Advertisement

ಕುಡಿಯಿರಿ, ಕುಡಿಸಿರಿ; ಆರ್ಥಿಕತೆಯನ್ನು ಬೆಳೆಸಿರಿ…!ಇದು ಜಪಾನ್‌ ಸರಕಾರದ ಹೊಸ ಮಂತ್ರ

12:41 PM Aug 20, 2022 | Team Udayavani |

ಟೋಕಿಯೋ: ನಮ್ಮ ದೇಶದಲ್ಲಿ “ಹೆಂಡ- ಸಾರಾಯಿ ಸಹವಾಸ, ಹೆಂಡತಿ ಮಕ್ಕಳ ಉಪವಾಸ’ ಎಂಬ ಉದ್ಘೋಷಗಳನ್ನು ನೀವು ಸಾಕಷ್ಟು ಬಾರಿ ಕೇಳಿರಬಹುದು. ಆದರೆ, “ಕುಡಿಯಿರಿ, ಕುಡಿಸಿರಿ; ಆರ್ಥಿಕತೆಯನ್ನು ಬೆಳೆಸಿರಿ’ ಎಂದು ಹೇಳುವುದನ್ನು ಎಲ್ಲಾದರೂ ಕೇಳಿದ್ದೀರಾ?

Advertisement

ಜಪಾನ್‌ನಲ್ಲಿ ಈಗ ಇದೇ ಉದ್ಘೋಷ ಸದ್ದು ಮಾಡುತ್ತಿದೆ. ಸ್ವತಃ ಸರಕಾರವೇ ಮುಂದೆ ನಿಂತು “ಯುವಜನರನ್ನು ಮದ್ಯದಾಸರನ್ನಾಗಿ’ ಮಾಡುತ್ತಿದೆ !

ಅಚ್ಚರಿಯಾದರೂ ಇದು ಸತ್ಯ. ಹೆಚ್ಚು ಹೆಚ್ಚು ಆಲ್ಕೋಹಾಲ್‌ ಸೇವಿಸುವಂತೆ ಅಲ್ಲಿನ ಸರಕಾರ ಯುವಜನತೆಗೆ ಕರೆ ನೀಡಿದೆ. ಇದಕ್ಕೆ ಕಾರಣವೇನಿರಬಹುದು ಎಂದು ಯೋಚಿಸುತ್ತಿದ್ದೀರಾ? ಆರ್ಥಿಕ ಬಿಕ್ಕಟ್ಟು.

ಹೌದು, ಕೊರೊನಾ ಸೋಂಕಿನ ಅನಂತರ ಬಹುತೇಕ ಎಲ್ಲ ದೇಶಗಳೂ ಆರ್ಥಿಕ ಬಿಕ್ಕಟ್ಟಿ ನಿಂದ ನರಳುತ್ತಿವೆ. ಜಪಾನ್‌ ಕೂಡ ಇದೇ ರೀತಿಯ ಸಂಕಷ್ಟವನ್ನು ಎದುರಿಸುತ್ತಿದೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಹಳಿಗೆ ತರಬೇಕೆಂದರೆ ಸರಕಾರದ ಬೊಕ್ಕಸಕ್ಕೆ ಹಣ ಹರಿದುಬರಬೇಕು. ಎಲ್ಲ ದೇಶಗಳಲ್ಲೂ ಆದಾ ಯದ ದೊಡ್ಡ ಪಾಲುದಾರನೆಂದರೆ ಅಬಕಾರಿ ಇಲಾಖೆ. ಹೀಗಾಗಿ ಜನರು ಹೆಚ್ಚು ಮದ್ಯ ಸೇವಿಸಲು ಆರಂಭಿಸಿದರೆ ತನ್ನಿಂತಾನಾಗಿಯೇ ಅಬಕಾರಿ ಆದಾಯ ಹೆಚ್ಚುತ್ತದೆ ಎನ್ನುವುದು ಜಪಾನ್‌ ಸರಕಾರದ ಲೆಕ್ಕಾಚಾರ.

ತಗ್ಗಿದ ಮದ್ಯ ಸೇವನೆ: ಇಲ್ಲಿನ ತೆರಿಗೆ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶದ ಪ್ರಕಾರ, 1995ಕ್ಕೆ ಹೋಲಿಸಿದರೆ 2020 ರಲ್ಲಿ ಜಪಾನ್‌ ನಾಗರಿಕರ ಮದ್ಯ ಸೇವನೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಹಿಂದೆ ವಾರ್ಷಿಕವಾಗಿ ಸರಾಸರಿ 100 ಲೀಟರ್‌ಗಳಷ್ಟು ಮದ್ಯ ಸೇವನೆಯಾಗುತ್ತಿದ್ದರೆ, ಈಗ ಅದು 75 ಲೀಟರ್‌ಗಳಿಗೆ ಇಳಿದಿದೆ. ಮೂರನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್‌ನಲ್ಲಿ ಆಲ್ಕೋಹಾಲ್‌ನಿಂದ ಬರುತ್ತಿದ್ದ ತೆರಿಗೆ ಆದಾಯವೂ ಕುಸಿತವಾಗಿದೆ. ಮದ್ಯ ಮಾರಾಟದಿಂದ 2020ರಲ್ಲಿ ಸುಮಾರು 6,505 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಈ ಆದಾಯ ಇಷ್ಟೊಂದು ಇಳಿಕೆಯಾಗಿರು ವುದು ಕಳೆದ 31 ವರ್ಷಗಳಲ್ಲೇ ಇದೇ ಮೊದಲು.

Advertisement

ರಾಷ್ಟ್ರಮಟ್ಟದ ಸ್ಪರ್ಧೆ
ಹಿಂದಿನ ತಲೆಮಾರಿಗೆ ಹೋಲಿಸಿದರೆ ಇಂದಿನ ತಲೆಮಾರಿನ ಯುವಕರ “ಮದ್ಯ ಪ್ರೇಮ’ ಕಡಿಮೆಯಾಗಿದೆ. ಹೀಗಾಗಿ, ಜಪಾನ್‌ ಸರಕಾರ ಈಗ “ಸೇಕ್‌ ವಿವಾ’ ಎಂಬ ಅಭಿಯಾನ ಆರಂಭಿಸಿದೆ. ಜಪಾನ್‌ನ ಅಕ್ಕಿಯ ವೈನ್‌, ಶೋಚು, ವಿಸ್ಕಿ, ಬಿಯರ್‌ ಅಥವಾ ಇತರ ವೈನ್‌ಗಳನ್ನು ಕುಡಿಯುವಂತೆ ಯುವಜನತೆಗೆ ಸರಕಾರ ಕರೆ ನೀಡಿದೆ. ಜತೆಗೆ, ರಾಷ್ಟ್ರಮಟ್ಟದ ಸೇಕ್‌ ವಿವಾ ಸ್ಪರ್ಧೆಯನ್ನೂ ಆಯೋಜಿಸಿದ್ದು, ಯುವಜನಾಂಗ ಹೆಚ್ಚು ಹೆಚ್ಚು ಕುಡಿಯುವಂತೆ ಪ್ರೇರೇಪಿಸಲು ಐಡಿಯಾಗಳನ್ನು ಕೊಡಿ ಎಂದೂ ಕೇಳಿಕೊಂಡಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next