Advertisement
ಬೆಕ್ಕುಗಳ ಸೈನ್ಯ ಕಂಡು ಜಿಜೋ ತಾಯಿಗೆ ತುಂಬ ಕಿರಿಕಿರಿಯುಂಟಾಗುತ್ತಿತ್ತು. ಅವಳು ಗಂಡನೊಂದಿಗೆ, “”ದುಡಿಮೆಯಲ್ಲಿ ನೆರವು ನೀಡಬೇಕಾದ ಮಗನನ್ನು ಅವನ ಪಾಡಿಗೆ ಬಿಟ್ಟಿದ್ದೀರಿ. ಈ ಬೆಕ್ಕುಗಳು ನಮಗೆ ಕೂಡ ಉಳಿಸದೆ ಹಾಲು, ಬೆಣ್ಣೆ ಎಲ್ಲ ಖಾಲಿ ಮಾಡುತ್ತವೆ. ಚೆನ್ನಾಗಿ ತಿಂದು ಮಲಗುವುದು ಬಿಟ್ಟರೆ ಬೇರೆ ಏನೂ ನೌಕರಿ ಮಾಡುವುದಿಲ್ಲ. ಅವನಿಗೆ ಬುದ್ಧಿ ಹೇಳಿ ಹೊಲಕ್ಕೆ ದುಡಿಯಲು ಕರೆದುಕೊಂಡು ಹೋಗಿ. ನಿಮಗೂ ವಯಸ್ಸಾಗಿದೆ. ಎಷ್ಟು ಕಾಲ ಒಬ್ಬರೇ ದುಡಿಯುತ್ತೀರಿ?” ಎಂದು ಕೇಳಿದಳು.
Related Articles
Advertisement
ಯತಿಯು ಜಿಜೋನೊಂದಿಗೆ, “”ನೋಡು, ಮಾನವ ಜನ್ಮವೆಂದರೆ ಬಹು ಅಮೂಲ್ಯವಾದುದು. ಇದನ್ನು ಅನಾಥ ಬೆಕ್ಕುಗಳ ಪಾಲನೆಗೆ ಮೀಸಲಿಡಬಾರದು. ಏನಾದರೂ ಶ್ರೇಷ್ಠವಾದುದನ್ನು ಸಾಧಿಸಿ ಹೆತ್ತವರಿಗೆ ಕೀರ್ತಿ ತರುವ ಕೆಲಸ ಮಾಡಬೇಕು. ನಾನು ನಿನಗೆ ಮಹಿಮಾ ಶಕ್ತಿಯಿರುವ ಒಂದು ಕುಂಚ ಮತ್ತು ಬಣ್ಣಗಳನ್ನು ಕೊಡುತ್ತೇನೆ. ದೇವಾಲಯದ ಗೋಡೆಗಳು ಖಾಲಿಯಾಗಿವೆ. ಇದರಿಂದ ಅಲ್ಲಿ ಬುದ್ಧನ ಚಿತ್ರಗಳು, ದೇವತೆಗಳ ಚಿತ್ರಗಳು ಇದನ್ನೆಲ್ಲ ಬರೆಯುವ ಕೆಲಸ ಮಾಡು. ಅದರಲ್ಲಿ ಒಂದು ಅದ್ಭುತವನ್ನು ನೀನು ನೋಡುವೆ. ಕುಂಚ ಮತ್ತು ಬಣ್ಣಗಳ ಮಹಿಮೆಯಿಂದಾಗಿ ಬರೆದ ಚಿತ್ರಗಳು ಜೀವಂತವಾಗಿ ನಿನ್ನೊಂದಿಗೆ ಮಾತನಾಡುತ್ತವೆ. ಇದರಿಂದ ಮುಂದೆ ನಿನ್ನ ಕೀರ್ತಿ ಇಡೀ ದೇಶದ ತುಂಬ ಹರಡುತ್ತದೆ. ಇಂತಹ ದೇವಾಲಯವೊಂದರ ಯಜಮಾನಿಕೆ ನಿನ್ನನ್ನು ಹುಡುಕಿಕೊಂಡು ಬರುತ್ತದೆ. ಚಿತ್ರ ಬರೆಯುವ ಕಲೆಯನ್ನು ನಿನಗೆ ನಾನೇ ಕಲಿಸಿ ಕೊಡುತ್ತೇನೆ” ಎಂದು ಹೇಳಿ ಕುಂಚ ಮತ್ತು ಬಣ್ಣವನ್ನು ನೀಡಿದ. ತನ್ನ ಶಕ್ತಿಯಿಂದ ಅವನನ್ನೊಬ್ಬ ಕಲಾವಿದನಾಗುವಂತೆ ಮಾಡಿದ.
“”ಹಾಗೆಯೇ ಆಗಲಿ” ಎಂದು ಹೇಳಿ ಜಿಜೋ ಗೋಡೆಯಲ್ಲಿ ಚಿತ್ರ ಬರೆಯಲು ತೊಡಗಿದ. ಮಧ್ಯ ರಾತ್ರೆ ಇದ್ದಕ್ಕಿದ್ದಂತೆ ಮಲಗಿದ್ದ ಯತಿಗೆ ಎಚ್ಚರವಾಯಿತು. ನೂರಾರು ಬೆಕ್ಕುಗಳು ಇಡೀ ದೇವಾಲಯದ ತುಂಬ ಓಡಾಡುತ್ತ ನೈವೇದ್ಯಕ್ಕೆ ತಂದಿರಿಸಿದ ಹಾಲನ್ನು ಕುಡಿದು, ಭಕ್ಷ್ಯಗಳನ್ನು ತಿಂದು ಕಿರುಚಾಡುತ್ತ ಇದ್ದವು. ಇಷ್ಟೊಂದು ಬೆಕ್ಕುಗಳು ಹೇಗೆ ಬಂದವು ಎಂದು ತಿಳಿಯಲು ಎದ್ದು ಬಂದು ನೋಡಿದಾಗ ಯತಿ ಹೌಹಾರಿಬಿಟ್ಟ. ತಾನು ಕೊಟ್ಟ ಕುಂಚದಿಂದ ಜಿಜೋ ಗೋಡೆಯ ತುಂಬ ದೇವತೆಗಳ ಚಿತ್ರಗಳನ್ನು ಬರೆದಿರಲಿಲ್ಲ. ಕೇವಲ ಬೆಕ್ಕುಗಳ ಚಿತ್ರಗಳನ್ನಷ್ಟೇ ಬರೆದಿದ್ದ. ಕುಂಚದ ಮಹಿಮೆಯಿಂದ ಅವು ಜೀವಂತಗೊಂಡು ದೇವಾಲಯದ ತುಂಬ ಓಡಾಡುತ್ತ ಇದ್ದವು.
ಯತಿಗೆ ಜಿಜೋ ಮೇಲೆ ತೀವ್ರ ಅಸಮಾಧಾನವುಂಟಾಯಿತು. ಇವನನ್ನು ಬೆಕ್ಕುಗಳ ವ್ಯಾಮೋಹದಿಂದ ದೂರ ಮಾಡುವುದು ಕಷ್ಟವೆಂದು ನಿರ್ಧರಿಸಿದ. ಜಿಜೋ ಬೆನ್ನಿಗೆ ಎರಡೇಟು ಬಾರಿಸಿದ. “”ನೀನೊಬ್ಬ ಅವಿವೇಕಿ, ನಿನ್ನಿಂದ ಯಾರಿಗೂ ಯಾವ ಲಾಭವೂ ಸಿಗುವುದಿಲ್ಲ. ಇನ್ನು ಅರೆಗಳಿಗೆ ಕೂಡ ಇಲ್ಲಿ ನೀನಿರಬಾರದು. ನಿನಗಾಗಿ ನಿನ್ನ ತಾಯಿ, ತಂದೆ ಎಷ್ಟು ಕಷ್ಟ ಪಡುತ್ತಿದ್ದಾರೆಂಬ ಅರಿವು ಇಲ್ಲದೆ ಇಂತಹ ನಿರರ್ಥಕ ಕೆಲಸ ಮಾಡುತ್ತಿರುವೆಯಲ್ಲ, ತಕ್ಷಣ ಇಲ್ಲಿಂದ ನಿನ್ನ ದಾರಿ ಹಿಡಿದುಹೋಗು” ಎಂದು ಕಟುವಾಗಿ ಹೇಳಿ ಹೊರಗೆ ದಬ್ಬಿದ.
ಮನೆಗೆ ಹೋದರೆ ತಾಯಿತಂದೆಯೂ ತನಗೆ ಹೊಡೆಯುತ್ತಾರೆ, ಆದ ಕಾರಣ ಬೇರೆ ಎಲ್ಲಿಗಾದರೂ ಹೋಗಿ ಅಲ್ಲೊಂದು ಬೆಕ್ಕುಗಳ ಉದ್ಯಾನ ಮಾಡಬೇಕೆಂದು ಜಿಜೋ ಯೋಚಿಸಿದ. ಮುಂದೆ ಮುಂದೆ ಹೋಗಿ ತುಂಬ ದೂರ ಸಾಗಿದ. ಮರುದಿನ ಕತ್ತಲಾಗುವಾಗ ಒಂದು ಪಟ್ಟಣವನ್ನು ತಲುಪಿದ. ಆದರೆ ಸಂಜೆಯ ವೇಳೆಗೇ ಎಲ್ಲ ಅಂಗಡಿಗಳು ಮತ್ತು ಮನೆಗಳ ಬಾಗಿಲು ಭದ್ರಪಡಿಸಿ ಜನರೆಲ್ಲ ಒಳಗೆ ಸೇರಿಕೊಂಡಿದ್ದರು. ಜಿಜೋ ಒಂದು ಮನೆಯ ಬಾಗಿಲು ಬಡಿದ. “”ದೂರದ ಊರಿನಿಂದ ಕಾಲ್ನಡಿಗೆಯಲ್ಲಿ ಬಂದಿದ್ದೇನೆ. ತುಂಬ ಆಯಾಸವಾಗಿದೆ. ನನಗೆ ರಾತ್ರೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡಿ” ಎಂದು ಕೇಳಿಕೊಂಡ.
ಆದರೆ ಯಾರೂ ಬಾಗಿಲು ತೆರೆದು ಜಿಜೋನನ್ನು ಒಳಗೆ ಬರಮಾಡಿಕೊಳ್ಳಲಿಲ್ಲ. ಕಡೆಗೆ ಒಬ್ಬ ಮುದುಕಿ ಬಾಗಿಲನ್ನು ಸ್ವಲ್ಪ ಮಾತ್ರ ತೆರೆದು, “”ಬೇಗ ಒಳಗೆ ಬಾ, ತಪ್ಪಿದರೆ ರಾಕ್ಷಸರಿಗೆ ಆಹಾರವಾಗಬೇಕಾದೀತು” ಎಂದು ಅವಸರಪಡಿಸಿದಳು. ಜಿಜೋ ಒಳಗೆ ಬಂದು, “”ರಾಕ್ಷಸರು ಎಂದೆಯಲ್ಲ, ನೋಡಲು ಹೇಗಿದ್ದಾರೆ, ಏನು ಮಾಡುತ್ತಾರೆ?” ಎಂದು ಕೇಳಿದ. ಅಜ್ಜಿ, “”ಈ ರಾಕ್ಷಸರು ಪಾತಾಳ ಲೋಕದಿಂದ ಬಿಲ ಕೊರೆದುಕೊಂಡು ಪ್ರತೀ ದಿನ ಇಲ್ಲಿಗೆ ಬರುತ್ತಾರೆ. ಕೈಗೆ ಸಿಕ್ಕಿದ ಮನುಷ್ಯರನ್ನು, ಜಾನುವಾರುಗಳನ್ನು ಹಿಡಿದು ನುಂಗುತ್ತಾರೆ. ಅವರೆಲ್ಲ ಪರ್ವತದಷ್ಟು ದೊಡ್ಡ ಇಲಿಗಳ ರೂಪದಲ್ಲಿದ್ದಾರೆ. ಅವರಿಗೊಬ್ಬ ರಾಜನಿದ್ದಾನೆ. ಅವನು ಕೂಡ ಆಕಾಶಕ್ಕೆ ಮುಟ್ಟುವಷ್ಟು ದೊಡ್ಡ ಗಾತ್ರದ ಇಲಿಯಂತಿದ್ದಾನೆ” ಎಂದು ಅಜ್ಜಿ ನಡೆದ ಕತೆ ಹೇಳಿದಳು.
“”ಏನಜ್ಜಿ, ಈ ಊರಿಗೆ ಒಬ್ಬ ದೊರೆ ಇರುವುದಿಲ್ಲವೆ? ಪ್ರಜೆಗಳನ್ನು ಹಿಡಿದು ನುಂಗುವ ರಾಕ್ಷಸರ ಕಾಟವನ್ನು ನಿವಾರಿಸಬೇಕಾದುದು ಅವನ ಹೊಣೆಯಲ್ಲವೆ?” ಎಂದು ಕೇಳಿದ ಜಿಜೋ. “”ದೊರೆಯೇನೋ ಇದ್ದಾನೆ. ಆದರೆ ರಾಕ್ಷಸರನ್ನು ಎದುರಿಸಲು ಹೋದ ಸೈನಿಕರನ್ನು ಅವರು ಮುರಿದು ತಿಂದುಬಿಟ್ಟರೆ ಅವನಾದರೂ ಏನು ತಾನೇ ಮಾಡಬಲ್ಲ? ತಿನ್ನಲು ಏನೂ ಸಿಗದಿದ್ದರೆ ರಾಕ್ಷಸರು ಮನೆಯೊಳಗೆ ನುಗ್ಗುವುದುಂಟು. ಇವರ ಕಾಟದಿಂದ ಯಾರು ಪಾರು ಮಾಡುತ್ತಾರೋ ಅವರಿಗೆ ತನ್ನ ಚೆಲುವೆಯಾದ ಒಬ್ಬಳೇ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ, ಮುಂದೆ ನನ್ನ ಉತ್ತರಾಧಿಕಾರಿಯಾಗಿ ಅವರೇ ಸಿಂಹಾಸನವೇರುತ್ತಾರೆ ಎಂದು ದೊರೆ ಇಡೀ ಊರಿನಲ್ಲಿ ಡಂಗುರ ಸಾರಿದ. ಇದನ್ನು ಕೇಳಿ ಕೆಲವರು ಬಂದು ರಾಕ್ಷಸರ ಮುಂದೆ ಹೋಗಿ ಜೀವ ಕಳೆದುಕೊಂಡರು” ಎಂದಳು ಅಜ್ಜಿ.
ರಾತ್ರೆ ಅಜ್ಜಿ ಮಲಗಿದ ಮೇಲೆ ಜಿಜೋ ತನ್ನಲ್ಲಿರುವ ಬಣ್ಣ ಮತ್ತು ಕುಂಚವನ್ನು ಹೊರಗೆ ತಂದ. ಬೆಟ್ಟದಷ್ಟು ದೊಡ್ಡ ಬೆಕ್ಕುಗಳ ಚಿತ್ರ ಬರೆದ. ಕುಂಚದ ಮಹಿಮೆಯಿಂದಾಗಿ ಅವು ಜೀವಂತವಾಗಿ ಎದ್ದು ನಿಂತು, “”ಮಿಯಾಂವ್” ಎಂದು ಕೂಗಿದವು. ಅವನು ಮೆಲ್ಲಗೆ ಬಾಗಿಲು ತೆರೆದು ಬೆಕ್ಕುಗಳನ್ನು ಹೊರಗೆ ಕಳುಹಿಸಿದ. ಮಧ್ಯ ರಾತ್ರೆ ಆಹಾರ ಹುಡುಕುತ್ತ ರಾಕ್ಷಸ ಇಲಿಗಳು ಮನೆಗಳ ಮುಂದೆ ತಿರುಗಾಡಿಕೊಂಡು ಅಜ್ಜಿಯ ಮನೆಯ ಬಳಿಗೆ ಬಂದವು. ಮರುಕ್ಷಣವೇ ಶಕ್ತಿಶಾಲಿಯಾದ ಚಿತ್ರದ ಬೆಕ್ಕುಗಳು ಅವುಗಳ ಮೇಲೆರಗಿದವು. ದೈವಿಕ ಶಕ್ತಿಯಿದ್ದ ಬೆಕ್ಕುಗಳ ಪರಾಕ್ರಮದೆದುರು ಇಲಿಗಳ ಆಟ ನಡೆಯಲಿಲ್ಲ. ಬೆಳಗಾಗುವಾಗ ಎಲ್ಲ ದೈತ್ಯ ದೇಹದ ಇಲಿಗಳೂ ಅಜ್ಜಿ ಮನೆಯ ಮುಂಬಾಗಿಲಿನಲ್ಲಿ ಸತ್ತು ಬಿದ್ದಿರುವ ದೃಶ್ಯ ಗೋಚರಿಸಿತು.
ಬಹು ಕಾಲದಿಂದ ಪ್ರಜೆಗಳಿಗೆ ಕಾಟ ಕೊಡುತ್ತಿದ್ದ ರಾಕ್ಷಸ ಇಲಿಗಳನ್ನು ಪರವೂರಿನಿಂದ ಬಂದ ಹುಡುಗನೊಬ್ಬ ಸಂಹರಿಸಿದ ಎಂಬ ಸುದ್ದಿ ದೊರೆಯ ಕಿವಿಗೆ ತಲುಪಿತು. ಪಲ್ಲಕಿಯೊಂದಿಗೇ ಅಜ್ಜಿಯ ಮನೆಗೆ ಬಂದ. “”ನನ್ನ ಅರಮನೆಗೆ ಬಂದು ರಾಜಕುಮಾರಿಯನ್ನು ವರಿಸು. ಮುಂದೆ ನೀನೇ ಈ ರಾಜ್ಯದ ದೊರೆಯಾಗಿ ಪರಿಪಾಲಿಸು” ಎಂದು ಹೇಳಿ ಜಿಜೋನನ್ನು ಕರೆದುಕೊಂಡು ಅರಮನೆಗೆ ಬಂದ. ತನ್ನ ತಾಯಿ, ತಂದೆಯನ್ನೂ ತಾನಿರುವಲ್ಲಿಗೆ ಕರೆಸಿಕೊಂಡು ಜಿಜೋ ಸುಖವಾಗಿದ್ದ.
ಪ. ರಾಮಕೃಷ್ಣ ಶಾಸ್ತ್ರಿ