ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಬಿಬಿಎಂಪಿ ವಾರ್ಡ್ ಮಟ್ಟದ ಜನಸ್ಪಂದನ ಸಭೆಯಲ್ಲಿ ವಾರ್ಡ್ ನಾಗರಿಕರು ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ತಮ್ಮ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು.
ಈ ವೇಳೆ ಹೆಮ್ಮಿಗೆಪುರ ವಾರ್ಡ್‌ನ ತಲಘಟ್ಟಪುರ, ಬಿಸಿಎಂಸಿ ಬಡಾವಣೆ, ಜುಡಿಷೀಯಲ್ ಲೇಔಟ್, ಜೋತಿ ನಗರ ಕಾನ್‌ಕಾರ್ಡ್ ಬಡಾವಣೆ, ಬಾಲಾಜಿ ಬಡಾವಣೆ, ವಾಜರಹಳ್ಳಿ, ಹೂಸಹಳ್ಳಿ ನಿವಾಸಿಗಳು ಕಾವೇರಿ ನೀರು ಪೂರೈಕೆ, ಬೀದಿ ದೀಪದ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ 17 ಕಿ.ಮೀ ಉದ್ದದ ಯುಜಿಡಿ ಮತ್ತು ಕಾವೇರಿ ನೀರು ಸರಬರಾಜಿಗೆ ಪೈಪ್ ಅಳವಡಿಸುವ ಕಾಮಗಾರಿ ಬಹುತೇಕ ಮುಗಿದಿದ್ದು, ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ.
ವಾರ್ಡ್‌ನ ಬಿಡಿಎ ಹಾಗೂ ಖಾಸಗಿ ರೆವೆನ್ಯೂ ಬಡಾವಣೆಗಳಲ್ಲಿನ ರಸ್ತೆ, ಯುಜಿಡಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಸಂಭಂದಿಸಿದ ಅದಿಕಾರಿಗಳಿಗೆ ಸೂಚಿಸಿದ್ದೇನೆ. ಬೆಸ್ಕಾಂ ವಿರುದ್ಧ ಅತಿ ಹೆಚ್ಚು ದೂರುಗಳು ಬಂದಿದ್ದು, ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ನೇರವಾಗಿ ತರಾಟಗೆ ತೆಗೆದುಕೊಂಡರು.
ಹೇರೋಹಳ್ಳಿ ಮತ್ತು ಕೆಂಗೇರಿಯಲ್ಲಿ ಕಮಾಂಡೋ ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ರಸ್ತೆಗೂ ಸಿಸಿ ಕ್ಯಾಮೆರಗಳನ್ನು 5 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಅಪರಾಧ ಪ್ರಕರಣಗಳ ನಿಯಂತ್ರಣ ಸಾಧ್ಯವಾಗಲಿದೆ.
ಈಗಾಗಲೇ ಕೆಂಗೇರಿಯಲ್ಲಿ ಸುಸಜ್ಜಿತವಾದ ಡಯಾಲಿಸಿಸ್ ಕೇಂದ್ರ ನಿರ್ಮಿಸಲಾಗುತ್ತಿದೆ. ಇದರೊಂದಿಗೆ, ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಜಿಮ್ ಹಾಗೂ ಯೋಗ ಕೇಂದ್ರ ನಿರ್ಮಿಸಲಾಗುವುದು ಎಂದು ಸೋಮಶೇಖರ್ ಹೇಳಿದರು.
ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ, ಬಿಬಿಎಂಪಿ ವಲಯ ಉಪ ಆಯುಕ್ತ ಜಗದೀಶ್, ಇಇ ಲೋಕೇಶ್, ಎಆರ್‌ಒ ದಯಾನಂದ್, ಕೆಂಗೇರಿ ಠಾಣಾಧಿಕಾರಿ ರಾಮಪ್ಪ ಗುತ್ತೆರ, ತಲಘಟ್ಟಪುರ ಠಾಣಾಧಿಕಾರಿ ವಿಜಯ್‌ಕುಮಾರ್, ಟ್ರಾಫಿಕ್ ವೃತ್ತ ನಿರೀಕ್ಷಕ ಜಯರಾಮ್, ಜಲಮಂಡಳಿ, ಬೆಸ್ಕಾಂ, ಬಿಡಿಎ ಅಧಿಕಾರಿಗಳು, ನಾಗರಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.