ಬಂಟ್ವಾಳ: ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಶ್ಲಾಘಿಸಿದ್ದಾರೆ.
ಶನಿವಾರ ಬಂಟ್ವಾಳದ ನಿವಾಸದಿಂದ ಕರೆ ಮಾಡಿ ಮಾತನಾಡಿದ ಅವರು, ರಾಜ್ಯ ಸರಕಾರ ಆಡಳಿತಕ್ಕೆ ಬಂದ ಆರಂಭದಲ್ಲೇ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಉತ್ತಮ ಕಾರ್ಯ ಮಾಡಿದೆ. ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಶ್ರಮಿಸಿದ ನಿಮಗೆ ಅಭಿನಂದನೆಗಳು. ಇನ್ನಷ್ಟು ಉತ್ತಮ ಜನಪರ ಕಾರ್ಯಗಳನ್ನು ಮಾಡಲು ಕುದ್ರೋಳಿ ಶ್ರೀ ಗೋಕರ್ಣನಾಥ ಅನುಗ್ರಹಿಸಲಿ ಎಂದು ಹಾರೈಸಿದರು.
ಕರೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಮುಂದಿನ ದಿನಗಳಲ್ಲಿ ಮಂಗಳೂರಿಗೆ ಬಂದಾಗ ಭೇಟಿಯಾಗುವುದಾಗಿ ತಿಳಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪೂಜಾರಿ ಅವರು, ಕಾಂಗ್ರೆಸ್ ಸರಕಾರ ಪ್ರತೀ ಬಾರಿಯೂ ಜನಪರ ಕಾರ್ಯಕ್ರಮಗಳನ್ನು ಜಾರಿ ಗೊಳಿಸುವ ಮೂಲಕ ಬಡವರ, ಹಿಂದುಳಿದವರ ಶ್ರೇಯೋಭಿವೃದ್ಧಿ ಗಾಗಿ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳು ಜಾರಿಯಾಗಲಿವೆ. ಭ್ರಷ್ಟಾಚಾರ ರಹಿತ ಆಡಳಿತ ಕಾಂಗ್ರೆಸ್‌ನಿಂದ ಸಾಧ್ಯವಾಗಲಿದೆ ಎಂದರು.
ಕೆಪಿಸಿಸಿ ಕೋ-ಆರ್ಡಿನೇಟರ್‌ಗಳಾದ ಕಳ್ಳಿಗೆ ತಾರಾನಾಥ ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.