Advertisement

ಜನಾರ್ದನ ರೆಡ್ಡಿ ಆಸ್ತಿ ಜಪ್ತಿ: ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌

09:09 PM Jan 10, 2023 | Team Udayavani |

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತವರ ಕುಟುಂಬಕ್ಕೆ ಸೇರಿದ ಹೆಚ್ಚುವರಿ ಆಸ್ತಿಗಳನ್ನು ಜಪ್ತಿ ಮಾಡುವ ಸಂಬಂಧ ಸಿಬಿಐ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸಲು ಸರ್ಕಾರ ಕಾಲಾವಕಾಶ ಕೋರಿದೆ.

Advertisement

ಸಿಬಿಐ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಆಸ್ತಿ ಜಪ್ತಿಗೆ ಅನುಮತಿ ಕೋರಿ ಸಿಬಿಐ ಅರ್ಜಿ ಸಲ್ಲಿಸಿ 5 ತಿಂಗಳಾದರೂ ಮನವಿ ಪರಿಗಣಿಸದಿರಲು ಕಾರಣವೇನು? ನಿರ್ಧಾರ ಕೈಗೊಳ್ಳದೇ ಇರುವುದು ಸರ್ಕಾರದ ದೃಷ್ಟಿಯಲ್ಲಿ ಒಂದು ಕ್ರಮವಿರಬಹುದು. ಆದರೆ, ಅದನ್ನು ನ್ಯಾಯಾಲಯ ಒಪ್ಪುವುದಿಲ್ಲ. ಆರೋಪಿ ಪ್ರಭಾವಿ ವ್ಯಕ್ತಿ ಎಂಬ ಮಾತ್ರಕ್ಕೆ ವಿಳಂಬ ಸರಿಯಲ್ಲ ಎಂದು ನ್ಯಾಯಪೀಠ ಹೇಳಿತು.

ಅದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ಸರ್ಕಾರದ ಮಟ್ಟದಲ್ಲಿ ಯಾವ ಕಾರಣಕ್ಕೆ ವಿಳಂಬವಾಗಿದೆ ಎಂಬ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯಿಸಲಾಗುವುದು, ಅದಕ್ಕಾಗಿ ಕಾಲಾವಕಾಶಬೇಕೆಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಜ.12ಕ್ಕೆ ಮುಂದೂಡಿತು.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಜನಾರ್ದನ ರೆಡ್ಡಿ ಗಳಿಸಿರುವ ಹೆಚ್ಚುವರಿ ಆಸ್ತಿಗಳನ್ನು ಜಪ್ತಿ ಮಾಡಲು ವಿಶೇಷ ನ್ಯಾಯಾಲಯದ ಮೊರೆ ಹೋಗಲು ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ 2022ರ ಆಗಸ್ಟ್‌ 30ರಂದು ಮನವಿ ಸಲ್ಲಿಸಲಾಗಿದೆ.

Advertisement

ತಮ್ಮ ಮತ್ತು ಕುಟುಂಬ ಸದಸ್ಯರಿಗೆ ಸೇರಿದ ಕರ್ನೂಲ್‌, ಹೈದರಾಬಾದ್‌ ಮತ್ತು ರಂಗಾ ರೆಡ್ಡಿ ಜಿಲ್ಲೆಗಳಲ್ಲಿ ಗುರುತಿಸಲಾಗಿರುವ ಸುಮಾರು 19.14 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗಳನ್ನು ಮಾರಾಟ ಮಾಡಲು ಜನಾರ್ದನ ರೆಡ್ಡಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.

ಈ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಕ್ರಮಕೈಗೊಳ್ಳಲು ವಿಫ‌ಲವಾಗಿದೆ. ಜನಾರ್ದನ ರೆಡ್ಡಿ ಅವರು ಅಕ್ರಮವಾಗಿ ಆಸ್ತಿ ಮಾರಾಟ ಮಾಡಲು ಮುಂದಾಗುತ್ತಿದ್ದು, ಅವುಗಳ ನೋಂದಣಿ ಮಾಡದಂತೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ರಿಜಿಸ್ಟ್ರಾರ್‌ ಅವರಿಗೆ ಮನವಿ ಮಾಡಲಾಗಿದೆ ಎಂದು ಸಿಬಿಐ ಅರ್ಜಿಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next