ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಬೆದರಿಕೆಯೊಡ್ಡಿ, ಬ್ಲ್ಯಾಕ್‌ಮೆಲ್ ಮಾಡಿ ಬಿಜೆಪಿಯ ಕೆಲವು ಪಾಲಿಕೆ ಸದಸ್ಯರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳುತ್ತಿದ್ದಾರೆ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಜಿ. ಸೋಮಶೇಖರ ರೆಡ್ಡಿ ಅವರು ಸಹೋದರನ ವಿರುದ್ಧವೇ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಬೇರೆಯವರ ರೀತಿಯಲ್ಲಿ ಬ್ಲ್ಯಾಕ್‌ಮೆಲ್ ರಾಜಕೀಯ ಮಾಡುವುದು ಗೊತ್ತಿಲ್ಲ. ಜನಾರ್ದನ ರೆಡ್ಡಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಹಾಗೂ ಪಾಲಿಕೆ ಸದಸ್ಯರನ್ನು ಬೆದರಿಕೆ ಹಾಕಿ ಕರೆದೊಯ್ಯುತ್ತಿದ್ದಾರೆ. ಬಿಜೆಪಿಯವರಿಗೆ ಹಣ ಅಮಿಷವೊಡ್ಡುತ್ತಿದ್ದಾರೆ. ವಿರೋಧಿಸಿದವರ ಆಸ್ತಿಯನ್ನು ಕಸಿದುಕೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಅಡ್ಡಾಡುವವರು ರಸ್ತೆ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ. ಹಣ ಇದ್ದವರು ಅಬ್ಬರ ಮಾಡುತ್ತಿದ್ದಾರೆ. ನಾವು ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ನೀಡಲು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.