆಯಾಗುತ್ತಿದ್ದು, ಚಿಕಿತ್ಸೆಗಿಂತ ಅಲ್ಲಿಗೆ ಹೋಗಿ ಬರುವುದೇ ದೊಡ್ಡ ಸವಾಲಾಗಿದೆ.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಹೃದ್ರೋಗ ಸಂಸ್ಥೆ ಬಂದಿರುವುದಕ್ಕೆ ಉತ್ತರ ಕರ್ನಾಟಕ ಭಾಗದ ಬಡ-ಮಧ್ಯಮ ವರ್ಗದ ಜನರು ಸರ್ಕಾರವನ್ನು ಅಭಿನಂದಿಸಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪನೆ ಕುರಿತು ಆರೋಗ್ಯ ಇಲಾಖೆ ಕಾರ್ಯದರ್ಶಿಗಳಾದ ನವೀನರಾಜ್‌ ಸಿಂಗ್‌ ಅವರು ಹಿರಿಯ ಅಧಿಕಾರಿಗಳ ಜತೆ ಈಗಾಗಲೇ ರಾಯನಾಳಕ್ಕೆ ಭೇಟಿ ಕೊಟ್ಟು ಹೃದ್ರೋಗ ಆಸ್ಪತ್ರೆ ಸ್ಥಾಪನೆಯಾಗುವ ಜಾಗ ಪರಿಶೀಲನೆ ಮಾಡಿ ಹೋಗಿದ್ದಾರೆ.

ಪರಿಪೂರ್ಣಕ್ಕೂ ಮುನ್ನವೇ ಆಸ್ಪತ್ರೆ: ಇನ್ನು ಜಯದೇವ ಹೃದ್ರೋಗ ಸಂಸ್ಥೆ ಸ್ವಂತ ಕಟ್ಟಡ ನಿರ್ಮಾಣಕ್ಕೂ ಮುನ್ನವೇ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಎಲ್ಲಿಯಾದರೂ ಆಸ್ಪತ್ರೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದ ಯಂತ್ರೋಪಕರಣ ಮತ್ತು ವೈದ್ಯರ ತಂಡ ರಚಿಸಿ ತಾತ್ಕಾಲಿಕವಾಗಿ ವೈದ್ಯಕೀಯ ಸೇವೆ ಆರಂಭಿಸುವ ಚಿಂತನೆ ನಡೆದಿದ್ದು, ಈ ಕುರಿತು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತ ಜತೆ ಸಂಪರ್ಕ ನಡೆಸಿದ್ದಾರೆ ಎನ್ನಲಾಗಿದೆ. ಐಐಟಿಯನ್ನು ವಾಲಿ¾ ಕಟ್ಟಡದಲ್ಲಿ ನಡೆಸಿದ ಮಾದರಿಯಲ್ಲೇ ಹೃದ್ರೋಗ ಸಂಸ್ಥೆಯನ್ನು ಶೀಘ್ರವೇ ಆರಂಭಿಸಬೇಕು ಎನ್ನುವ ಒತ್ತಾಯ ಕೂಡ ಜಿಲ್ಲೆಯ ಜನರದ್ದಾಗಿದೆ.

ತೀವ್ರಗತಿಯಲ್ಲಿ ಹೃದ್ರೋಗ ಆಸ್ಪತ್ರೆ ನಿರ್ಮಾಣದ ಕೆಲಸ

ಉತ್ತರ ಕರ್ನಾಟಕ ಭಾಗದ ಹೃದ್ರೋಗಿಗಳಿಗೆ ಆದಷ್ಟು ಬೇಗ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಬಜೆಟ್‌ನಲ್ಲಿ ಘೋಷಣೆಯಾದ ಬೆನ್ನಲ್ಲೇ ಹೃದ್ರೋಗ ಆಸ್ಪತ್ರೆ ನಿರ್ಮಾಣದ ಕೆಲಸ ತೀವ್ರಗತಿಯಲ್ಲಿ ಸಾಗಿದೆ. ಎರಡು ವರ್ಷದ ಅವಧಿಯಲ್ಲಿ ಕಟ್ಟಡ ಕಾಮಗಾರಿಗಳನ್ನು ಮುಗಿಸುವ ಗುರಿ ಹೊಂದಲಾಗಿದೆ. ಆದರೆ ಹೃದ್ರೋಗ ಸಂಸ್ಥೆಯನ್ನು 250 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುವ ಬದಲು ಇನ್ನಷ್ಟು ಸೌಲಭ್ಯಗಳೊಂದಿಗೆ ಹೆಚ್ಚು ಜನರಿಗೆ ಅನುಕೂಲವಾಗುವಂತೆ ಮಾಡಲು ಯೋಜಿಸಲಾಗಿದೆ. ಇದಕ್ಕಾಗಿ 500 ಕೋಟಿ ರೂ. ಹಣ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರಿಂದ ಕಿತ್ತೂರು ಕರ್ನಾಟಕ ಮಾತ್ರವಲ್ಲ, ಕಲ್ಯಾಣ ಮತ್ತು ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ. ಹೀಗಾಗಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಿರಿಯ ವೈದ್ಯರಿಂದ ಈ ಬಗ್ಗೆ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.

ಜಿಲ್ಲಾಡಳಿತ ಈಗಾಗಲೇ ರಾಯನಾಳದಲ್ಲಿ 9.5 ಎಕರೆ ಜಾಗೆಯನ್ನು ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ನೀಡಲಾಗಿದೆ. ಸರ್ಕಾರದ ಎಲ್ಲ ಅಗತ್ಯಗಳನ್ನು ಕಾಲಮಿತಿಯಲ್ಲೇ ಪೂರೈಸಿಕೊಡಲು ನಾವು ಸಿದ್ಧರಿದ್ದೇವೆ. ಶೀಘ್ರವೇ ಪರಿಪೂರ್ಣ ಹೃದ್ರೋಗ ಆಸ್ಪತ್ರೆ ಕೆಲಸ ಆರಂಭಿಸಲಿದೆ. –ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ, ಧಾರವಾಡ.

ಈಗಾಗಲೇ ಈ ಸಂಬಂಧ ಎರಡು ಸುತ್ತಿನ ಸಭೆಗಳು ನಡೆದಿದ್ದು, ಶೀಘ್ರವೇ ಹುಬ್ಬಳ್ಳಿಯ ಜಯದೇವ ಹೃದ್ರೋಗ ಆಸ್ಪತ್ರೆಗೆ ಚಾಲನೆ ಸಿಗಲಿದೆ. ಆದರೆ ಆಸ್ಪತ್ರೆಯನ್ನು ಸುಸಜ್ಜಿತ ಪ್ರಮಾಣದಲ್ಲಿಯೇ ಸ್ಥಾಪಿಸಲು ಯೋಜಿಸಲಾಗಿದ್ದು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ವತಃ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ. –ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ, ಬೆಂಗಳೂರು.

-ಡಾ|ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next