ಗದಗ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ನಗರದ ವೀರೇಶ್ವರ ಪುಣ್ಯಾಶ್ರಮ ಹಾಗೂ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಡಿತ ಪಂಚಾಕ್ಷರಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಕರ್ತೃ ಗದ್ದುಗೆ ದರ್ಶನ ಪಡೆದರು. ಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದರು.
ನಂತರ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದರು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕೆಲ ನಿಮಿಷಗಳ ಕಾಲ ರಾಜಕೀಯ ಜೀವನದ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಶ್ರೀಗಳು ಗಾಲಿ ಜನಾರ್ದನ ರೆಡ್ಡಿ ಅವರನ್ನು ಸನ್ಮಾನಿಸಿದರು.
ತದನಂತರ ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಡಿತ ಪುಟ್ಟರಾಜ ಗವಾಯಿಗಳು ಹಾಗೂ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರನ್ನು ಕಣ್ಣಾರೆ ಕಂಡು, ಅವರ ಪಾದಸ್ಪರ್ಶದೊಂದಿಗೆ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ನನ್ನ ಹಾಗೂ ಶ್ರೀರಾಮುಲು ಅವರ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು.
Related Articles
ಶ್ರೀರಾಮುಲು ಗದಗ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧಿ, ಕಿತ್ತೂರು ಚೆನ್ನಮ್ಮ, ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮೂರ್ತಿಗಳು ನಿರ್ಮಾಣ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತೋಂಟದ ಶ್ರೀಗಳು ಭೀಷ್ಮ ಕೆರೆ ಆವರಣದಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಿಸಲು ಸಲಹೆ ನೀಡಿದಾಗ ಅತ್ಯಂತ ಸಂತೋಷದಿಂದ ಬಸವೇಶ್ವರ ಪುತ್ಥಳಿ ನಿರ್ಮಿಸಲಾಯಿತು. ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ಗದಗ ನಗರದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು ಎಂದರು.
ಇದನ್ನೂ ಓದಿ:ವಿರೋಧ ಪಕ್ಷಗಳ ನಾಯಕರ ಮನೆ ಮೇಲೆ ತನಿಖಾ ಸಂಸ್ಥೆಗಳ ದಾಳಿ ಸಾಮಾನ್ಯವಾಗಿದೆ: ಲಕ್ಷ್ಮಿ ಹೆಬ್ಬಾಳ್ಕರ್
ರಾಜಕೀಯ ಜೀವನದಲ್ಲಿ, ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ನಾನು ತೊಡಗಡಿಸಿಕೊಳ್ಳಲು ನಿಶ್ಚಯ ಮಾಡಿಕೊಂಡು ಮಠಾಧೀಶರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದೇನೆ. ಬಳ್ಳಾರಿ ನಂತರ ಅತೀ ಹೆಚ್ಚು ಅನುಬಂಧವಿರುವುದು ಗದಗ ನಗರದಲ್ಲಿ. ಇಲ್ಲಿ ಬಂದಾಗ ಬಳ್ಳಾರಿಯಲ್ಲೇ ಇದ್ದೀನಿ ಎಂಬ ತೃಪ್ತಿ ಹಾಗೂ ಸಂತೋಷ ಸಿಗುತ್ತದೆ ಎಂದರು.
ಕಳೆದ 12 ವರ್ಷಗಳ ಕಾಲ ವನವಾಸದ ಜೀವನ ಅನುಭವಿಸಿದ್ದೇನೆ. ಸಾರ್ವಜನಿಕ ಜೀವನದಲ್ಲಿ ತೋಡಗಿಕೊಳ್ಳಲು ತೀರ್ಮಾನ ಮಾಡಿದ್ದು, ಜನರ ಪ್ರೀತಿ ಎಲ್ಲಿ ಸಿಗುತ್ತದೆ ಅಲ್ಲಿ ಹೆಚ್ಚು ಓಡಾಟ ಮಾಡುತ್ತಿದ್ದೇನೆ. ಕಳೆದ ಕೆಲ ದಿನಗಳಿಂದ ಎರಡನೇ ಬಾರಿ ಗದಗ ನಗರಕ್ಕೆ ಭೇಟಿ ನೀಡಿದ್ದೇನೆ. ಮುಂದಿನ ಒಂದು ವರ್ಷದಲ್ಲಿ 200 ಬಾರಿಯೂ ಭೇಟಿ ನೀಡುವುದನ್ನು ನೀವು ನೋಡಬಹುದು ಎಂದರು.
ಮುಂಬರುವ ಚುನಾವಣೆಯಲ್ಲಿ ಗದಗದಿಂದ ಸ್ಪರ್ಧಿಸುವ ಯೋಜನೆ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಜನಾರ್ಧನ ರೆಡ್ಡಿ ಅವರು, ಡಿ. 25ರಂದು ಬೆಂಗಳೂರಿನಲ್ಲಿ ಮಾಧ್ಯಮದವರ ಮೂಲಕ ಕರ್ನಾಕಟದ ಜನತೆಗೆ ನನ್ನ ಮನದಾಳದ ಮಾತುಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.