Advertisement

ಶರಣರಿಂದ ಮೌಲ್ಯ ಪ್ರತಿಪಾದನೆ

05:38 PM Mar 01, 2020 | Naveen |

ಜೇವರ್ಗಿ: 17ನೇ ಶತಮಾನದ ಶ್ರೇಷ್ಠ ವಚನಕಾರ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ನೆಲೋಗಿ ಹೇಳಿದರು.

Advertisement

ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ನೀಲಮ್ಮನ ಬಳಗ, ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶರಣ ಷಣ್ಮುಖ ಶಿವಯೋಗಿ, ಸೊನ್ನಲಗಿ ಸಿದ್ಧರಾಮ, ಜೇಡರ ದಾಸಿಮಯ್ಯ, ಮರಳು ಶಂಕರದೇವ, ಕಿನ್ನರಿ ಬೊಮ್ಮಯ್ಯ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಮಾನವೀಯ ಮೌಲ್ಯಗಳ ಬಗ್ಗೆ ಪ್ರತಿಪಾದನೆ ಮಾಡಿದ್ದಾರೆ. ಮೇಲು-ಕೀಳು, ಅಸಮಾನತೆ, ಕಂದಾಚಾರ, ಜಾತಿ ಪದ್ಧತಿ ತಾಂಡವವಾಡುತ್ತಿದ್ದ 12ನೇ ಶತಮಾನದಲ್ಲಿ ಬಸವಾದಿ ಶರಣರು 22 ಸಾವಿರ ವಚನಗಳನ್ನು ರಚಿಸಿ, ಸಮಾಜದಲ್ಲಿ ಬೇರೂರಿದ್ದ ಈ ಎಲ್ಲ ಪದ್ಧತಿಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ್ದಾರೆ ಎಂದರು.

ಶರಣರ ವಚನಗಳಿಂದ ಮನುಷ್ಯನ ಬದುಕು ಉಜ್ವಲವಾಗಲಿದೆ. ಚರಚಕ್ರವರ್ತಿ ಷಣ್ಮುಖ ಶಿವಯೋಗಿ, ನೆಲೋಗಿ ಕೋಲಶಾಂತಯ್ಯ, ಕಡಕೋಳ ಮಡಿವಾಳಪ್ಪ, ರಾಂಪೂರ ಬಕ್ಕಪ್ಪ, ಚನ್ನೂರ ಜಲಾಲ್‌ ಸಾಹೇಬ ಸೇರಿದಂತೆ ಅನೇಕ ಜನ ಶರಣರು, ಸಂತರು, ಸೂಫಿಗಳು ನಡೆದಾಡಿದ ಈ ಪುಣ್ಯಪಾವನ ನೆಲದಲ್ಲಿ ಜನಿಸಿದ್ದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಚಿಗರಹಳ್ಳಿಯ ಮರಳು ಶಂಕರದೇವರ ಪೀಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಮಾತನಾಡಿ, ಆಡಂಬರದ ಬದುಕು ನಡೆಸದೇ ಸತ್ಯ, ಶುದ್ಧ, ಕಾಯಕ ಕೈಗೊಳ್ಳುವ ಉದ್ದೇಶ ಶರಣರದ್ದಾಗಿತ್ತು. ಒಳಪಂಗಡಗಳನ್ನು ಬಿಟ್ಟಾಗ ಮಾತ್ರ ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆ ಸಾಧ್ಯ, ಇಡಿ ಜಗತ್ತು ಒಪ್ಪಿಕೊಳ್ಳುವಂತ ಧರ್ಮ ಲಿಂಗಾಯತ. ವಿದೇಶಿಯರಿಗೆ ಬಸವಣ್ಣ ಅರ್ಥವಾದ ಆದರೆ ಭಾರತೀಯರಿಗೆ ಇನ್ನೂ ಅರ್ಥವಾಗದಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಕಲಬುರಗಿಯ ಎಚ್‌.ಬಿ. ಪಾಟೀಲ ಅನುಭಾವ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ವಿಶ್ವನಾಥ ಡೋಣೂರ, ರಾಜಶೇಖರ ಮರಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ವೇಳೆ ಮೈಸೂರು ರಾಜ್ಯದ ಹಳೆ ಜನಗಣತಿಗಳು-ಲಿಂಗಾಯತರು, ಚಾತುವರ್ಣ ನಂಬಿಕೆ ಎನ್ನುವ ಗ್ರಂಥ ಬಿಡುಗಡೆ ಮಾಡಲಾಯಿತು.
ಬಸವಕೇಂದ್ರ ಅದ್ಯಕ್ಷ ಶರಣಬಸವ ಕಲ್ಲಾ, ಪುರಸಭೆ ಸದಸ್ಯ ಷಣ್ಮುಖಪ್ಪ ಸಾಹು ಗೋಗಿ, ಭೀಮಾಶಂಕರ ಕಟ್ಟಿಸಂಗಾವಿ, ಮಲ್ಲನಗೌಡ ಕನ್ಯಾಕೋಳೂರ, ಬಾಪುಗೌಡ ಬಿರಾಳ, ಮಹಾಂತಸಾಹು ಹರವಾಳ, ವಿಶ್ವನಾಥರೆಡ್ಡಿ ರಾಜಳ್ಳಿ, ನೀಲಕಂಠ ಕಟ್ಟಿಸಂಗಾವಿ, ಮಲ್ಲಿಕಾರ್ಜುನ ಬಿರಾದಾರ, ವಿಜಯಕುಮಾರ ಪಾಟೀಲ ಸೇಡಂ, ಶಾಂತಪ್ಪ ಬಿರಾದಾರ, ಕಲ್ಲಪ್ಪ ಬಡದಾಳ, ವಿಜಯಕುಮಾರ ಬಡಿಗೇರ, ಬಸವರಾಜ ರಾಸಣಗಿ, ಶಿವಕುಮಾರ ಬಿದರಿ ಮತ್ತಿತರರು ಇದ್ದರು. ಕಾವೇರಿ ಪಾಟೀಲ ಸ್ವಾಗತಿಸಿದರು, ಶಿಕ್ಷಕ ಪಂಡಿತ ನೆಲ್ಲಗಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next