Advertisement

ಜನೋತ್ಸವ ರದ್ದು: ಸಿದ್ಧ ಪಡಿಸಿದ ಅಡುಗೆ ಬೇರೆಡೆ ವಿತರಣೆ

06:07 PM Jul 29, 2022 | Team Udayavani |

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆ, ಸರ್ಕಾರದ ಪ್ರಗತಿಯನ್ನು ಜನರಿಗೆ ತಿಳಿಸಲು ಗುರುವಾರ ಹಮ್ಮಿಕೊಂಡಿದ್ದ ಜನೋತ್ಸವ ಹಠಾತ್‌ ರದ್ದಾಗಿದ್ದು, ಸಮಾವೇಶಕ್ಕೆ ಆಗಮಿಸುವವರಿಗೆ ಮಾಡಲಾಗಿದ್ದ ಉಪಾಹಾರವನ್ನು ವಿವಿಧೆಡೆ ವಿತರಿಸುವ ಮೂಲಕ ಖಾಲಿ ಮಾಡಲಾಯಿತು.

Advertisement

ಬುಧವಾರ ರಾತ್ರಿಯವರೆಗೂ ಸಹ ಸಮಾವೇಶದ ಸಿದ್ಧತೆಗಳು ಭರದಿಂದಲೇ ಸಾಗಿದ್ದವು. ಸಮಾವೇಶದ ವೇದಿಕೆ ಬಳಿ ಸೇರಿದಂತೆ ರಸ್ತೆ ಮಾರ್ಗಗಳಲ್ಲಿ ಬಿಜೆಪಿಯ ಕಟೌಟ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಆದರೆ, ಮಂಗಳವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆ, ಬುಧವಾರ ತಡರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನೋತ್ಸವ ಸಮಾರಂಭವನ್ನು ರದ್ದು ಮಾಡಿರುವ ಕುರಿತು ಪ್ರಕಟಿಸಿದ್ದು, ಸಮಾವೇಶ ಸಿದ್ಧತೆಗಳಿಗಾಗಿ ವೆಚ್ಚ ಮಾಡಿದ ಕೋಟ್ಯಂತರ ರೂ. ನೀರಲ್ಲಿ ಹೋಮ ಮಾಡಿದಂತಾಗಿದೆ.

ಬಾಣಸಿಗರಿಂದ ಅಡುಗೆಗೆ ಸಿದ್ಧತೆ: ಗುರುವಾರ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟಕ್ಕೆ ಬಾಣಸಿಗರು ಎಲ್ಲಾ ಸಿದ್ಧತೆ ಮಾಡಿಕೊಂಡು, ಸುಮಾರು 25 ಸಾವಿರ ಜನರಿಗೆ ಬೆಳಗಿನ ಉಪಾಹಾರ ತಯಾರಿಸಿದ್ದರು. ಮಧ್ಯಾಹ್ನ 1 ಲಕ್ಷ ಜನರಿಗೆ ಊಟದ ಅಡುಗೆಗಾಗಿ ತರಕಾರಿಗಳನ್ನು ಹಂಚಿಕೊಂಡು ದಿನಸಿ ಸಾಮಗ್ರಿಗಳನ್ನು ಸಿದ್ಧ ಮಾಡಿಕೊಂಡಿದ್ದರು. ಸುಮಾರು ನೂರು ಜನ ಬಾಣಸಿಗರಿಂದ ಅಡುಗೆಗೆ ಸಿದ್ಧತೆ ನಡೆದಿತ್ತು. ಕಾರ್ಯಕ್ರಮ ರದ್ದಾದ ಹಿನ್ನೆಲೆ ಮಧ್ಯಾಹ್ನದ
ಊಟವನ್ನು ತಯಾರಿಸಲಿಲ್ಲ.

ಮಾಡಿದ್ದ ಅಡುಗೆ ವಿವಿಧ ಆಶ್ರಮಗಳಿಗೆ: ಬೆಳಗ್ಗೆ 25
ಸಾವಿರ ಜನ ಕಾರ್ಯಕರ್ತರಿಗೆ ಪಲಾವ್‌ ಸಿದ್ಧಪಡಿಸಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಪಲಾವ್‌, ಮೊಸರನ್ನ, ಬಾದುಷ ಮಾಡಲು ಸಿದ್ಧತೆ ನಡೆಸಿ, 1 ಲಕ್ಷ 15 ಸಾವಿರ ಬಾದುಷ ರೆಡಿಯಾಗಿತ್ತು. ಬೆಳಗ್ಗೆ ಸಮಾವೇಶ ರದ್ದಾಗಿರುವ ಕುರಿತು ಸುದ್ದಿ ಬರುತ್ತಿದ್ದಂತೆಯೇ ಮಾಡಿದ್ದ ಅಡುಗೆಯನ್ನು ವಿವಿಧ ಆಶ್ರಮಗಳಿಗೆ ಹಾಗೂ ವಸತಿ ಶಾಲೆಗಳಿಗೆ ನೀಡಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು.

ಹೆಚ್ಚಿಟ್ಟಿರುವ ತರಕಾರಿ ಘಾಟಿ ಗೋಶಾಲೆಗೆ: ಎರಡು ಟನ್‌ ಹೆಚ್ಚಿಟ್ಟಿರುವ ತರಕಾರಿಗಳನ್ನು ಘಾಟಿ ಗೋಶಾಲೆಗೆ ಹಾಗೂ ವಿವಿಧೆಡೆ ವಿತರಿಸಲಾಯಿತು. ರಾತ್ರಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರಿಂದ ಬೆಳಗ್ಗೆ ತಡವಾಗಿ, ಸಾರ್ವಜನಿಕರಿಗೆ ತಿಳಿದು ಸಮಾವೇಶ ರದ್ದಾಗಿರುವ ಬಗ್ಗೆಯೇ ಎಲ್ಲೆಡೆ ಚರ್ಚೆಗಳು ನಡೆಯುತ್ತಿದ್ದವು.

Advertisement

ರಸ್ತೆ ಬದಿಯಲ್ಲಿದ್ದ ಫ್ಲೆಕ್ಸ್‌, ಬಾವುಟ ತೆರವು ಕಳೆದ 10 ದಿನಗಳಿಂದ ಸಿದ್ಧಪಡಿಸಲಾಗಿದ್ದ ಬೃಹತ್‌ ವೇದಿಕೆಯನ್ನು ಗುರುವಾರ ಬೆಳಗಿನಿಂದಲೇ ತೆರವು ಮಾಡಿ, ಸಾಮಗ್ರಿಗಳನ್ನು ವಾಹನಗಳಿಗೆ ತುಂಬಲಾಯಿತು. ರಸ್ತೆ ಬದಿಗಳಲ್ಲಿ ಅಳವಡಿಸಿದ್ದ ಬಿಜೆಪಿಯ ಫ್ಲೆಕ್ಸ್‌ಗಳು, ಬಂಟಿಂಗ್ಸ್‌ ಹಾಗೂ ಬಾವುಟಗಳನ್ನು ಸಹ ತೆರವು ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next