ನವದೆಹಲಿ: ಶನಿವಾರದಿಂದ (ಮಾರ್ಚ್ 19) ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಭಾರತದಲ್ಲಿ ಮುಂದಿನ ಐದು ವರ್ಷಗಳ ಕಾಲ ಸುಮಾರು 42 ಬಿಲಿಯನ್ ಡಾಲರ್ ನಷ್ಟು ಹೂಡಿಕೆ ಮಾಡುವುದಾಗಿ ಘೋಷಿಸುವ ನಿರೀಕ್ಷೆ ಇದ್ದಿರುವುದಾಗಿ ಎಎನ್ ಐ ವರದಿ ತಿಳಿಸಿದೆ.
ಇದನ್ನೂ ಓದಿ:ಟಿ20 ಮಾದರಿಯಲ್ಲಿ ನಡೆಯಲಿದೆ ಏಷ್ಯಾಕಪ್ 2022; ದಿನಾಂಕ-ಸ್ಥಳ ಪ್ರಕಟ
ಜಪಾನ್ ಮಾಧ್ಯಮಗಳ ವರದಿ ಪ್ರಕಾರ, ಕಿಶಿಡಾ ಅವರು ಭಾರತ-ಜಪಾನ್ ನ 14ನೇ ವಾರ್ಷಿಕ ಶೃಂಗದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆಗಿನ ಮಾತುಕತೆಯಲ್ಲಿ ಅಂದಾಜು 300 ಬಿಲಿಯನ್ ಯೆನ್ ಸಾಲದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ವರದಿ ಹೇಳಿದೆ.
ಕಾರ್ಬನ್ ಪ್ರಮಾಣದ ಇಳಿಕೆಗೆ ಸಂಬಂಧಿಸಿದಂತೆ ಇಂಧನ ಸಹಕಾರ ದಾಖಲೆಗೆ ಜಪಾನ್ ಪ್ರಧಾನಿ ಕಿಶಿಡೋ ಸಹಿ ಹಾಕುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ. ಕಳೆದ ವರ್ಷ ಗ್ಲಾಸ್ಕೋದಲ್ಲಿ ನಡೆದ ಹವಾಮಾನ ಶೃಂಗದಲ್ಲಿ ಕಿಶಿಡೋ ಮತ್ತು ಪ್ರಧಾನಿ ಮೋದಿ ಭೇಟಿಯಾಗಿದ್ದರು. ಇದೀಗ ಎರಡನೇ ಬಾರಿ ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಕಿಶಿಡಾ ಭೇಟಿಯಾಗುತ್ತಿರುವುದಾಗಿ ವರದಿ ತಿಳಿಸಿದೆ.
ಮಾರ್ಚ್ 19ರಿಂದ 21ರವರೆಗೆ ಜಪಾನ್ ಪ್ರಧಾನಿ ಪ್ರವಾಸದಲ್ಲಿದ್ದು, ಭಾರತ ಮತ್ತು ಕಾಂಬೋಡಿಯಾಕ್ಕೆ ಭೇಟಿ ನೀಡಲಿದ್ದಾರೆ. ಭಾರತಕ್ಕೆ ಭೇಟಿ ನೀಡಲಿರುವ ಕಿಶಿಡೋ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಜಪಾನ್ ಕ್ಯಾಬಿನೆಟ್ ನ ಮುಖ್ಯ ಕಾರ್ಯದರ್ಶಿ ಹಿರೋಕಾಝು ತಿಳಿಸಿದ್ದಾರೆ.