ಬೆಳಗಾವಿ: ಬಿಜೆಪಿ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭಕ್ಕೆ ಗಡಿ ಜಿಲ್ಲೆ ಬೆಳಗಾವಿ ಸಂಪೂರ್ಣ ಸಜ್ಜಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಜನಸೇವಕ ಸಮಾವೇಶ ಅದ್ಭುತ ಸಮಾವೇಶ ಆಗಲಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ವಿಧಾನ ಪರಿಷತ್ ಸದಸ್ಯ ಗಣೇಶ ಕಾರ್ಣಿಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ.17ರಂದು 4 ಗಂಟೆಗೆ ಸಮಾವೇಶ ನಡೆಯಲಿದ್ದು, ಐದು ಸಾವಿರ ಗ್ರಾಪಂ ಸದಸ್ಯರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಕರ್ನಾಟಕದಲ್ಲಿ 6 ತಂಡಗಳಾಗಿ ಈ ಬಾರಿ ಗ್ರಾಮ ಮಟ್ಟದಲ್ಲಿ ಕೆಲಸ ಮಾಡಿದ್ದೇವೆ. ಪ್ರಥಮ ಬಾರಿ ಶೇ.58 ಗ್ರಾಮ ಪಂಚಾಯತಿಗಳಲ್ಲಿ ಗೆದ್ದಿದ್ದೇವೆ. ಗೆದ್ದ ಅಭ್ಯರ್ಥಿಗಳಿಗೆ ಸೇವಕನ ಭಾವನೆ ಮೂಡಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಮ್ಮ ತಂಡಗಳು ರಾಜ್ಯದ 26 ಕೇಂದ್ರಗಳಲ್ಲಿ ಜನಸೇವಕ ಸಮಾವೇಶವನ್ನು ಯಶಸ್ವಿಯಾಗಿ ಮಾಡಿವೆ.
ಇದನ್ನೂ ಓದಿ:ವಿಶ್ವ ಸಿನಿಮಾ ವಿಭಾಗ : 50 ಚಿತ್ರಗಳ ದೊಡ್ಡ ಪಟ್ಟಿ !
ಮೈಸೂರಿನಲ್ಲಿ ಆರಂಭವಾದ ಈ ಸಮಾವೇಶ ಈಗ ಬೆಳಗಾವಿಯಲ್ಲಿ ಸಮಾರೋಪಗೊಳ್ಳಲಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಸೇರಿದಂತೆ ರಾಜ್ಯದ ಹಲವು ನಾಯಕರು ಭಾಗಿಯಾಗಲಿದ್ದಾರೆ ಎಂದರು.
ನೂತನ ಸಚಿವ ಉಮೇಶ ಕತ್ತಿ ಮಾತನಾಡಿ, ಜನಸೇವಕ ಸಮಾವೇಶ ಬಹಳ ಯಶಸ್ವಿಯಾಗಿ ಕೊನೆಗೊಳ್ಳಲಿದೆ. ಈ ಮೂಲಕ ಮುಂಬರುವ ಬೆಳಗಾವಿ ಲೋಕಸಭೆ ಉಪಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಸಹ ನಮ್ಮ ಪಕ್ಷ ಜಯಭೇರಿ ಬಾರಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಡಾ| ರಾಜೇಶ್ ನೇರ್ಲಿ ಉಪಸ್ಥಿತರಿದ್ದರು.