Advertisement

ಜನಾರ್ದನರೆಡ್ಡಿ ಹೇಳಿಕೆ ಜಟಾಪಟಿ

06:00 AM Nov 16, 2018 | Team Udayavani |

ಬೆಂಗಳೂರು/ಬೀದರ: ““ಹಾವಿನ ದ್ವೇಷದಂತೆ ಹನ್ನೆರಡು ವರ್ಷಗಳ ನಂತರವೂ ನನ್ನ ಮೇಲೆ ಸೇಡು ತೀರಿಸಿಕೊಳ್ಳಲಾಗಿದೆ” ಎಂಬ ಮಾಜಿ ಸಚಿವ ಜನಾರ್ದನರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನನಗೆ ಸೇಡಿನ ರಾಜಕೀಯ ಮಾಡಿಲ್ಲ ಅದರ ಅಗತ್ಯವೂ ನನಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

ಬೀದರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ನಾನು ಸೇಡಿನ ರಾಜಕೀಯ ಮಾಡಿಲ್ಲ. ಈ ಆರೋಪ ಮಾಡಿದ ಜನಾರ್ದನ ರೆಡ್ಡಿಗೆ ಉತ್ತರ ಕೊಡಬೇಕಾದ ಅಗತ್ಯವೂ ನನಗಿಲ್ಲ ಎಂದು ಹೇಳಿದರು.

ಕಳವು ಮಾಡಿದವನು ಬಂದು, ನಾನು ಕದ್ದ ವಸ್ತುಗಳನ್ನು ವಾಪಸ್‌ ಮಾಡುವೆ, ನನಗೆ ಕಾನೂನು ರಕ್ಷಣೆ ಕೊಡಿ ಎಂದು ಕೋರಿದರೆ ರಕ್ಷಣೆ ಕೊಡಲಾಗುತ್ತದೆಯೇ? ಜನಸಾಮಾನ್ಯರಿಗೆ ವಂಚನೆ ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವವರು ಸ್ವತಃ 18 ಕೋಟಿ ರೂ. ಪಾವತಿಸುವುದಾಗಿ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ್ದಾರೆ. ಅಫಿಡವಿಟ್‌ ಅರ್ಥ ಏನು? ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಂತಲ್ಲವೆ ಎಂದು ಪ್ರಶ್ನಿಸಿದರು.

ಯಾರು ಕಳ್ಳರು ಎಂಬುದು ಎಲ್ಲರಿಗೂ ಗೊತ್ತಿದೆ. ಜನಾರ್ದನ ರೆಡ್ಡಿ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಲೇಬೇಡಿ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಅನುಭವಿಸಬೇಕು. ವಂಚನೆ ಪ್ರಕರಣದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಮಾಣಿಕ ಅ ಧಿಕಾರಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಶರವಣ ಆಕ್ರೋಶ:
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುರಿತು ಮಾಜಿ ಸಚಿವ ಜನಾರ್ದನರೆಡ್ಡಿ ಹೇಳಿಕೆ ಖಂಡನೀಯ ಎಂದು ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕುಮಾರಸ್ವಾಮಿ ಉತ್ತಮ ಆಡಳಿತ ನೀಡುತ್ತಿರುವುದನ್ನು ಸಹಿಸದೆ ಜನಾರ್ದನ ರೆಡ್ಡಿ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಅವರು ನಾಲ್ಕು ವರ್ಷ ಜೈಲಿನಲ್ಲಿ ಇದ್ದಿದ್ದು ಜನರಿಗೆ ಗೊತ್ತಿರುವ ಸಂಗತಿ. ರಾಜ್ಯದ ಸಂಪತ್ತು ಲೂಟಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ರೆಡ್ಡಿಯವರಿಗೆ ಅವರು ಮಾಡಿದ ತಪ್ಪುಗಳಿಗೆ ತಿರುಗುಬಾಣ ಆಗಿದೆ. ಹೀಗಾಗಿ, ಹಾವಿನ ದ್ವೇಷ ಎಂದೆಲ್ಲಾ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಜನಾರ್ದನರೆಡ್ಡಿಯವರು ಬಾಯಿಗೆ ಬಂದಂತೆ ಮಾತನಾಡುವ ಮುಲಕ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಶ್ರೀರಾಮುಲು-ಜನಾರ್ದನರೆಡ್ಡಿ ಅವರೇ ತೋಡಿಕೊಂಡಿರುವ ಬಾವಿಗೆ ಬಿದ್ದಿದ್ದಾರೆೆ. ಇದರಲ್ಲಿ ಬೇರೆಯವರ ಪಾತ್ರ ಬೇಕಿಲ್ಲ. ಜನಾರ್ದನರೆಡ್ಡಿ ನಾಲ್ಕು ವರ್ಷ ಜೈಲಿನಲ್ಲಿದ್ದು, ಸಾಕಷ್ಟು ಪುಸ್ತಕ ಓದಿಕೊಂಡಿದ್ದಾರೆ. ರಾಮಾಯಣ, ಮಹಾಭಾರತ ಒದುತ್ತಿದ್ದರು ಎಂದು ಕೇಳಲ್ಪಟ್ಟಿದೆ. ಆದರೆ, ಅದೆಲ್ಲಾ ಓದಿದ್ದು ಇದಕ್ಕೇನಾ ಎಂದು ಲೇವಡಿ ಮಾಡಿದರು.

ಶ್ರೀರಾಮುಲು ಭೇಟಿ:
ಜಾಮೀನಿನ ಮೇಲೆ ಬಿಡುಗಡೆಯಾಗಿ ಪಾರಿಜಾತ ನಿವಾಸದಲ್ಲಿ ಗುರುವಾರ ವಿಶ್ರಾಂತಿ ಪಡೆಯುತ್ತಿದ್ದ ಜನಾರ್ದನ ರೆಡ್ಡಿ ಅವರನ್ನು ಶಾಸಕ ಶ್ರೀರಾಮುಲು ಭೇಟಿ ಮಾಡಿದರು. ನಂತರ ಇಬ್ಬರೂ ಒಂದೇ ಕಾರಿನಲ್ಲಿ ಶ್ರೀರಾಮುಲು ಅವರ ನಿವಾಸಕ್ಕೆ ತೆರಳಿ ಕೆಲಕಾಲ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಪರ ವಕೀಲರು ಉಪಸ್ಥಿತರಿದ್ದರು. ಭೇಟಿ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಶ್ರೀರಾಮುಲು, ಜನಾರ್ದನರೆಡ್ಡಿ ಅವರು ನನ್ನ ಸ್ನೇಹಿತರು. ಅವರನ್ನು ನೋಡಲು ಬಂದಿದ್ದೇನೆ. ಅವರ ವಿರುದ್ಧದ ಆರೋಪ ಷಡ್ಯಂತ್ರ, ಅವರು ಸಹ ಅದನ್ನೇ ಹೇಳಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ನಾವು ಕಾನೂನಿಗೆ ತಲೆಬಗ್ಗುತ್ತೇವೆ ಎಂದು ಹೇಳಿದರು. ಜನಾರ್ದನರೆಡ್ಡಿ ನಿವಾಸಕ್ಕೆ ಅವರನ್ನು ಕಾಣಲು ಬಂದಿದ್ದ ಬೆಂಬಲಿಗರಿಗಾಗಿ ಔತಣಕೂಟ ಆಯೋಜಿಸಲಾಗಿತ್ತು.

ದೊಡ್ಡವರ ಬಗ್ಗೆ ಮಾತಾಡಲ್ಲ: ಡಿಕೆಶಿ
ಜನಾರ್ದನರೆಡ್ಡಿ ಆಡಿರುವ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿ, “”ಅವರು ದೊಡ್ಡವರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ಮಾತುಗಳಿಗೂ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಸಚಿವ ಡಿಕೆ ಶಿವ ಕು ಮಾರ್‌ ಕೈ ಮುಗಿದರು.

“”ಸರ್ಕಾರದ ಷಡ್ಯಂತ್ರದ ಆರೋಪ ಮಾಡಿದ್ದಾರಲ್ಲಾ ಎಂದಾಗ, ಬಿಗ್‌ ಪೀಪಲ್‌, ಬಿಗ್‌ ಟಾಕ್ಸ್‌, ಬಿಗ್‌ ವರ್ಡ್ಸ್‌, ಬಿಗ್‌ ಸೈಂಥ್ಸ್. ಮಲ್ಟಿ ಪೀಪಲ್‌ ಕ್ಯಾನ್‌ ಸ್ಪೀಕ್‌ ಎನಿಥಿಂಗ್‌. ಯಾರು ಏನು ಬೇಕಾದ್ರೂ ಮಾಡಿಕೊಳ್ಳಬಹುದು. ಅವರು ಏನು ಕೊಟ್ಟರೂ ಪ್ರಸಾದ ಅಂತ ಸ್ವೀಕರಿಸುತ್ತೇನೆ. ಅವರಿಗೆ ಆಲ್‌ ದಿ ಬೆಸ್ಟ್‌. ನಾನು ಯಾವುದಕ್ಕೂ ಉತ್ತರಿಸುವುದಿಲ್ಲ. ನನಗೆ ನನ್ನ ಕೆಲಸ ತುಂಬಾ ಇದೆ. ಯಾರ ತಂಟೆಗೂ ಹೋಗುತ್ತಿಲ್ಲ. ಉಪ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಮತ್ತಿತರ ನಾಯಕರನ್ನು ಅಣ್ಣಾ, ಅಕ್ಕಾ, ಅವ್ವಾ ಎಂದು ಮಾತನಾಡಿ ಬಂದಿದ್ದೇನೆ” ಎಂದು ಸುಮ್ಮನಾದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್‌ ವ್ಯವಸ್ಥೆಯಲ್ಲಿ ರಾಜಕೀಯ ಶಕ್ತಿಗಳ ಹಸ್ತಕ್ಷೇಪವೇ ಇದಕ್ಕೆ ಕಾರಣ. ಇದಕ್ಕೆ ಜನಾರ್ದನರೆಡ್ಡಿ ಅವರ ಬಂಧನ ತಾಜಾ ಉದಾಹರಣೆ. ರಾಜಕೀಯ ಸೇಡು ತೀರಿಸಿಕೊಳ್ಳಲು ಎಸಿಬಿ ಮತ್ತು ಇತರೆ ಪೊಲೀಸ್‌ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.
– ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಳ್ಳಾರಿ ಜನರು ಯಾರು ರಾಕ್ಷಸರು ಯಾರು ಪುಣ್ಯಕೋಟಿ ಎಂದು ಉತ್ತರ ನೀಡಿದ್ದಾರೆ. ಈ ಬಗ್ಗೆ ನಾವು ಹೊಸದಾಗಿ ಹೇಳುವ ಅಗತ್ಯವಿಲ್ಲ.
 - ಯು.ಟಿ.ಖಾದರ್‌, ನಗರಾಭಿವೃದ್ಧಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next