Advertisement

ವೈದ್ಯರು ಮತ್ತು ದೇವರು

07:00 AM Apr 04, 2017 | Team Udayavani |

ಇದು ಇತ್ತೀಚೆಗೆ ನಡೆದ ಘಟನೆ. ಫೆಬ್ರವರಿ 5ರಂದು ಆ ಜಪಾನೀ ಮಹಿಳೆ ಗೋವಾದಿಂದ ಬೈಂದೂರಿಗೆ ಪ್ರಯಾಣಿಸುತ್ತಿದ್ದರು. ರೈಲು ಗೋವಾದಿಂದ ಹೊರಡುವಾಗಲೇ ಒಂದು ಗಂಟೆ ತಡವಾಗಿದ್ದರಿಂದ, ಬೈಂದೂರಿಗೆ ತಡವಾಗಿ ತಲುಪಬಹುದು ಎಂದು ಆಕೆ ಯೋಚಿಸುತ್ತಿದ್ದಳು! ಆದರೆ ರೈಲು ಬೈಂದೂರಿಗೆ ಬೇಗನೇ  ತಲುಪಿತು. ಆಕೆ ಅವಸರದಿಂದ ರೈಲಿನಿಂದ ಕೆಳಗಿಳಿಯಲು ಪ್ರಯತ್ನ ಮಾಡುತ್ತಿದ್ದಾಗಲೇ ರೈಲು ಚಲಿಸಲಾರಂಭಿಸಿತು. ಪರಿಣಾಮವಾಗಿ ಆಕೆ ಪ್ಲಾಟ್‌ಫಾರ್ಮಿನ ಮೇಲೆ ಬಿದ್ದಳು. ಕಾಂಕ್ರೀಟ್‌ ನೆಲಕ್ಕೆ ತಲೆಯು ಜೋರಾಗಿ ಬಡಿದು ತುಂಬ ಪೆಟ್ಟಾಯಿತು. ಆಕೆಗೆ ಪ್ರಜ್ಞೆಯಿರಲಿಲ್ಲ, ಕಿವಿಯಿಂದ ರಕ್ತ ಸ್ರಾವವಾಗತೊಡಗಿತು. 

Advertisement

ಅದೇ ರೈಲಿನಲ್ಲಿ ಬೇರೆ ಬೋಗಿಯಲ್ಲಿದ್ದ  ಇನ್ನೋರ್ವ ವಿದೇಶಿ ಮಹಿಳೆ ಕೂಡ ರೈಲಿನಿಂದ ಇಳಿದರು. ಗಾಯಗೊಂಡ ಜಪಾನೀ ಮಹಿಳೆಯ ಸುತ್ತ ಜನರು ಗುಂಪುಗಟ್ಟಿದ್ದನ್ನು ನೋಡಿದಳು. ಆಕೆ ಯುಕೋಳನ್ನು ಮೊದಲು ಬೈಂದೂರು ಆಸ್ಪತ್ರೆಗೆ, ಅನಂತರ ಕುಂದಾಪುರದ ಆಸ್ಪತ್ರೆಗೆ, ಕೊನೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದರು. 

 ರೋಗಿಯ ಸ್ಥಿತಿಗತಿಯನ್ನು ನೋಡಿದ ವೈದ್ಯರಿಗೆ ಆಕೆಯು ಬದುಕುಳಿಯುವ ಭರವಸೆಯೇ ಇರಲಿಲ್ಲ. ಆದಾಗ್ಯೂ 6ನೇ ತಾರೀಕು ಬೆಳಗಿನವರೆಗೂ ಕಾದರು. ಅಂದು ಆಕೆ ನಿಧಾನವಾಗಿ ದೇಹವನ್ನು ಅಲುಗಾಡಿಸಲು ಶುರು ಮಾಡಿದ್ದನ್ನು ನೋಡಿ, ಆಕೆಯ ಮಿದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರತೆಗೆಯಲು ವೈದ್ಯರು ನಿರ್ಧರಿಸಿದರು. ಆ ವೈದ್ಯರೇ ಗಿರೀಶ್‌ ಮೆನನ್‌. 
ಗಾಯಗೊಂಡ ಜಪಾನೀ ಮಹಿಳೆಯ ಪತಿ ಅಂದು ರಾತ್ರಿ ಬರುವವರಿದ್ದರು. ಹೀಗಾಗಿ ಅವರ ಜತೆಗೆ ಜಪಾನೀ ಭಾಷೆಯಲ್ಲಿ ವ್ಯವಹರಿಸಲು ನನಗೆ ಕರೆಬಂತು. ಮರುದಿನ ನಾನು ಮತ್ತು ನನ್ನ ಪತ್ನಿ ಇಬ್ಬರೂ ಆಸ್ಪತ್ರೆಗೆ ಹೋದೆವು. 

ಫೆ.7ರಂದು ಬೆಳಗ್ಗೆ ನಾವು ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದಾಗ, ಡಾ| ಗಿರೀಶ್‌ ಮೆನನ್‌ ಅವರು ಆ ಮಹಿಳೆ ಬದುಕುಳಿಯುವ ಸಾಧ್ಯತೆ ಶೇ.5-10 ಮಾತ್ರವೆಂದೂ, ಬದುಕುಳಿದರೂ ಸಹಜ ಸ್ಥಿತಿಗೆ ಬರುವ ಸಾಧ್ಯತೆ ತೀರಾ ಕಡಿಮೆ ಎಂದೂ ಹೇಳಿದರು. ವೈದ್ಯರು ರೋಗಿಯನ್ನು ಅತಿಹೆಚ್ಚು ಕಾಳಜಿ ವಹಿಸುವ ಪ್ರೀಮಿಯರ್‌ ಸೂಟ್‌ಗೆ ವರ್ಗಾಯಿಸಿದರು. ಆಫೀಸ್‌ ಮ್ಯಾನೇಜರ್‌ ಶೈಜಾ ಮ್ಯಾಥ್ಯೂ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ತುಂಬ ಆಸಕ್ತಿ ವಹಿಸಿದರು. 

ದಿನಗಳು ಉರುಳಿದವು, ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರು, ದಾದಿಯರು ತುಂಬು ಕಾಳಜಿ ತೆಗೆದುಕೊಂಡರು, ರೋಗಿಯ ಪುನಶ್ಚೇತನವನ್ನು ಮುಂದುವರೆಸಿದರು. ಆ ಮಹಿಳೆ ನಿಧಾನವಾಗಿ ಆಕೆ ತಾನೇ ಉಸಿರಾಡಲಾರಂಭಿಸಿದಳು, ಸಂಗೀತವನ್ನು ಆಲಿಸಲಾರಂಭಿಸಿದಳು, ಕಣ್ಣುಗಳನ್ನು ತೆರೆದಳು, ನಾವು ಹೇಳಿದ್ದನ್ನು ನಿಧಾನವಾಗಿ ಅರ್ಥ ಮಾಡಿಕೊಳ್ಳಲಾರಂಭಿಸಿದಳು. ನಾವು ಎಲ್ಲವೂ ಸರಿಯಾಗಿದೆಯೇ ಎಂದು ನೋಡಿಕೊಳ್ಳಲು ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದೆವು, ಅವಳ ಪತಿಗೆ ವೀಸಾ ಪ್ರಕ್ರಿಯೆ ನಡೆಸುವುದೂ ಸೇರಿದಂತೆ ಹಲವಾರು ವಿಷಯಗಳನ್ನು ಪರಿಶೀಲಿಸುತ್ತಿದ್ದೆವು. 
ಫೆ.7ರಂದು ನಿಜಕ್ಕೂ ಪವಾಡವೇ ಜರುಗಿತು! ಆ ಜಪಾನೀ ಮಹಿಳೆ ಮಾತನಾಡಿದಳು. ಆಕೆಯ ಮೊದಲ ಮಾತು, “ಓಂ ನಮೋ ನಾರಾಯಣ ನಮಃ’! ಆಕೆ ಜಪಾನಿನಲ್ಲಿ ಯೋಗ ಶಿಕ್ಷಕಿಯಾಗಿದ್ದವಳು. ಜಪಾನೀಯರು ಬೌದ್ಧರು ಹಾಗೂ ಹಿಂದುತ್ವ ಮತ್ತು ಹಿಂದೂ ದೇವದೇವತೆಗಳನ್ನು ತುಂಬ ನಂಬುತ್ತಾರೆ. ಇನ್ನಷ್ಟು ಚಿಕಿತ್ಸೆ ಹಾಗೂ ಪುನಶ್ಚೇತನಗೊಳಿಸುವುದನ್ನು ಜಪಾನಿನಲ್ಲಿ ನಡೆಸಬಹುದು ಎಂದು ಕೆಎಂಸಿಯ ವೈದ್ಯರು ಭಾವಿಸಿದರು. ಹೀಗಾಗಿ ಆಕೆ ಮಾರ್ಚ್‌ 9ರಂದು ತನ್ನ ಪತಿ ಮತ್ತು ಜಪಾನಿನ ಇನ್ಶೂರೆನ್ಸ್‌ ಕಂಪೆನಿಯ ಇಂಟರ್‌ನ್ಯಾಶನಲ್‌ ಟ್ರಾನ್ಸ್‌ಪೊàರ್ಟ್‌ ಏಜೆನ್ಸಿಯ ಎಮರ್ಜೆನ್ಸಿ ವೈದ್ಯರೊಂದಿಗೆ ಜಪಾನಿಗೆ ಮರಳಿ ಪ್ರಯಾಣಿಸಿದಳು. ಆಕೆ ಈಗ ಜಪಾನಿನ ಆಸ್ಪತ್ರೆಗೆ ಸೇರಿದ್ದು, ಅಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. 

Advertisement

ಶೇ. 5-10ರಷ್ಟು ಬದುಕುಳಿಯುವ ಸಾಧ್ಯತೆಯಿದ್ದ ವ್ಯಕ್ತಿ ಒಂದು ತಿಂಗಳ ಅನಂತರ ಆಸ್ಪತ್ರೆಯಿಂದ ಹೊರ ನಡೆದರು ಎಂದರೆ ಇದು ಪವಾಡವಲ್ಲದೇ ಇನ್ನೇನು? ಡಾ| ಗಿರೀಶ್‌ ಮೆನನ್‌ ಅವರ ತಂಡಕ್ಕೆ, ಶೈಜಾ ಮ್ಯಾಥ್ಯೂ ಮತ್ತು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಲು ಕೊಡುಗೆ ನೀಡಿದ ಆಸ್ಪತ್ರೆಯ ಎಲ್ಲ ಸಿಬಂದಿಗೆ ತುಂಬು ಕೃತಜ್ಞತೆಗಳು. 

ಜಪಾನ್‌ – ಮಣಿಪಾಲ ಹರಿಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next