ಜೇವರ್ಗಿ: ತಾಲೂಕಿನ ಕೋನಾಹಿಪ್ಪರಗಿ- ಸರಡಗಿ ನಡುವೆ ಭೀಮಾನದಿಗೆ ನಿರ್ಮಿಸಲಾಗಿರುವ 54 ಕೋಟಿ ರೂ. ವೆಚ್ಚದ ಸೇತುವೆ ಉಪಯೋಗಕ್ಕೆ ಇನ್ನೂ ಗ್ರಹಣ ಹಿಡಿದಂತಾಗಿದೆ. ತಾಲೂಕಿನ ಕೋಳಕೂರ ಜಿಪಂ ವ್ಯಾಪ್ತಿಯ ಕೂಡಿ, ಕೋಬಾಳ, ಬಣಮಿ, ಮಂದ್ರವಾಡ, ಕೋನಾಹಿಪ್ಪರಗಿ, ಹಂದನೂರ, ರಾಸಣಗಿ, ಗೌನಳ್ಳಿ, ಜನಿವಾರ, ಹರವಾಳ ಸೇರಿದಂತೆ ಹತ್ತಾರು ಗ್ರಾಮಗಳ ಜನರ ಬೇಡಿಕೆಯಾಗಿದ್ದ ಸೇತುವೆ ಕಳೆದ ಎರಡು ದಶಕಗಳ ಬಳಿಕ
ನಿರ್ಮಾಣವಾಗಿದೆ. ಆದರೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದರಿಂದ ಈ ಭಾಗದ ಜನರಿಗೆ ಸೇತುವೆಯಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
Advertisement
ಕೆಆರ್‌ಡಿಸಿಎಲ್ ವತಿಯಿಂದ 54 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಕಡಿಮೆ ಸಮಯದಲ್ಲಿ ಕಲಬುರಗಿಗೆ ತೆರಳಲು ಅನುಕೂಲವಾಗಲಿದೆ. ಇದರ ಜತೆಗೆ 20 ಕಿಮೀ ಅಂತರ ಕಡಿಮೆಯಾಗಲಿದೆ ಎನ್ನುವ ಸದುದ್ದೇಶದಿಂದ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಕೂಡಿ ದರ್ಗಾದಿಂದ ಕೋನಾಹಿಪ್ಪರಗಿ ಸೇತುವೆವರೆಗೆ ತೆರಳುವ ಮೂರು ಕಿಮೀ ರಸ್ತೆ ತಗ್ಗುಗಳಿಂದ ಕೂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರೇವನೂರ ಕ್ರಾಸ್ ದಿಂದ ಕೋನಾಹಿಪ್ಪರಗಿವರೆಗೆ ರಸ್ತೆ ಸಹ ತೀರಾ ಹದಗೆಟ್ಟು ಹೋಗಿದೆ, ಕನಿಷ್ಠ ತೇಪೆ ಹಾಕುವ ಕೆಲಸ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.