Advertisement

ಜಪಾನ್‌: ಇನ್ನೂ ಒಂದು ತಿಂಗಳು ವೈದ್ಯಕೀಯ ತುರ್ತು ಸ್ಥಿತಿ

03:34 PM May 02, 2020 | sudhir |

ಟೋಕಿಯೋ: ಜಪಾನ್‌ ಇನ್ನೂ ಒಂದು ತಿಂಗಳ ಕಾಲ ವೈದ್ಯಕೀಯ ತುರ್ತು ಸ್ಥಿತಿಯನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ಪ್ರಧಾನ ಮಂತ್ರಿ ಶಿಂಝೋ ಅಬೆ ಶುಕ್ರವಾರ ತಿಳಿಸಿದ್ದಾರೆ.

Advertisement

ಎ. 7ರಂದು ಅವರು ಜಪಾನ್‌ನ ಏಳು ಪ್ರದೇಶಗಳಲ್ಲಿ ಒಂದು ತಿಂಗಳ ಅವಧಿಯ ವೈದ್ಯಕೀಯ ತುರ್ತು ಸ್ಥಿತಿಯನ್ನು ಘೋಷಿಸಿದ್ದರು. ಬಳಿಕ ಅದನ್ನು ದೇಶಾದ್ಯಂತ ವಿಸ್ತರಿಸಲಾಗಿತ್ತು. ಮುಂದಿನ ವಾರ ಅಂತ್ಯಗೊಳ್ಳುವ ಅವಧಿಯನ್ನು ಅಬೆ ಅವರು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಿದ್ದಾರೆ. ಕೋವಿಡ್ ಸೋಂಕು ಹರಡುವುದನ್ನು ತಡೆಯಲು ನಿಯೋಜಿತರಾಗಿರುವ ಸಚಿವ ಯಸುತೋಶಿ ನಿಶಿಮುರಾ ಅವರಿಗೆ ತಮ್ಮ ಈ ಯೋಜನೆಯನ್ನು ವಿವರಿಸಿದ್ದಾರೆ.

ತಜ್ಞರ ಸಮಿತಿ ವರದಿ ನೀಡಿದ್ದು, ಈ ಆಧಾರದಲ್ಲಿ ನಾನು ಸಚಿವ ನಿಶಿಮುರಾ ಅವರಲ್ಲಿ ಈಗಿರುವ ಮಾದರಿಯಲ್ಲೇ ವೈದ್ಯಕೀಯ ತುರ್ತು ಸ್ಥಿತಿಯನ್ನು ಇನ್ನೊಂದು ತಿಂಗಳು ವಿಸ್ತರಿಸುವ ಕುರಿತು ಚರ್ಚಿಸಿದ್ದೇನೆ. ಮುಂದೆ ದೇಶದ ಅಗತ್ಯಗಳಿಗೆ ಅನುಸಾರವಾಗಿ ನೀತಿ- ನಿಯಮಾವಳಿಗಳನ್ನು ರೂಪಿಸಲು ಈ ವಿಸ್ತರಣೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಹರಡುವಿಕೆ ವ್ಯಾಪಕವಾಗಿ ಇಲ್ಲದಿದ್ದರೂ ಜಪಾನ್‌ ನಾಗರಿಕರೂ ತುರ್ತು ಸ್ಥಿತಿಯ ವಿಸ್ತರಣೆಯನ್ನು ನಿರೀಕ್ಷಿಸಿದ್ದರು. ಈವರೆಗೆ ದೇಶದಲ್ಲಿ 14,300 ಜನರು ಸೋಂಕು ಪೀಡಿತರಾಗಿದ್ದು, 432 ಮಂದಿ ಬಲಿಯಾಗಿದ್ದಾರೆ. ಶುಕ್ರವಾರವೂ 165 ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ.

ಈ ಮಧ್ಯೆಯೇ, ಕೆಲವು ತರಗತಿಗಳಿಗೆ ಶಾಲೆ ಆರಂಭಿಸುವ ಕುರಿತು ಸರಕಾರ ಯೋಚಿಸುತ್ತಿದೆ. ವಿದ್ಯಾ ಸಚಿವರು ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸುವ ಪ್ರಸ್ತಾವವನ್ನು ಮಂಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next