“ಪ್ರೇಮಿಗಳ ದಿನದಂದು ಪ್ರೇಮಿಗಳಿಗೋಸ್ಕರ…’ ಹೀಗೊಂದು ವಾಕ್ಯದೊಂದಿಗೆ ಆ ಸಿನಿಮಾದ ಕಲರ್‌ಫುಲ್ ಪೋಸ್ಟರ್‌ವೊಂದನ್ನು ಹಾಕಿ ಜಾಹಿರಾತು ಕೊಡಲಾಗಿತ್ತು. ಎಲ್ಲರೂ ವ್ಯಾಲೆಂಟೈನ್ಸ್ ದಿನ ಆ ಸಿನಿಮಾ ರಿಲೀಸ್ ಆಗಬಹುದು ಅಂತಾನೇ ಭಾವಿಸಿದ್ದರು. ಆದರೆ, ಅದು ಹಾಗಾಗಲಿಲ್ಲ. ಪ್ರೇಮಿಗಳ ದಿನ ಬಂತು. ಆದರೆ, ಅಂದು ಆ ಸಿನಿಮಾ ರಿಲೀಸ್ ಆಗಲಿಲ್ಲ. ಬದದಲಾಗಿ ಆ ಚಿತ್ರದ ಹಾಡುಗಳು ಹೊರ ಬಂದವು, ಅದರೊಂದಿಗೆ ಪ್ರೀತಿ ಬೆಸೆಯುವಂತಹ ಮತ್ತು ಭಾವನಾತ್ಮಕ ಕೆಲ ಸನ್ನಿವೇಶವಿರುವ ಟ್ರೇಲರ್ ಹೊರಬಂತು.
ಆ ಚಿತ್ರದ ಹಾಡು ಕೇಳಿದವರು, ಟ್ರೇಲರ್ ನೋಡಿದವರು ಖುಷಿಗೊಂಡರು. ಜೋರು ಚಪ್ಪಾಳೆ ತಟ್ಟಿದರು, ಶಿಳ್ಳೆ ಹಾಕಿದರು, ಒನ್ಸ್‌ಮೋರ್ ಅಂದರು… ಇಷ್ಟಕ್ಕೆಲ್ಲಾ ಕಾರಣವಾದದ್ದು “ಮನಸು ಮಲ್ಲಿಗೆ’ ಚಿತ್ರ. ಸಾಮಾನ್ಯ ಚಿತ್ರವಾಗಿದ್ದರೆ, ಇದರ ಬಗ್ಗೆ ಇಷ್ಟೊಂದು ಹೇಳುವ ಅಗತ್ಯವಿರಲಿಲ್ಲ. “ಮನಸು ಮಲ್ಲಿಗೆ’ ಎಲ್ಲರಿಗೂ ತಿಳಿದಿರುವಂತೆ, ಭಾರತ ಚಿತ್ರರಂಗದಲ್ಲೇ ದಾಖಲೆ ಬರೆದ ಮರಾಠಿ ಭಾಷೆಯ “ಸೈರಾತ್’ ಸಿನಿಮಾದ ರಿಮೇಕ್.
ಎಸ್.ನಾರಾಯಣ್ ನಿರ್ದೇಶನದ ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಮತ್ತು ಜೀ ಸ್ಟುಡಿಯೋಸ್‌ನ ಆಕಾಶ್ ಚಾವ್ಲಾ ನಿರ್ಮಾಪಕರು. ಇನ್ನು, ಈ ಚಿತ್ರಕ್ಕೆ ಮೂಲ ಚಿತ್ರದಲ್ಲಿ ನಟಿಸಿದ್ದ ರಿಂಕು ರಾಜ್‌ಗುರು ನಾಯಕಿ. ಖಳನಟ ಸತ್ಯಪ್ರಕಾಶ್ ಅವರ ಪುತ್ರ ನಿಶಾಂತ್ ನಾಯಕ. ಪ್ರೇಮಿಗಳ ದಿನದಂದು ಅದ್ಧೂರಿಯಾಗಿಯೇ ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. “ಪ್ರಮಿಗಳ ದಿನ’ದಂದೇ ಆಡಿಯೋ ರಿಲೀಸ್ ಮಾಡಬೇಕು ಅಂತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮುಹೂರ್ತ ದಿನ ಹೇಳಿದ್ದರಂತೆ.
ಅದರಂತೆ, ನಾರಾಯಣ್ ಪಕ್ಕಾ ಪ್ಲಾನ್ ಮಾಡಿಕೊಂಡು ಅದೇ ದಿನ ಆಡಿಯೋ ಸಿಡಿ ಹೊರತಂದರು. ಸಚಿವ ಎಂ.ಬಿ.ಪಾಟೀಲ್, ಶಾಸಕ ಮುನಿರತ್ನ, ಜೀ ಸ್ಟುಡಿಯೋಸ್‌ನ ಅಶೋಕ್ ಚಾವ್ಲಾ, ಖಳನಟ ಸತ್ಯಪ್ರಕಾಶ್, ಸೇರಿದಂತೆ ಸಿನಿಮಾರಂಗದ ಹಲವು ಗಣ್ಯರು ಆಡಿಯೋ ಸಿಡಿ ಬಿಡುಗಡೆಗೆ ಸಾಕ್ಷಿಯಾದರು. ಅಂದು ಯಾರೂ ಕೂಡ ಹೆಚ್ಚು ಮಾತನಾಡಲಿಲ್ಲ. ಸಿನಿಮಾದ ಹಾಡು, ಟ್ರೇಲರ್ ನೋಡಿ, “ಈ ಚಿತ್ರಕ್ಕೆ ಗೆಲ್ಲುವ ಎಲ್ಲಾ ಲಕ್ಷಣಗಳೂ ಇವೆ’ ಎಂದಷ್ಟೇ ಬಂದವರು ಶುಭಹಾರೈಸಿದ್ದು ವಿಶೇಷ.
ನಾರಾಯಣ್ ಅಂದು ಎಂದಿಗಿಂತ ಲವಲವಿಕೆಯಲ್ಲಿದ್ದರು. ಅದಕ್ಕೆ ಕಾರಣ, ಲವ್ವರ್ ಡೇ ಅನ್ನೋದು ಒಂದು ಕಾರಣವಾದರೆ, ಅದೇ ದಿನ ಚಿತ್ರದ ಆಡಿಯೋ ಸಿಡಿ ಹೊರಬಂದಿದೆ ಅನ್ನೋದು ಇನ್ನೊಂದು ಕಾರಣ. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರು ತುಂಬಾ ನಿರೀಕ್ಷೆ ಇಟ್ಟು ಮಾಡಿರುವ ಸಿನಿಮಾ, ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಎಂಬುದು. ಅದೇನೆ ಇರಲಿ, ಅಂದು “ಮನಸು ಮಲ್ಲಿಗೆ’ಯ ಹಾಡು ನೋಡಿದವರ ಮೊಗದಲ್ಲಿ ಖುಷಿಗೆ ಪಾರವೇ ಇರಲಿಲ್ಲ. ನಾಯಕಿ ರಿಂಕು ರಾಜ್‌ಗುರು ಆಗಮಿಸಿದ್ದರೆ, ಆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ಬರುತ್ತಿತ್ತು.
ಆದರೆ, ಅವರ ಗೈರುಹಾಜರಿಯಲ್ಲೇ ಕಾರ್ಯಕ್ರಮ ನಡೆದೋಯ್ತು. ಅಂದು ಕವಿರಾಜ್, ಪ್ರೇಮಾಚಂದ್ರು, ಸೂರಪ್ಪಬಾಬು, ಛಾಯಾಗ್ರಾಹಕ ಮನೋಹರ್ ಜೋಷಿ, ಪ್ರಸನ್ನ ಚಿತ್ರಮಂದಿರ ಮಾಲೀಕ ಆನಂದ್ ಇತರರು ಇದ್ದರು. ಇದಕ್ಕೂ ಮುನ್ನ, ನಾರಾಯಣ್ ದಂಪತಿ ಅಲ್ಲಿದ ದೇವರಿಗೆ ಪೂಜೆ ನೆರವೇರಿಸಿದರು. ನಾರಾಯಣ್ ಎಲ್ಲರಿಗೂ ಸಿಹಿ ಹಂಚಿದರು. ಕಾರ್ಯಕ್ರಮದ ಕ್ಲೈಮ್ಯಾಕ್ಸ್‌ಗೆ ಸತ್ಯಪ್ರಕಾಶ್ ನಿರ್ದೇಶಕ ಮತ್ತು ನಿರ್ಮಾಪಕರನ್ನು ಪ್ರೀತಿಯಿಂದ ಅಭಿನಂದಿಸುವ ಹೊತ್ತಿಗೆ ಆ ಆಡಿಯೋ ಸಿಡಿ ಕಾರ್ಯಕ್ರಮಕ್ಕೆ ತೆರೆಬಿತ್ತು.