Advertisement

ಜನಾರ್ದನ ರೆಡ್ಡಿ ಆಪ್ತ ಶ್ರೀನಿವಾಸ ರೆಡ್ಡಿ ಬಂಧನ

06:30 AM Oct 04, 2018 | Team Udayavani |

ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಒಡೆತನದ ಒಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಬಿ.ವಿ.ಶ್ರೀನಿವಾಸ ರೆಡ್ಡಿ ಅವರನ್ನು ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಬುಧವಾರ ಬಂಧಿಸಿದ್ದಾರೆ.

Advertisement

ಜಿಲ್ಲೆಯ ಸಂಡೂರು ತಾಲೂಕು ಸಿದ್ದಾಪುರ ಗ್ರಾಮದ ಬಳಿಯಿರುವ “ಶೇಕ್‌ಸಾಬ್‌’ ಹೆಸರಿನ ಗಣಿ ಪ್ರದೇಶದಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಬಿ.ವಿ.ಶ್ರೀನಿವಾಸರೆಡ್ಡಿ ಅವರನ್ನು ವಿಚಾರಣೆಗೆ ಕರೆದಿದ್ದ ಎಸ್‌ಐಟಿ ಅಧಿಕಾರಿಗಳು, ವಿಚಾರಣೆ ಬಳಿಕ ಬಂಧಿಸಿದ್ದಾರೆ. ಅಕ್ರಮವಾಗಿ ಅದಿರು ಸಾಗಾಣಿಕೆಗೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ಎಸ್‌ಐಟಿ ಅಧಿಕಾರಿಗಳು ಬಿ.ವಿ.ಶ್ರೀನಿವಾಸರೆಡ್ಡಿ ಅವ‌ರನ್ನು ವಿಚಾರಣೆಗೆಂದು ಕರೆದು, ಬಳಿಕ ಬಂಧಿಸಿದ್ದಾರೆ. ಅ.6ರವರೆಗೆ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಜಿಲ್ಲೆಯ ಸಂಡೂರು ತಾಲೂಕು ಎನ್‌ಇಬಿ ರೇಂಜ್‌ನಲ್ಲಿ ಶೇಕ್‌ಸಾಬ್‌ ಎನ್ನುವವರಿಗೆ ಸೇರಿದ್ದ ಶೇಕ್‌ಸಾಬ್‌ ಗಣಿಗುತ್ತಿಗೆಯಲ್ಲಿ ಎಂಎಂಆರ್‌ಡಿ (ಮೈನ್ಸ್‌ ಅಂಡ್‌ ಮಿನರಲ್ಸ್‌ ರೆಗ್ಯುಲೇಷನ್‌ ಆಕ್ಟ್) ಪ್ರಕಾರ ಉಪಗುತ್ತಿಗೆ ನೀಡಲು ಬರುವುದಿಲ್ಲ. ಗಣಿಪ್ರದೇಶದ ಮೂಲ ಗುತ್ತಿಗೆದಾರರಾಗಿದ್ದ ಶೇಕ್‌ಸಾಬ್‌ ಮೇಲೆ ಶ್ರೀನಿವಾಸರೆಡ್ಡಿ ಮತ್ತು ಇತರರು ಒತ್ತಡ ಹೇರಿ ಜಿಪಿಎ ಪಡೆದು, ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಪ್ರದೇಶದಲ್ಲಿ 2009ರ ಜುಲೈನಿಂದ ಡಿಸೆಂಬರ್‌ವರೆಗೆ 1.48 ಲಕ್ಷ ಟನ್‌ಗೂ ಹೆಚ್ಚು ಅದಿರನ್ನು ಅಕ್ರಮವಾಗಿ ಸಾಗಿಸಿ, ಸರಕಾರದ ಬೊಕ್ಕಸಕ್ಕೆ ಕೊಟ್ಯಂತರ ರೂ.ನಷ್ಟ ಉಂಟು ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next