Advertisement

ತಾರಸಿ ಮೇಲೆ ಮಲ್ಲಿಗೆ ಕ್ರಾಂತಿ; ಆದಾಯವೆಲ್ಲ ಬಡ ಮಕ್ಕಳ ಶಿಕ್ಷಣಕ್ಕೆ

08:00 PM Oct 04, 2021 | Team Udayavani |

ಬೈಂದೂರು: ಮನೆಯ ತಾರಸಿ ಮೇಲೆ ಮಲ್ಲಿಗೆ ಬೆಳೆದು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಶಿರೂರಿನ ನವೋದಯ ಸಂಘದ ಅಕ್ಷತಾ (ಅನ್ನಪೂರ್ಣಾ) ಆನಂದ ಮೇಸ್ತ ಮಾದರಿ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.

Advertisement

ಟಿ.ವಿ. ಕಾರ್ಯಕ್ರಮದಿಂದ ಪ್ರೇರಣೆ
ಕುಂದಾಪುರ ತಾಲೂಕಿನ ಶಿರೂರು ಕರಿಕಟ್ಟೆ ನಿತ್ಯಾನಂದ ನಗರದ ಅಕ್ಷತಾ ಮೇಸ್ತ ಕ್ರಿಯಾತ್ಮಕ ಚಟುವಟಿಕೆಯಲ್ಲಿ ಸದಾ ತೊಡಗಿಸಿ ಕೊಂಡಿದ್ದಾರೆ. ನವೋದಯ ಸಂಘದ ಸದಸ್ಯರಾಗಿರುವ ಅವರು ಸ್ಥಳೀಯ ಮಹಿಳಾ ಮಂಡಲದ ಅಧ್ಯಕ್ಷರಾಗಿದ್ದಾರೆ. ಅವರು ದೂರದರ್ಶನದಲ್ಲಿ ಮನೆಯ ಮಹಡಿ ಮೇಲೆ ತರಕಾರಿ ಹಾಗೂ ಹೂವಿನ ಗಿಡಗಳನ್ನು ಬೆಳೆಯುವ ಕಾರ್ಯಕ್ರಮವನ್ನು ನೋಡಿದಾಗ ತನ್ನ ಮನೆಯ ತಾರಸಿಯಲ್ಲೂ ಇದೇ ರೀತಿಯ ಪ್ರಯೋಗ ಮಾಡುವ ಯೋಚನೆ ಹೊಳೆಯಿತು ಎನ್ನುತ್ತಾರೆ.

ಬಡ ವಿದ್ಯಾರ್ಥಿಗಳಿಗೆ ನೆರವು
ಅಕ್ಷತಾ ಮೇಸ್ತ ಹವ್ಯಾಸಕ್ಕಾಗಿ ಪ್ರಾರಂಭಿಸಿದ ಮಲ್ಲಿಗೆ ಬೆಳೆ ಕೃಷಿಯ ಜತೆಗೆ ಅಕ್ಷರ ಕ್ರಾಂತಿಗೂ ಕಾರಣವಾಗಿದೆ. ಎರಡು ಗಿಡಗಳಿಂದ ಪ್ರಾರಂಭ ವಾದ ಮಲ್ಲಿಗೆ ಕೃಷಿ ಪ್ರಸ್ತುತ ಐವತ್ತಕ್ಕೂ ಅಧಿಕ ಗಿಡಗಳನ್ನು ಬೆಳೆಸುವವರೆಗೆ ಬಂದು ನಿಂತಿದೆ. ಪ್ಲಾಸ್ಟಿಕ್‌ ಚೀಲಗಳು, ಹಳೆಯ ಕ್ಯಾನ್‌, ಟಯರ್‌ ಗಳಿಗೆ ಗೊಬ್ಬರ ಹಾಗೂ ಮಣ್ಣನ್ನು ಸೇರಿಸಿ ಮಲ್ಲಿಗೆ ಬೆಳೆಯುತ್ತಿದ್ದಾರೆ. ಅವರು ಮಲ್ಲಿಗೆ ಬೆಳೆಯಿಂದ ಬರುವ ಆದಾಯವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿನಿಯೋಗಿಸುವ ಮೂಲಕ ಮಾದರಿಯಾಗಿದ್ದಾರೆ. ಪ್ರತೀ ದಿನ ಅಕ್ಕಪಕ್ಕದ ಮನೆಯ ಆರರಿಂದ ಏಳು ವಿದ್ಯಾರ್ಥಿಗಳು ಮಲ್ಲಿಗೆ ಹೂವನ್ನು ಕಿತ್ತು ಹಾರವನ್ನು ಕಟ್ಟುತ್ತಾರೆ. ವರ್ಷದ ಎಲ್ಲ ಸಮಯದಲ್ಲೂ ಮಲ್ಲಿಗೆ ದೊರೆಯುತ್ತದೆ. ಚಳಿಗಾಲದಲ್ಲಿ ಬೆಳೆ ಕಡಿಮೆಯಾಗುತ್ತದೆ. ಪ್ರತಿದಿನ ಕನಿಷ್ಠ ಒಂದು ಸಾವಿರ ರೂ. ಆದಾಯ ಮಲ್ಲಿಗೆ ಹೂವಿನಿಂದ ದೊರೆಯುತ್ತದೆ. ಈ ಆದಾಯವನ್ನು ಪ್ರತೀ ದಿನ ಹೂ ಕಟ್ಟುವ ವಿದ್ಯಾರ್ಥಿಗಳ ಶಾಲಾ ಖರ್ಚಿಗೆ ವಿನಿಯೋಗಿಸುತ್ತಾರೆ.

ಇದನ್ನೂ ಓದಿ:140 ಅಡಿ ಕಂದಕಕ್ಕೆ ಬಿದ್ದರೂ ಬದುಕುಳಿದ ಯುವಕ |  

ಕೇವಲ ಮಲ್ಲಿಗೆ ಗಿಡ ಮಾತ್ರವಲ್ಲದೆ ಮೂವತ್ತಕ್ಕೂ ಅಧಿಕ ಬಣ್ಣದ ದಾಸವಾಳ ಹಾಗೂ ಇತರ ಹೂಗಳ ಗಿಡಗಳಿವೆ. ಪ್ರಾರಂಭದಲ್ಲಿ ತರಕಾರಿಗಳನ್ನು ಕೂಡ ಬೆಳೆದಿದ್ದಾರೆ.ಆದರೆ ನಿರ್ವಹಣೆ ಸಮಸ್ಯೆಯಿಂದಾಗಿ ಈಗ ಕೇವಲ ಮಲ್ಲಿಗೆಯನ್ನೇ ಪ್ರಧಾನವಾಗಿ ಬೆಳೆಯುತ್ತಾರೆ. ಮುಡೇìಶ್ವರದಲ್ಲಿ ಉಪನ್ಯಾಸಕರಾಗಿರುವ ಅವರ ಪತಿ ಆನಂದ ರಾಜು ಮೇಸ್ತ ಗಿಡಕ್ಕೆ ನೀರುಣಿಸುತ್ತಾರೆ. ತಾರ ಸಿ ಮೇಲೆ ಹೂಗಿಡಗಳನ್ನು ಬೆಳೆಸುವುದರಿಂದ ಮನೆಯ ಒಳಗಡೆ ತಂಪಾದ ವಾತಾವರಣವಿದೆ.

Advertisement

ಒಟ್ಟಾರೆಯಾಗಿ ಬಿಡುವಿನ ವೇಳೆಯಲ್ಲಿ ಟಿ.ವಿ. ಮುಂದೆ ಕುಳಿತು ಕಾಲಹರಣ ಮಾಡುವ ಬದಲು ಒಂದಿಷ್ಟು ಹೊಸತನಕ್ಕೆ ಒಗ್ಗಿಕೊಳ್ಳುವ ಗ್ರಾಮೀಣ ಭಾಗದ ನವೋದಯ ಮಹಿಳೆಯ ಸಮಾಜಮುಖೀ ಕಾರ್ಯ ಇತರರಿಗೆ ಅನುಕರಣೀಯವಾಗಿದೆ. ಮಾತ್ರವಲ್ಲದೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆಮಲ್ಲಿಗೆ ಬೆಳೆಯ ಮೂಲಕ ಸಾಥ್‌ ನೀಡುವ ಇವರಿಗೊಂದು ಸಲಾಂ ಎನ್ನಲೇಬೇಕಾಗಿದೆ.

ವಿದ್ಯಾರ್ಥಿಗಳಿಗೆ ಅನುಕೂಲ
ಬಿಡುವಿನ ಸಮಯದ ಸದುಪಯೋಗದ ಜತೆಗೆ ಗಿಡಗಳೊಂದಿಗೆ ಬದುಕುವುದು ಮನಸ್ಸಿಗೂ ನೆಮ್ಮದಿ ನೀಡುತ್ತದೆ. ಐವತ್ತು ಮಲ್ಲಿಗೆ ಗಿಡಗಳನ್ನು ಬೆಳೆಸಿದರೆ ಒಂದು ಕುಟುಂಬಕ್ಕೆ ಬೇರೆ ದುಡಿಮೆಯ ಆವಶ್ಯಕತೆಯಿರುವುದಿಲ್ಲ. ಕಳೆದ ಮೂರು ವರ್ಷಗಳಿಂದ ಮಹಡಿಯ ಮೇಲೆ ಮಲ್ಲಿಗೆ ಗಿಡ ಬೆಳೆದಿದ್ದೇನೆ. ಇದರಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮೀಸಲಿರಿಸಿದ್ದೇನೆ. ಇದುವರೆಗೆ ಹಲವಾರು ವಿದ್ಯಾರ್ಥಿಗಳು ಇದರ ಅನುಕೂಲ ಪಡೆದಿದ್ದಾರೆ.
-ಅಕ್ಷತಾ ಮೇಸ್ತ, ಮಲ್ಲಿಗೆ ಬೆಳೆಗಾರರು

-ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next