Advertisement

ಪ್ರತಿ ಮಳೆಗಾಲದಲ್ಲೂ ಸವಾಲಾಗಿರುವ ಜಪ್ಪಿನಮೊಗರು

11:59 PM Jun 03, 2020 | Sriram |

ಈ ಬೇಸಗೆಯಲ್ಲಿ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಬಹುತೇಕ ದಿನಗಳನ್ನು ಕೋವಿಡ್-19 ಲಾಕ್‌ಡೌನ್‌ ನುಂಗಿ ಹಾಕಿದೆ. ನಿರ್ಬಂಧಗಳು ತೆರವಾಗಿ ಜನಜೀವನ ಸಹಜತೆಗೆ ಬರುತ್ತಿರುವ ಸಮಯವಿದು. ಕೆಲವೇ ದಿನಗಳಲ್ಲಿ ಮಳೆಗಾಲದ ಸಿದ್ಧತೆಗಳು ಮುಗಿಯಬೇಕು ಎಂಬ ಆಗ್ರಹ ಈ ಸರಣಿಯದ್ದು.

Advertisement

ಮಂಗಳೂರು: ಪ್ರತಿ ವರ್ಷವೂ ಮಳೆಗಾಲದ ಅವಧಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗುವುದು, ಮ್ಯಾನ್‌ಹೋಲ್‌ಗ‌ಳಲ್ಲಿ ಮಳೆನೀರು ಉಕ್ಕಿ ಹರಿಯುವುದು ಸಹಿತ ಹಲವು ರೀತಿಯ ಸಮಸ್ಯೆಗಳಿಗೆ ಒಳಗಾಗು ವವರು ಜಪ್ಪಿನ ಮೊಗರು ಹಾಗೂ ಸುತ್ತಲಿನ ನಿವಾಸಿಗಳು. ಮಹಾನಗರ ಪಾಲಿ ಕೆಯ 45ರಿಂದ 60ನೇ ವಾರ್ಡ್‌ನಲ್ಲಿ ಜಪ್ಪಿನ ಮೊಗರು ಪ್ರದೇಶವು ಪಾಲಿಕೆಗೆ ಪ್ರತಿ ಮಳೆಗಾಲದಲ್ಲಿಯೂ ಸಮಸ್ಯೆಗಳ ಸರ ಮಾಲೆಯನ್ನೇ ಸೃಷ್ಟಿಸುತ್ತಿದೆ. ಸಣ್ಣ ಪ್ರಮಾಣದ ಮಳೆ ಬಂದರೂ ಈ ಭಾಗದ ಹೆಚ್ಚಿನ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗುತ್ತದೆ. ಇದೇ ಕಾರಣಕ್ಕೆ ಮಳೆಗಾಲದ ಆರಂಭಕ್ಕೆ ಕೆಲವು ದಿನ ಬಾಕಿ ಇರುವಾಗಲೇ ಮಹಾನಗರ ಪಾಲಿಕೆ ಸನ್ನದ್ಧವಾಗಿದ್ದು, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಜಪ್ಪಿನಮೊಗರು ಹೆದ್ದಾರಿ ಬದಿಯಲ್ಲಿ ಈ ಹಿಂದೆ ಕೆಲವರು ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದರು. ಇದರಿಂದಾಗಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಿತ್ತು. ಜಪ್ಪಿನಮೊಗರಿನಲ್ಲಿ ರಾಜಕಾಲುವೆಗೆ ಸಣ್ಣ ಪೈಪ್‌ ಹಾಕಿ ಮೇಲಿಂದ ರಸ್ತೆ ಮಾಡಲಾಗಿದೆ. ಸಣ್ಣ ಪೈಪ್‌ನಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮಳೆಗಾಲದಲ್ಲಿ ಸಮಸ್ಯೆ ಆಗುತ್ತಿತ್ತು. ಇನ್ನು ಈ ಪ್ರದೇಶದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು, ಜೋರಾಗಿ ಮಳೆ ಬಂದರೆ ನೀರು ಪಕ್ಕದ ತಗ್ಗು ಪ್ರದೇಶಕ್ಕೆ ಆವೃತವಾಗುತ್ತದೆ. ಈ ಬಾರಿಯ ಮಳೆಗಾಲಕ್ಕಾದರೂ ತಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಜನರಲ್ಲಿದೆ.

ಕಣ್ಣೂರು ವಾರ್ಡ್‌ನ ಪಡೀಲ್‌ ಅಂಡರ್‌ಪಾಸ್‌ನಲ್ಲೂ ಪ್ರತಿ ಮಳೆಗಾಲ ದಲ್ಲಿಯೂ ಸಮಸ್ಯೆ ಉದ್ಭವಿಸುತ್ತದೆ. ಸಣ್ಣ ಮಳೆ ಬಂದರೆ ಸಾಕು ಪಡೀಲ್‌ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸುಗಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಜತೆಗೆ ಇಲ್ಲೇ ಪಕ್ಕದಲ್ಲಿರುವ ಮತ್ತೂಂದು ಬದಿಯ ಅಂಡರ್‌ಪಾಸ್‌ ಕೆಲಸ ಬಹುತೇಕ ಪೂರ್ಣಗೊಂಡಿದ್ದರೂ ಉದ್ಘಾಟನೆಗೊಂಡಿಲ್ಲ. ಇದರಿಂದಾಗಿ ಮುಂಬರುವ ಮಳೆಗಾಲದಲ್ಲಿ ಈ ಪ್ರದೇಶ ಸಮಸ್ಯೆಗೆ ಸಿಲುಕುವ ಸಾಧ್ಯತೆ ಹೆಚ್ಚಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿ ರುವ ಕಂಕನಾಡಿ ವಾರ್ಡ್‌ನಲ್ಲಿಯೂ ಮಳೆಗಾಲದ ಬಗ್ಗೆ ಮುನ್ನೆಚ್ಚರಿಕೆ ವಹಿಸ ಬೇಕಿದೆ. ಈ ವಾರ್ಡ್‌ನಲ್ಲಿ ಪಂಪ್‌ವೆಲ್‌ನಿಂದ ಎಕ್ಕೂರುವರೆಗೆ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ರಾಜಕಾಲುವೆ ಹಾದು ಹೋಗುತ್ತದೆ. ಇದಕ್ಕೆ ಸಮರ್ಪಕ ತಡೆಗೋಡೆ ನಿರ್ಮಾಣ ಕಾರ್ಯ ಆಗ ಬೇಕಿದೆ. ಮಳೆ ಬಂದಾಗ ಈ ಭಾಗದ ತಗ್ಗು ಪ್ರದೇಶಗಳಿಗೆ ಕೃತಕ ನೆರೆ ಆವರಿಸುತ್ತದೆ. ಜೋರಾಗಿ ಮಳೆ ಬಂದರೆ ಪಂಪ್‌ವೆಲ್‌ ಮೇಲ್ಸೇತುವೆಯ ಬದಿಗೆ ಹಾಕಲಾಗಿದ್ದ ಮಣ್ಣು ಕೂಡ ರಸ್ತೆಗೆ ಬೀಳುವ ಸಾಧ್ಯತೆ ಇದೆ.

Advertisement

ಎಬಿಡಿ ಯೋಜನೆಗೆ ಆಯ್ಕೆಯಾದ ಮಂಗಳಾದೇವಿ ವಾರ್ಡ್‌ನಲ್ಲಿಯೂ ಒಳಚರಂಡಿ ವ್ಯವಸ್ಥೆಯದ್ದೇ ಸಮಸ್ಯೆ. ಅದರಲ್ಲಿಯೂ ಮಂಕಿಸ್ಟ್ಯಾಂಡ್ ‌, ಶಾಂತಾ ಆಳ್ವ ಕಾಂಪೌಂಡ್‌, ಅಮರ್‌ ಆಳ್ವ ರಸ್ತೆಯ ಸುತ್ತಮುತ್ತಲಿನ ತಗ್ಗು ಪ್ರದೇಶಗಳು ನೆರೆಗೆ ತುತ್ತಾಗುತ್ತವೆ. ತೋಡು ನೀರು ಕಲುಷಿತ ಗೊಂಡಿದೆ. ಅಲ್ಲದೆ, ಅಕ್ಕಪಕ್ಕದಲ್ಲಿ ಮನೆ ಗಳಿದ್ದು, ತಡೆಗೋಡೆ ನಿರ್ಮಾಣ ಮಾಡ ಬೇಕಿದೆ. ಪಾಲಿಕೆ ಮೇಯರ್‌ ದಿವಾಕರ ಪಾಂಡೇಶ್ವರ ಅವರ ಕಂಟೋನ್ಮೆಂಟ್‌ ವಾರ್ಡ್‌ನಲ್ಲಿ ಒಳಚರಂಡಿ ವ್ಯವಸ್ಥೆ ಮತ್ತಷ್ಟು ಸುಧಾರಿಸಬೇಕಿದೆ. ನಗರದಲ್ಲಿ ಭಾರೀ ಮಳೆ ಸುರಿದರೆ ವೈದ್ಯನಾಥ ನಗರ, ದೂಮಪ್ಪ ಕಾಂಪೌಂಡ್‌, ಶಿವನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸುತ್ತದೆ.

ಗುಜ್ಜರಕೆರೆ ಅಭಿವೃದ್ಧಿ
ಮಂಗಳಾದೇವಿ ವಾರ್ಡ್‌ನಲ್ಲಿರುವ ನಗರದ ಪುರಾತನ ಕೆರೆಯಾಗಿರುವ ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿ ಈಗ ಸ್ಮಾರ್ಟ್‌ ಸಿಟಿ ಯೋಜನೆಯಡಿ ಆರಂಭವಾಗಿದೆ. ಅನೇಕ ಬಾರಿ ಕೋಟ್ಯಂತರ ರೂಪಾಯಿ ವ್ಯಯಿಸಿ ಕೆರೆ ಅಭಿವೃದ್ಧಿ ಗೊಳಿಸಿದರೂ ಅಸಮರ್ಪಕವಾಗಿತ್ತು. ಮಳೆಗಾಲದಲ್ಲಿ ಕೆರೆ ತುಂಬ ನೀರು ನಿಂತರೂ ಅದನ್ನು ವಿನಿಯೋಗಿಸಲು ಸಾಧ್ಯವಾಗಿಲ್ಲ. ಈಗ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ.

ಈ ವಾರ್ಡ್‌ಗಳ ಕಥೆ
ಇದು ಸುದಿನ ತಂಡವು 46. ಕಂಟೋನ್ಮೆಂಟ್‌, 47. ಮಿಲಾಗ್ರಿಸ್‌, 48. ಕಂಕನಾಡಿ ವೆಲೆನ್ಸಿಯಾ, 49. ಕಂಕನಾಡಿ, 50.ಅಳಪೆ (ದಕ್ಷಿಣ), 51. ಅಳಪೆ (ಉತ್ತರ), 52. ಕಣ್ಣೂರು, 53. ಬಜಾಲ್‌, 54. ಜಪ್ಪಿನಮೊಗರು, 55. ಅತ್ತಾವರ, 56. ಮಂಗಳಾದೇವಿ, 57. ಹೊಯಿಗೆಬಜಾರ್‌, 58. ಬೋಳಾರ್‌, 59. ಜಪ್ಪು ಹಾಗೂ 60. ಬೆಂಗ್ರೆ ವಾರ್ಡ್‌ಗೆ ಭೇಟಿ ಕೊಟ್ಟಾಗ ಕಂಡು ಬಂದ ಸಮಸ್ಯೆಗಳು.

ಮುಂಜಾಗೃತ ಕ್ರಮ
ಮಳೆಗಾಲದಲ್ಲಿ ಜಪ್ಪಿನಮೊಗರು ಪ್ರದೇಶದಲ್ಲಿ ಕೃತಕ ನೆರೆ ಆವರಿಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈಗ ಆ ಪ್ರದೇಶದಲ್ಲಿ ಒತ್ತುವರಿ ತೆರವು ಕಾಮಗಾರಿ ಆರಂಭವಾಗಿದೆ. ನಗರದ ಯಾವೆಲ್ಲ ಪ್ರದೇಶಗಳಲ್ಲಿ ಒತ್ತುವರಿ ಮಾಡಲಾಗಿದೆಯೋ ಅಲ್ಲಿ ತೆರವು ಮಾಡಲಾಗುತ್ತದೆ. ಮಳೆಗಾಲ ಆರಂಭಕ್ಕೂ ಮುನ್ನ ನಗರದಲ್ಲಿ ರಾಜಕಾಲುವೆ ಹೂಳೆತ್ತುವ ಕಾಮಗಾರಿ ಆರಂಭವಾಗಿದೆ. ಮಳೆಗಾಲದಲ್ಲಿ ಅನುಸರಿಸಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಗಮನಹರಿಸಲಾಗುತ್ತಿದೆ.
– ಡಾ| ಜಿ. ಸಂತೋಷ್‌ ಕುಮಾರ್‌, ಉಪ ಆಯುಕ್ತರು, ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next