ದಾವಣಗೆರೆ: ಮುಖ್ಯಮಂತ್ರಿಗಳೇ ಇನ್ನೂ ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಕೂಡಲೇ ಪಂಚಮಸಾಲಿ ಸಮಾಜಕ್ಕೆ ಎರಡು ಎ ಮೀಸಲಾತಿ ನೀಡಿ. ಇನ್ನು ಮುಂದಿನ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದ್ದು ಇದರಿಂದ ಏನಾದರೂ ಅನಾಹುತ ಸಂಭವಿಸಿದರೆ ಅದರ ಹೊಣೆಯನ್ನು ಮುಖ್ಯಮಂತ್ರಿಯವರೇ ಹೊರಬೇಕಾಗುತ್ತದೆ ಎಂದು ಕೂಡಲ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಹರಿಹರ ಪೀಠದ ವಚನಾನಂದ ಸ್ವಾಮೀಜಿಯವರೊಂದಿಗೆ ಶನಿವಾರ ನಗರದ ರಾಣಿಚೆನ್ನಮ್ಮ ವೃತ್ತದಲ್ಲಿ ಬಾರುಕೋಲು ಬೀಸುವ ಮೂಲಕ ಪಾದಯಾತ್ರೆಗೆ ಕ್ರಾಂತಿ ರೂಪ ಕೊಟ್ಟು ಶ್ರೀಗಳು ಮಾತನಾಡಿದರು.
ಇದನ್ನೂ ಓದಿ:ಗಾಂಧೀಜಿಯನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ಮಂದಿ ಹೆಚ್ಚಾಗಿದ್ದಾರೆ: ಸಿದ್ದರಾಮಯ್ಯ
ರಾಜ್ಯದಲ್ಲಿ 17 ಜನ ಪಂಚಮಸಾಲಿ ಶಾಸಕರಿದ್ದು ಎಲ್ಲರೂ ಸಮಾಜಕ್ಕೆ ಎರಡು ಎ ಮೀಸಲಾತಿ ನೀಡುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ಶಾಸಕರು ಎಲ್ಲ ಸಮುದಾಯದಿಂದ ಆಗಿರಬಹುದು. ಆದರೆ, ಶಾಸಕರಿಗೆ ಟಿಕೆಟ್ ಕೊಡುವಾಗ ಪಂಚಮಸಾಲಿ ಎಂಬ ಜಾತಿ ನೋಡಿಯೇ ಕೊಡಲಾಗಿದೆ ಎಂಬುದನ್ನು ಶಾಸಕರು ಅರಿಯಬೇಕು. ಸಮಾಜಕ್ಕೆ ಎರಡು ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕಬೇಕು. ಉಳಿದವರಿಗೆ ನ್ಯಾಯ ಕೊಡುತ್ತೀರಿ, ಪಂಚಮಸಾಲಿಗಳಿಗೆ ನ್ಯಾಯ ಏಕೆ ಒದಗಿಸುತ್ತಿಲ್ಲ ಎಂದು ಕೇಳಬೇಕು. ಮೀಸಲಾತಿ ಕೊಡದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಯಡಿಯೂರಪ್ಪ ಅವರಿಗೆ ಒತ್ತಡ ಹಾಕಬೇಕು ಎಂದರು.
ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಎರಡು ಎ ಮೀಸಲಾತಿ ಪಂಚಮಸಾಲಿಗಳಿಗೆ ನೀಡುವ ಭಿಕ್ಷೆಯಲ್ಲ. ಅದು ಹಕ್ಕು. ಲಿಂಗಾಯತದ ಅನೇಕ ಒಳಪಂಗಡಗಳು ಎರಡು ಎ ಮೀಸಲಾತಿಯನ್ನು ಈಗಾಗಲೇ ಪಡೆದಿವೆ. ಪಂಚಮಸಾಲಿಗಳಿಗೂ ಸಿಗಬೇಕು ಎಂದರು.