ಮೈಸೂರು: ಡಾ| ವಿಷ್ಣುವರ್ಧನ್ ಅವರ ಸ್ಮಾರಕ ಜ.29ರಂದು ಮೈಸೂರಿನಲ್ಲಿ ಉದ್ಘಾಟನೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕವನ್ನು ಉದ್ಘಾಟಿಸಿ, ಸಾಹಸ ಸಿಂಹನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಉದ್ಬೂರು ರಸ್ತೆಗೆ ಹೊಂದಿಕೊಂಡಿರುವ ಹಾಲಾಳು ಗ್ರಾಮದಲ್ಲಿ ವಿಷ್ಣು ಸ್ಮಾರಕದ ಕೆಲಸ ಭರದಿಂದ ಸಾಗಿದ್ದು, ದಿಲ್ಲಿಯ ರಾಜಪಥದಲ್ಲಿ ಇತ್ತೀಚೆಗೆ ಅನಾವರಣಗೊಂಡ ನೇತಾಜಿ ಪ್ರತಿಮೆಯ ರೂವಾರಿ, ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯಲ್ಲಿ ಆರು ಅಡಿ ಎತ್ತರದ ವಿಷ್ಣು ದಾದಾ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧವಾಗುತ್ತಿದೆ.
ಸ್ಮಾರಕಕ್ಕಾಗಿ ಸರಕಾರ ಸುಮಾರು 11 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, 2021ರಿಂದ ಕಾಮಗಾರಿ ಕೆಲಸ ಆರಂಭವಾಗಿದೆ. ಬೆಂಗಳೂರಿನ ಎಂ.9 ಕಂಪೆನಿಯ ನಿಶ್ಚಲ್ ಅವರು ಸ್ಮಾರಕದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಕೃಷ್ಣ ಶಿಲೆಯಲ್ಲಿ ಕೆತ್ತಲಾದ ವಿಷ್ಣುವಿನ ಪ್ರತಿಮೆ ಸುತ್ತಲೂ ವೃತ್ತಾಕಾರದ ಫೋಟೋ ಗ್ಯಾಲರಿ, ಗ್ಯಾಲರಿಯ ಇಬ್ಬದಿಯಲ್ಲೂ ವಿಷ್ಣುವರ್ಧನ್ ಅಭಿನಯದ ಸಿನೆಮಾಗಳ ಡಿಜಿಟಲ್ ಪೋಸ್ಟರ್ ಪ್ರದರ್ಶನ ಇರಲಿದೆ. ಸ್ಮಾರಕ 5 ಎಕ್ರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದೆ.