Advertisement

ಕಾಲ್ನಡಿಗೆಯಲ್ಲೇ ಮಧ್ಯಪ್ರದೇಶಕ್ಕೆ ಹೊರಟ ಕಾರ್ಮಿಕರು

04:52 PM Apr 26, 2020 | Naveen |

ಜೇವರ್ಗಿ: ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ ಒಟ್ಟು 12 ಜನ ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯ ಮೂಲಕ ಮಧ್ಯಪ್ರದೇಶಕ್ಕೆ ಶನಿವಾರ ತೆರಳುತ್ತಿರುವ ಮನ ಕಲಕುವಂತಿತ್ತು.

Advertisement

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಕಿ ಬಳಿ ಇರುವ ಹತ್ತಿ ಮಿಲ್‌ ಒಂದರಲ್ಲಿ ಕಳೆದ 6 ತಿಂಗಳಿನಿಂದ ಈ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು. ಕೆಲಸ ನಿರ್ವಹಿಸಿದಾಗ ದಿನವೊಂದಕ್ಕೆ 200 ರಿಂದ 300 ರೂ. ಕೂಲಿ ಹಣ ಪಡೆದುಕೊಳ್ಳುತ್ತಿದ್ದರು. ಆದರೆ ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್‌ ಘೋಷಣೆಯಾದ ಹಿನ್ನಲೆಯಲ್ಲಿ ಹತ್ತಿ ಮಿಲ್‌ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಕಾರ್ಮಿಕರ ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಲಾಕ್‌ಡೌನ್‌ ಘೋಷಣೆ ಆದ ನಂತರ ಹತ್ತಿ ಮಿಲ್‌ ಮಾಲೀಕರು ಕೂಲಿ ಹಣ ನೀಡುವುದನ್ನು ಸ್ಥಗಿತಗೊಳಿಸಿದ್ದರಿಂದ ಕಾರ್ಮಿಕರು ತಾವು ದುಡಿದ ಹಣದಿಂದಲೇ ಜೀವನ ಸಾಗಿಸುತ್ತಿದ್ದರು. ತಮ್ಮಲ್ಲಿರುವ ಅಲ್ಪಸ್ವಲ್ಪ ಹಣ ಖರ್ಚಾದ ನಂತರ ದಿಕ್ಕು ತೋಚದಂತಾಗಿ ಕಾಲ್ನಡಿಗೆಯಲೇ ಹುಟ್ಟೂರಿಗೆ ತೆರಳಲು ನಿರ್ಧರಿಸಿ ಮದ್ರಕಿಯಿಂದ ಜೇವರ್ಗಿ ಮಾರ್ಗವಾಗಿ ವಿಜಯಪುರ ಕಡೆ ತೆರಳಿದರು.

ಇವರು ಮೂಲತಃ ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ತಲಾಪುರಾ ಗ್ರಾಮದವರು ಎಂದು ಅಲ್ಕೇಶ ಸಿಂಗಾರೆ ಹಾಗೂ ವಿಜಯ ಕಲ್ಮೆ ಮಾಹಿತಿ ನೀಡಿದರು. ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಅಬ್ದುಲ್‌ ರಹಿಮಾನ್‌ ಪಟೇಲ್‌ ಕಾರ್ಮಿಕರ ಕುಟುಂಬದ ಸದಸ್ಯರಿಗೆ ಹಣ್ಣು, ಹಂಪಲು ನೀಡಿದರು. ನಂತರ ಸ್ಥಳದಲ್ಲಿದ್ದ ಪತ್ರಕರ್ತರು ತಹಶೀಲ್ದಾರ್‌ ಸಿದರಾಯ ಭೋಸಗಿ ಅವರಿಗೆ ಮಧ್ಯಪ್ರದೇಶ ಮೂಲದ ಕಾರ್ಮಿಕರ ಸ್ಥಿತಿಗತಿ ಕುರಿತು ದೂರವಾಣಿ ಮೂಲಕ ಮಾಹಿತಿ ನೀಡಿದ ಕೆಲವೇ ಸಮಯದಲ್ಲಿ ಸಿಬ್ಬಂದಿ ಆಹಾರ ಪೊಟ್ಟಣ ಕಳುಹಿಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next