Advertisement

ಜಸ್‌ಪ್ರೀತ್‌ ಬುಮ್ರಾ ಅವರ ಅಜ್ಜ ಉತ್ತರಾಖಂಡದಲ್ಲಿ ರಿಕ್ಷಾ ಚಾಲಕ

03:46 PM Jul 05, 2017 | Team Udayavani |

ರಾಂಚಿ : 23ರ ಹರೆಯದ ಜಸ್‌ಪ್ರೀತ್‌ ಬುಮ್ರಾ ಅವರು ಭಾರತೀಯ ಕ್ರಿಕೆಟ್‌ ತಂಡದ ಪ್ರಮುಖ ಎಸೆಗಾರನಾಗಿ ತನ್ನ  ಖಚಿತ ಸ್ಥಾನವನ್ನು ಕಂಡುಕೊಂಡಿದ್ದಾರೆ. ಹಾಗಿದ್ದರೂ ಕುಟುಂಬದಿಂದ ದೂರವಾಗಿರುವ ಅವರ ಅಜ್ಜ, 84ರ ಹರೆಯದ ಸಂತೋಕ್‌ ಸಿಂಗ್‌ ಬುಮ್ರಾ ಅವರು ಉತ್ತರಾಖಂಡ ರಾಜ್ಯದ ಕಿಚ್ಚಾ ಎಂಬಲ್ಲಿ ಆಟೋ ರಿಕ್ಷಾ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. 

Advertisement

ಸಂತೋಕ್‌ ಸಿಂಗ್‌ ಬುಮ್ರಾ ಅವರು ತನ್ನ ಮಗ ಜಸ್‌ಬೀರ್‌ ಸಿಂಗ್‌ ಬುಮ್ರಾ ಅವರೊಂದಿಗೆ ಗುಜರಾತ್‌ನಲ್ಲಿ ವ್ಯಾಪಾರೋದ್ಯಮ ಮಾಡಿಕೊಂಡಿದ್ದರು. 2001ರಲ್ಲಿ ಮಗ ಜಸ್‌ಬೀರ್‌ ಸಿಂಗ್‌ ಬುಮ್ರಾ ನಿಧನ ಹೊಂದಿದರು. ಆ ಬಳಿಕ ಸಂತೋಕ್‌ ಅವರು ಉದ್ಯಮದಲ್ಲಿ ಭಾರೀ ಕಷ್ಟ – ನಷ್ಟ ಅನುಭವಿಸಿದರು. ಹಾಗಾಗಿ 2006ರಲ್ಲಿ ಸಂತೋಕ್‌ ಅವರು ತನ್ನ ಸಹೋದರರೊಂದಿಗೆ ಉತ್ತರಾಖಂಡಕ್ಕೆ ವಲಸೆ ಹೋದರು. 

ಇತ್ತ ಸಂತೋಕ್‌ ಅವರ ಮೊಮ್ಮಗ ಜಸ್‌ಪ್ರೀತ್‌ ಬುಮ್ರಾ  ತನ್ನ ತಾಯಿಯೊಂದಿಗೆ ಅಹ್ಮದಾಬಾದಿನಲ್ಲೇ ಉಳಿದುಕೊಂಡರು. ಈ ಅವಧಿಯಲ್ಲಿ ಈ ಎರಡು ಕುಟುಂಬಗಳು ಬಹುತೇಕ ಪರಸ್ಪರರಿಂದ ದೂರವಾದವು.

ಈ ನಡುವೆ ಮೊಮ್ಮಗ ಜಸ್‌ಪ್ರೀತ್‌ ಬುಮ್ರಾ ಕ್ರಿಕೆಟ್‌ನಲ್ಲಿ ವೇಗದ ಬೌಲರ್‌ ಆಗಿ ಮಿಂಚಿ ಭಾರತೀಯ ತಂಡವನ್ನು ಸೇರಿಕೊಂಡರು. ಟಿವಿಯಲ್ಲಿ ಮೊಮ್ಮಗನ ಕ್ರಿಕೆಟ್‌ ಸಾಧನೆಯನ್ನು ಕಂಡು ಅಜ್ಜ ಸಂತೋಕ್‌ ಸಂಭ್ರಮ ಪಟ್ಟರು. 

ಸಂತೋಕ್‌ ಸಿಂಗ್‌ ಅವರ ಮಗಳು ಈಚೆಗೆ ಜಸ್‌ಪ್ರೀತ್‌ ಅವರನ್ನು ಕಾಣಲು ಅಹ್ಮದಾಬಾದಿಗೆ ಹೋಗಿದ್ದಳು. ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದಳು. ಆದರೆ ಆಕೆಗೆ ಸಾಧ್ಯವಾಗಲಿಲ್ಲ. ಹಾಗಾಗಿ ಬರಿಗೈಯಲ್ಲಿ ಆಕೆ ಉತ್ತರಾಖಂಡಕ್ಕೆ ಮರಳಿದಳು.

Advertisement

ಸಂತೋಕ್‌ ಸಿಂಗ್‌ ಹೇಳುವ ಪ್ರಕಾರ ಮೊಮ್ಮಗ ಜಸ್‌ಪ್ರೀತ್‌ ಬುಮ್ರಾ ಮತ್ತು ತನ್ನ ನಡುವೆ ಸಂಪರ್ಕಕ್ಕೆ ಅಡ್ಡವಾಗಿ ನಿಂತಿರುವವಳು ಜಸ್‌ಪ್ರೀತ್‌ನ ತಾಯಿ. “ಕೌಟುಂಬಿಕ ಕಾರಣಗಳಿಗಾಗಿ ಆಕೆ ನಮ್ಮನ್ನು ಕಾಣಲು ಇಷ್ಟಪಡುತ್ತಿಲ್ಲ; ಹಾಗಾಗಿ ನನ್ನ ಮೊಮ್ಮಗನನ್ನು ಮುಖತಃ ಕಂಡು ಮಾತನಾಡಿಸಲು ನನಗೆ ಈ ತನಕ ಸಾಧ್ಯವಾಗಿಲ್ಲ; ನೀವಾದರೂ ಸಹಾಯ ಮಾಡಿ; ನಾನು ನಿಮಗೆ ಚಿರ ಋಣಿಯಾಗಿರುತ್ತೇನೆ’ ಎಂದು ಸಂತೋಕ್‌ ಸಿಂಗ್‌ ಮಾಧ್ಯಮದವರೊಂದಿಗೆ ತನ್ನ ಅಳಲನ್ನು ತೋಡಿಕೊಂಡರು. 

2014ರ ಐಪಿಲ್‌ ಕೂಟದಲ್ಲಿ ಮುಂಬಯಿ ಇಂಡಿಯನ್ಸ್‌ ತಂಡಕ್ಕೆ 1.2 ಕೋಟಿ ರೂ.ಗಳ ಬೃಹತ್‌ ಮೊತ್ತಕ್ಕೆ ಸೇಲಾಗಿದ್ದ ಜಸ್‌ಪ್ರೀತ್‌ ಬುಮ್ರಾ ಈಗ ಬಹುತೇಕ ತನ್ನ ಕ್ರಿಕೆಟ್‌ ಬದುಕಿನ ಉತ್ತುಂಗದಲ್ಲಿದ್ದಾರೆ. ಹೆಸರು, ಹಣ ಎರಡನ್ನೂ ಗಳಿಸಿದ್ದಾರೆ. ಆದರೆ 84ರ ಇಳಿ ವಯಸ್ಸಿನಲ್ಲಿ, ದೂರದ ಉತ್ತರಾಖಂಡದಲ್ಲಿ ರಿಕ್ಷಾ ನಡೆಸಿಕೊಂಡು ಬಡತನದ ಬದುಕನ್ನು ಸವೆಸುತ್ತಿರುವ ತನ್ನ ಅಜ್ಜನನ್ನು ಕಾಣಲು ಅವರೀಗ ಮನಸ್ಸು ಮಾಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next