ಜಾಂಡಿಸ್ ಅಥವಾ ಅರಶಿನ ಕಾಮಾಲೆ ಎಂದರೆ ಕಣ್ಣುಗಳು ಮತ್ತು ಚರ್ಮವು ಹಳದಿ ಬಣ್ಣಕ್ಕೆ ತಿರುಗುವ ಕಾಯಿಲೆ. ರಕ್ತದಲ್ಲಿ ಬಿಲಿರುಬಿನ್ ಪ್ರಮಾಣ ಹೆಚ್ಚಳವಾಗುವುದರಿಂದ ಹೀಗಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಕ್ಷಿಪ್ರ ಹೆಪಟೈಟಿಸ್ ಹೆಚ್ಚಳವಾಗುತ್ತಿದ್ದು, ಜಾಂಡಿಸ್ ಪ್ರಕರಣಗಳು ಕೂಡ ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಹೀಗಾಗಿ ಜಾಂಡಿಸ್‌ನ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳುವುದು ಈ ಸಮಯದಲ್ಲಿ ಉತ್ತಮ.
ಅರಶಿನ ಕಾಮಾಲೆ ಅಥವಾ ಜಾಂಡಿಸ್ ಪಿತ್ತಕೋಶದ ಕಾಯಿಲೆಗಳ ಒಂದು ಪ್ರಧಾನ ಲಕ್ಷಣವಾಗಿದೆ. ಆದರೆ ಕೆಂಪು ರಕ್ತಕಣಗಳ ನಾಶ ಹೆಚ್ಚಳ, ಬಿಲಿರುಬಿನ್‌ನ ಚಯಾಪಚಯ ಕ್ರಿಯೆಯಲ್ಲಿ ಕಾಣಿಸಿಕೊಂಡಿರುವ ವಂಶವಾಹಿ ಸಮಸ್ಯೆಗಳು, ಪಿತ್ತನಾಳದಲ್ಲಿ ಕಲ್ಲು ಅಥವಾ ಗಡ್ಡೆಗಳ ಬೆಳವಣಿಗೆಯಿಂದಾಗಿ ಅಡಚಣೆ ಉಂಟಾಗಿರುವಂತಹ ಪಿತ್ತಕೋಶದ ಕಾಯಿಲೆಗಿಂತ ಹೊರತಾದ ಇತರ ಕಾರಣಗಳಿಂದಲೂ ಅರಶಿನ ಕಾಮಾಲೆ ತಲೆದೋರಬಹುದಾಗಿದೆ. ಪಿತ್ತಕೋಶದ ಕಾಯಿಲೆಗಳ ಪೈಕಿ ಹೆಪಟೈಟಿಸ್ (ಪಿತ್ತಕೋಶದ ಉರಿಯೂತ) ಅರಶಿನ ಕಾಮಾಲೆಗೆ ಮುಖ್ಯ ಕಾರಣವಾಗಿದೆ. ಇದು ಸೋಂಕುಕಾರಿ (ಹೆಪಟೈಟಿಸ್ ಎ, ಬಿ, ಸಿ, ಇ) ಅಥವಾ ಸೋಂಕುಕಾರಿಯಲ್ಲದ ವಿಧವಾಗಿರಬಹುದು. ಜತೆಗೆ ಪಿತ್ತಕೋಶದ ಸಿರೋಸಿಸ್‌ನಂತಹ ದೀರ್ಘಕಾಲೀನ ಕಾಯಿಲೆಗಳಿಂದ ಕೂಡ ಅರಶಿನ ಕಾಮಾಲೆ ತಲೆದೋರಬಹುದು. ಪಿತ್ತಕೋಶದಲ್ಲಿ ಗಡ್ಡೆಗಳ ಬೆಳವಣಿಗೆ ಅಥವಾ ಪಿತ್ತಕೋಶಕ್ಕೆ ಕ್ಯಾನ್ಸರ್ ಹರಡಿರುವುದು ಅರಶಿನ ಕಾಮಾಲೆ ಉಂಟಾಗಲು ಇತರ ಸಂಭಾವ್ಯ ಕಾರಣಗಳಾಗಿವೆ.
ಅರಶಿನ ಕಾಮಾಲೆಯ ಜತೆಗೆ ಇತರ ರೋಗ ಲಕ್ಷಣಗಳಾದ ಜ್ವರ, ವಾಂತಿ, ದಣಿವು, ಹಸಿವು ಕಡಿಮೆಯಾಗಿರುವುದು, ಹೊಟ್ಟೆಯಲ್ಲಿ ನೋವು, ತುರಿಕೆ, ಮೂತ್ರ ಗಾಢ ಬಣ್ಣದ್ದಾಗಿರುವುದು, ಕಾಲುಗಳಲ್ಲಿ ಊತ, ಹೊಟ್ಟೆಯಲ್ಲಿ ಊತ ಇತ್ಯಾದಿ ಕೂಡ ಇರಬಹುದಾಗಿದ್ದು, ಇವು ಜಾಂಡಿಸ್‌ಗೆ ಕಾರಣವೇನು ಎಂಬುದರ ಸುಳಿವನ್ನು ವೈದ್ಯರಿಗೆ ನೀಡಬಲ್ಲವು. ಅರಶಿನ ಕಾಮಾಲೆ ಉಂಟಾಗುವುದಕ್ಕೆ ಕಾರಣವೇನು ಎಂಬುದನ್ನು ಅವಲಂಬಿಸಿ ಅದು ತಾನಾಗಿ ಗುಣ ಹೊಂದುವಂಥದ್ದೂ ಆಗಿರಬಹುದು ಅಥವಾ ಪ್ರಾಣಾಪಾಯವನ್ನು ಒಡ್ಡುವಂಥದ್ದೂ ಆಗಿರಬಹುದು.
ಅರಶಿನ ಕಾಮಾಲೆಯ ಲಕ್ಷಣಗಳು ಕಂಡುಬಂದ ಕೂಡಲೇ ಮನೆಮದ್ದು ಮಾಡುವುದು ಅಥವಾ ಪರ್ಯಾಯ ಔಷಧ ಕ್ರಮಗಳ ಮೊರೆ ಹೋಗುವುದಕ್ಕೆ ಬದಲಾಗಿ ಅರಶಿನ ಕಾಮಾಲೆ ಉಂಟಾಗುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಕೆಲವು ವಿಧವಾದ ಅರಶಿನ ಕಾಮಾಲೆಗಳು ಪ್ರಾಣಾಪಾಯವನ್ನು ತಂದೊಡ್ಡಬಲ್ಲವು ಎಂಬುದೇ ಇದಕ್ಕೆ ಕಾರಣ. ಅರಶಿನ ಕಾಮಾಲೆ ಉಂಟಾಗಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ವೈದ್ಯರು ಕೆಲವು ಸರಳ ರಕ್ತ ಪರೀಕ್ಷೆಗಳು ಮತ್ತು ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಹೇಳುತ್ತಾರೆ. ಯಾವ ತೊಂದರೆಯಿಂದಾಗಿ ಅರಶಿನ ಕಾಮಾಲೆ ಉಂಟಾಯಿತು ಎಂಬುದನ್ನು ಅವಲಂಬಿಸಿ ಚಿಕಿತ್ಸೆ ಬದಲಾಗುತ್ತದೆ.
ಅರಶಿನ ಕಾಮಾಲೆಗೆ ಚಿಕಿತ್ಸೆ ಪಡೆಯುವ ವೇಳೆ ಪೌಷ್ಟಿಕಾಂಶ ಸಮೃದ್ಧ ಮತ್ತು ಸುಲಭವಾಗಿ ಜೀರ್ಣವಾಗಬಲ್ಲ, ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೊಟೀನ್‌ಗಳು ಹೇರಳವಾಗಿರುವ ಆಹಾರವನ್ನು ಸೇವಿಸಬೇಕು. ಯಾಕೆಂದರೆ ಪಿತ್ತಕೋಶವು ಗುಣ ಹೊಂದಲು ಹೆಚ್ಚುವರಿ ಶಕ್ತಿ ಅಗತ್ಯವಾಗಿರುತ್ತದೆ. ಅನಗತ್ಯವಾದ ಮತ್ತು ಅವೈಜ್ಞಾನಿಕವಾದ ಪಥ್ಯ ಅನುಸರಣೆಯಿಂದ ಪಿತ್ತಕೋಶವು ಗುಣ ಹೊಂದುವುದು ನಿಧಾನವಾಗಬಹುದು.
–
ಡಾ| ಅನುರಾಗ್ ಶೆಟ್ಟಿ
ಕನ್ಸಲ್ಟಂಟ್ ಮೆಡಿಕಲ್
ಗ್ಯಾಸ್ಟ್ರೊಎಂಟರಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ,
ಡಾ| ಬಿ. ಆರ್. ಅಂಬೇಡ್ಕರ್ ವೃತ್ತ,
ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಮಂಗಳೂರು)